Site icon Vistara News

ಬ್ರಹ್ಮಾಸ್ತ್ರ: ರಣಬೀರ್‌ ದೇವಸ್ಥಾನದೊಳಗೆ ಚಪ್ಪಲಿ ಹಾಕಿದನೇ?

brahmastra

ಬಹುನಿರೀಕ್ಷೆಯ ಬಾಲಿವುಡ್‌ ಚಿತ್ರ ʻಬ್ರಹ್ಮಾಸ್ತ್ರ, ಪಾರ್ಟ್‌ ೧-ಶಿವʼ ನಿರ್ದೇಶಕ ಆಯಾನ್‌ ಮುಖರ್ಜಿ ಚಿತ್ರದ ಕುರಿತು ಎದ್ದಿದ್ದ ಚಪ್ಪಲಿ ವಿವಾದಗಳಿಗೆ ಅಧಿಕೃತವಾಗಿ ಸ್ಷಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ. ಇತ್ತೀಚೆಗಷ್ಟೆ ವಿವಾಹ ಜೀವನಕ್ಕೆ ಕಾಲಿಟ್ಟ ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಜೋಡಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಚಿತ್ರದ ನಾಯಕ ರಣಬೀರ್‌ ಕಪೂರ್‌ ಅವರ ಎಂಟ್ರಿ ದೃಶ್ಯದಲ್ಲಿ ಅವರು ದೇವಸ್ಥಾನದ ಗಂಟೆಯನ್ನು ಬಡಿದು ಒಳಗೆ ಕಾಲಿಡುವ ಸಂದರ್ಭ ಶೂ ಹಾಕಿಕೊಂಡಿದ್ದಾರೆ ಎಂಬುದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ʻಬಾಯ್ಕಾಟ್‌ ಬ್ರಹ್ಮಾಸ್ತ್ರʼ ಹ್ಯಾಶ್‌ಟ್ಯಾಗ್‌ನಡಿ ಟ್ವಿಟರ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ವೈರಲ್‌ ಆಗಿದ್ದವು.

ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ನಲ್ಲಿ, ತನ್ನ ಅದ್ದೂರಿತನ ಹಾಗೂ ಮೈನವಿರೇಳಿಸುವ ವಿಎಫ್‌ಎಕ್ಸ್‌ ಮೂಲಕ ಇದು ಭಾರೀ ಸುದ್ದಿ ಮಾಡಿತ್ತು. ಚಿತ್ರದ ಟ್ರೈಲರ್‌ ನೋಡಿ ಬಾಲಿವುಡ್‌ನಲ್ಲಿ ಇಂತಹ ವಿಭಿನ್ನ ಪ್ರಯತ್ನದ ಚಿತ್ರ ಬರುತ್ತಿರುವುದಕ್ಕೆ ವ್ಯಾಪಕ ಪ್ರಶಂಸೆಗಳು ಬಂದಿದ್ದವು.

ಅಮಿತಾಬ್‌ ಬಚ್ಚನ್‌ ಧ್ವನಿಯಿಂದ ಟ್ರೈಲರ್‌ ಆರಂಭವಾಗುತ್ತಿದ್ದು, ಪುರಾತನ ಕಾಲದಿಂದಲೂ ಜಲ, ವಾಯು ಅಗ್ನಿಗಳಂಥ ಪಂಚತತ್ವಗಳ ಶಕ್ತಿಗಳು ಅಸ್ತ್ರಗಳಲ್ಲಿದ್ದು, ಈ ಅಸ್ತ್ರಗಳೆಲ್ಲವುಗಳ ಮುಖ್ಯ ದೇವರ ಕಥೆ ಇದಾಗಿದೆ. ಅದುವೇ ಬ್ರಹ್ಮಾಸ್ತ್ರ” ಎಂಬ ಪೀಠಿಕೆಯಿದೆ. ಈ ಸಂದರ್ಭ ನಾಯಕ ರಣಬೀರ್‌ ಎಂಟ್ರಿಯ ದೃಶ್ಯವೂ ಇದೆ. ಅದೊಂದು ದೃಶ್ಯವೇ ಈ ಎಲ್ಲ ವಿವಾದಕ್ಕೆ ಮೂಲ ಕಾರಣವಾಗಿದೆ.

ಈಗ ನಿರ್ದೇಶಕ ಆಯಾನ್‌ ಮುಖರ್ಜಿ ಅವರು ಈ ವಿವಾದ ಕುರಿತಂತೆ ಮೌನ ಮುರಿದಿದ್ದು, ಸಿನಿಮಾಪ್ರಿಯರು ಈ ಕುರಿತು ವೃಥಾ ಆಕ್ರೋಶಕ್ಕೊಳಗಾಗುವುದು ಬೇಡವೆಂದು ಮನವಿ ಮಾಡಿದ್ದಾರೆ. ಚಿತ್ರದ ನಿರ್ದೇಶಕನಾಗಿ ನನಗಿಲ್ಲಿ ಜನರ ಆಕ್ರೋಶ ನನಗೆ ಅರ್ಥವಾಗುತ್ತದೆ. ಆದರೆ, ನಾಯಕ ಇಲ್ಲಿ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಶೂ ಹಾಕಿಕೊಂಡು ಗಂಟೆ ಬಡಿದಿಲ್ಲ. ಬದಲಾಗಿ ಇದು ನಡೆದುದು ದುರ್ಗಾಪೂಜೆಯ ಪೆಂಡಾಲಿನ ಮುಖ್ಯದ್ವಾರದಲ್ಲಿ ಎಂದಿದ್ದಾರೆ.

ಇದನ್ನೂ ಓದಿ: Brahmastra Movie : ತೆರೆಯ ಮೇಲೆ ಮೊದಲ ಬಾರಿಗೆ ʼRaliaʼ ಚುಂಬನ : ಫ್ಯಾನ್‌ಗಳು ಫುಲ್‌ ಖುಷ್‌

ಅಷ್ಟೇ ಅಲ್ಲದೆ, ಬಹಳ ಸಣ್ಣವನಿದ್ದಾಗಿನಿಂದಲೂ ನಾನು ಪ್ರತಿ ದುರ್ಗಾ ಪೂಜೆಯಲ್ಲೂ ಭಾಗಿಯಾಗಿದ್ದೇನೆ. ನನಗೆ ತಿಳಿದ ಹಾಗೆ ಇಲ್ಲಿ ನಾವು ಪೆಂಡಾಲಿನ ಒಳಗೆ ಹೋಗುವ ಸಂದರ್ಭ ಶೂ ಕಳಚಿಡುವುದಿಲ್ಲ. ಕೇವಲ ಮೂರ್ತಿಯ ದರ್ಶನಕ್ಕೆ ವೇದಿಕೆಗೆ ತೆರಳುವಾಗ ಚಪ್ಪಲಿ ಕಳಚುತ್ತೇವೆ. ಹಾಗಾಗಿ ಇಲ್ಲಿ ವಿವಾದಕ್ಕೆ ಗುರಿಯಾಗುವಂಥ ಯಾವುದೇ ದೃಶ್ಯಗಳಿಲ್ಲ ಎಂದಿದ್ದಾರೆ.

ಬ್ರಹ್ಮಾಸ್ತ್ರ ಚಿತ್ರ ಭಾರತೀಯ ಸಂಸ್ಕೃತಿ, ಆಚರಣೆ ಪರಂಪರೆಗಳ ಆಧಾರದಲ್ಲಿ ರಚಿತವಾದ ಚಿತ್ರವಾಗಿದ್ದು, ಇಂಥ ಗಟ್ಟಿ ಆಧಾರದ ಬುಡವನ್ನೇ ಅಲ್ಲಾಡಿಸುವಂಥ ದೃಶ್ಯಗಳು ಚಿತ್ರದಲ್ಲಿ ಹೇಗಿದ್ದೀತು ಎಂದಿರುವ ಅವರು, ದೇಶದ ಸಂಸ್ಕೃತಿಯ ಮೇಲಿನ ಅಪಾರ ಗೌರವದಿಂದ ಈ ಚಿತ್ರ ನಿರ್ದೇಶಿಸಿದ್ದೇನೆ. ಪ್ರತಿ ಭಾರತೀಯನಿಗೂ ಚಿತ್ರ ವೀಕ್ಷಣೆಯಿಂದ ಇಂಥದ್ದೇ ಅನುಭವವಾಗಲಿದೆ ಎಂಬ ಭರವಸೆಯಿದೆ ಎಂದಿದ್ದಾರೆ.

ಬ್ರಹ್ಮಾಸ್ತ್ರ ಟ್ರಯಾಲಜಿ ಮೂರು ಭಾಗಗಳಲ್ಲಿ ಬರಲಿದ್ದು ಇದು ಒಂದನೇ ಭಾಗವಾಗಿದೆ. ಚಿತ್ರದಲ್ಲಿ ದಿಗ್ಗಜರಾದ ಅಮಿತಾಬ್‌ ಬಚ್ಚನ್‌, ಮೌನಿ ರಾಯ್‌, ನಾಗಾರ್ಜುನ ಅಕ್ಕಿನೇನಿ, ಡಿಂಪಲ್‌ ಕಪಾಡಿಯಾ ಮೊದಲಾದವರಿದ್ದಾರೆ. ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಕೂಡಾ ಚಿತ್ರದಲ್ಲೊಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಪ್ಯಾನ್‌ ಇಂಡಿಯಾ ಚಿತ್ರ ಇದಾಗಿದ್ದು, ಸೆಪ್ಟೆಂಬರ್‌ ೯ರಂದು ದೇಶಾದ್ಯಂತ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ವೇಕ್‌ ಅಪ್‌ ಸಿದ್‌, ಯೇ ಜವಾನಿ ಹೇ ದಿವಾನಿಯಂತಹ ಚಿತ್ರಗಳನ್ನು ನೀಡಿರುವ ನಿರ್ದೇಶಕ ಆಯಾನ್‌ ಮುಖರ್ಜಿ ಚಿತ್ರದ ಮೇಲೆ ಭಾರೀ ಭರವಸೆ ಹೊಂದಿದ್ದಾರೆ.

ಇದನ್ನೂ ಓದಿ: ಬ್ರಹ್ಮಾಸ್ತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ಆಲಿಯಾ-ರಣಬೀರ್‌

Exit mobile version