ಮುಂಬೈ: ಆಮಿರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಹಿಂದಿ ಸಿನಿಮಾ ಲಾಲ್ ಸಿಂಗ್ ಛಡ್ಡಾ (Laal Singh Chaddha) ಟ್ರೇಲರ್ ಭಾನುವಾರ (ಮೇ 29)ವಷ್ಟೇ ಬಿಡುಗಡೆಯಾಗಿದೆ. ನಿನ್ನೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆಯೇ ಈ ಸಿನಿಮಾದ ಟ್ರೇಲರ್ ಕೂಡ ರಿಲೀಸ್ ಆಗಿದ್ದು ವಿಶೇಷ. ಆದರೆ ಟ್ರೇಲರ್ ಬಿಡುಗಡೆಯಾದ ಕೆಲವೇ ಹೊತ್ತಲ್ಲಿ ಸೋಷಿಯಲ್ ಮೀಡಿಯಾದಲ್ಲಿ Boycott LaalSingh Chaddha (ಲಾಲ್ ಸಿಂಗ್ ಛಡ್ಡಾ ಚಿತ್ರವನ್ನು ಬಹಿಷ್ಕರಿಸಿ) ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಅಂದರೆ ಆಮೀರ್ ಖಾನ್ ಅಭಿನಯದ ಈ ಸಿನಿಮಾವನ್ನು ನೋಡಬೇಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
1994ರ ಹಾಲಿವುಡ್ ಸಿನಿಮಾ ಫಾರೆಸ್ಟ್ ಗಂಪ್‌ನ ರಿಮೇಕ್ ಆಗಿರುವ ಲಾಲ್ ಸಿಂಗ್ ಛಡ್ಡಾವನ್ನು ನಿರ್ದೇಶನ ಮಾಡಿದ್ದು ಅದ್ವೈತ್ ಚಂದನ್. ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ, ಇದೇ ವರ್ಷ 2022ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಸಿನಮಾದಲ್ಲಿ ತೆಲುಗು ನಟ ನಾಗಚೈತನ್ಯ ಕೂಡ ಅಭಿನಯಿಸಿದ್ದು, ಇದು ಅವರ ಮೊದಲ ಹಿಂದಿ ಸಿನಿಮಾ. ಹಾಗಾಗಿ ಸಿನಿಪ್ರಿಯರಲ್ಲಿ ಕುತೂಹಲ ತುಸು ಜಾಸ್ತಿಯಾಗಿಯೇ ಇದೆ. ಇದೇ ಹೊತ್ತಲ್ಲಿ, ಒಂದು ವರ್ಗದ ಜನರು ಈಗಿನಿಂದಲೇ ಲಾಲ್ ಸಿಂಗ್ ಛಡ್ಡಾ ಸಿನಿಮಾ ಬಹಿಷ್ಕರಿಸುವಂತೆ ಸೋಷಿಯಲ್ ಮೀಡಿಯಾ ಮೂಲಕ ಕರೆ ನೀಡುತ್ತಿದ್ದಾರೆ. ಈ ಅಭಿಯಾನ ಟ್ರೆಂಡ್ ಕೂಡ ಆಗಿದೆ. ಟ್ರೇಲರ್ ವೀಕ್ಷಿಸಿಲು ಇಲ್ಲಿ ಕ್ಲಿಕ್ ಮಾಡಿ.
ಇದರ ಮೂಲ ಸಿನಿಮಾ ಫಾರೆಸ್ಟ್ ಗಂಪ್ ಇನ್ನೂ ಒಟಿಟಿಯಲ್ಲಿ ಲಭ್ಯವಿದೆ. ಸ್ವಂತ ಕತೆ ಮಾಡುವ ಬದಲು ಹಾಲಿವುಡ್ ರಿಮೇಕ್ ಮಾಡುತ್ತಿದ್ದೀರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಹಾಗೇ, ಓಟಿಟಿಯಲ್ಲಿ ಆರಾಮಾಗಿ ಸಿನಿಮಾ ನೋಡಬಹುದು. ಅದರ ರಿಮೇಕ್ ನೋಡಲು ಯಾಕೆ ಹಣ ಸುರಿಯಬೇಕು ಎಂದೂ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅದರೊಂದಿಗೆ ಈ ಹಿಂದೆ ಆಮಿರ್ ಖಾನ್ ನೀಡಿದ ಕೆಲವು ವಿವಾದಾತ್ಮಕ ಹೇಳಿಕೆಗಳನ್ನೂ ಇಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 2015ರಲ್ಲಿ ಆಮಿರ್ ಖಾನ್ ಅಸಹಿಷ್ಣುತೆ ಬಗ್ಗೆ ಮಾತನಾಡಿ ದೇಶದ ಜನರ ಕೋಪಕ್ಕೆ ಗುರಿಯಾಗಿದ್ದರು. ಭಾರತದಲ್ಲಿ ತೀವ್ರ ಅಸಹಿಷ್ಣುತೆ ಇದೆ. ನಮ್ಮ ಕುಟುಂಬಕ್ಕೂ ಅಭದ್ರತೆ ಕಾಡುತ್ತಿದೆ ಎಂದು ಹೇಳಿದ್ದರು. ಆಗಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಮಿರ್ ಖಾನ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಈಗ ಅವರ ಲಾಲ್ ಸಿಂಗ್ ಛಡ್ಡಾ ಸಿನಿಮಾ ಟ್ರೇಲರ್ ಬಿಡುಗಡೆಯಾದ ಹೊತ್ತಲ್ಲಿ, ಮತ್ತೊಮ್ಮೆ ಅದೇ ಅಸಹಿಷ್ಣುತೆ ವಿಚಾರವನ್ನೇ ಇಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಕರೀನಾ ಕಪೂರ್ ಕೂಡ ಟ್ರೋಲ್
ಕರೀನಾ ಕಪೂರ್ ಬಗ್ಗೆಯೂ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ) ನಡೆಯುತ್ತಿದೆ ಎಂಬ ಚರ್ಚೆ, ಹಿಂದೆ ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟ ಬಳಿಕ ಜೋರಾಗಿ ನಡೆಯುತ್ತಿತ್ತು. ಅಲ್ಲಿ ತಮಗೆ ಬೇಕಾದವರನ್ನು ಮಾತ್ರ ಬೆಳೆಸುತ್ತಾರೆ. ಹೀಗಾಗಿಯೇ ಸುಶಾಂತ್‌ರಂತ ಹಲವು ನಟರು ಪ್ರತಿಭೆಯಿದ್ದರೂ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಅನೇಕರು ಹೇಳಿದ್ದರು. ಆ ವೇಳೆ ಕರೀನಾ ಕಪೂರ್ ಹೀಗೊಂದು ಪ್ರತಿಕ್ರಿಯೆ ನೀಡಿದ್ದರು. “ನನ್ನ ಸಿನಿ ಬದುಕು ಶುರುವಾಗಿ 21 ವರ್ಷ ಕಳೆಯಿತು. ನಾನಿಷ್ಟು ವರ್ಷ ಮಾಡಿದ ಸಾಧನೆ ಯಾವುದೇ ನೆಪೋಟಿಸಂನಿಂದ ಆಗಿದ್ದಲ್ಲ. ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ ಎಂಬುದನ್ನು ನಾನು ನಮ್ಮ ಸೂಪರ್‌ಸ್ಟಾರ್‌ಗಳ ಮಕ್ಕಳ ಪಟ್ಟಿಯನ್ನು ಕೊಡುವ ಮೂಲಕ ವಿವರಿಸಬಲ್ಲೆ. ನೆಪೋಟಿಸಂ ಇದೆ ಎಂದು ನಮ್ಮನ್ನು ದೂಷಿಸಬೇಡಿ. ನಾವು ಸ್ವಜನಪಕ್ಷಪಾತದಿಂದ ಉದ್ಧಾರವಾದ ಮಕ್ಕಳು ಎಂದು ಭಾವಿಸುವವರು ನಮ್ಮ ಸಿನಿಮಾವನ್ನೇ ನೋಡಬೇಡಿ” ಎಂದಿದ್ದರು. ಈಗ ನೆಟ್ಟಿಗರು ಅದೇ ಮಾತನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ʼಕರೀನಾ ಹೇಳಿದ್ದಾರೆ ಅವರ ಸಿನಿಮಾ ನೋಡುವುದು ಬೇಡವೆಂದು. ನಾವ್ಯಾಕೆ ಅವರ ಸಿನಿಮಾ ನೋಡೋಣ, ಅದೇ ಹಣವನ್ನು ಬಡ ಮಕ್ಕಳಿಗೆ ಊಟ ನೀಡಲು ಖರ್ಚು ಮಾಡೋಣʼ ಎಂದು ಹೇಳುತ್ತಿದ್ದಾರೆ.
ಆಮೀರ್ ಖಾನ್ ತುಂಬ ಕಾದು, ವೈಯಕ್ತಿಕವಾಗಿ ಇಂಟರೆಸ್ಟ್ ತೆಗೆದುಕೊಂಡಿರುವ ಸಿನಿಮಾ ಈ ಲಾಲ್ ಸಿಂಗ್ ಛಡ್ಡಾ. ಆಗಸ್ಟ್ 11ಕ್ಕೆ ತೆರೆಕಾಣಲು ಸಜ್ಜಾಗಿದೆ. ಆದರೆ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಬಹಿಷ್ಕಾರದ ಮಾತುಗಳು ಕೇಳಿಬರುತ್ತಿದ್ದು, ಇಲ್ಲಿವೆ ನೋಡಿ ನೆಟ್ಟಿಗರ ಒಂದಷ್ಟು ಟ್ವೀಟ್‌ಗಳು..
ಇದನ್ನೂ ಓದಿ: ಕರಣ್ ಜೋಹರ್ @ 50: ಯಶ್ ರಾಜ್ ಸ್ಟುಡಿಯೋದಲ್ಲಿ ಬಾಲಿವುಡ್ ನೈಟ್ಸ್