ಫ್ರಾನ್ಸ್‌ನ ಕೇನ್ಸ್ ನಗರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಿತ್ರೋತ್ಸವದ ಮುಖ್ಯ ತೀರ್ಪುಗಾರರ ತಂಡದಲ್ಲಿ ದೀಪಿಕಾ ಪಡುಕೋಣೆ ಸ್ಥಾನ ಪಡೆದಿದ್ದಾರೆ. ಮೇ 17ರಿಂದ 28ರವರೆಗೆ 75ನೇ ಆವೃತ್ತಿಯ ಚಿತ್ರೋತ್ಸವ ನಡೆಯಲಿದೆ.
ಇತ್ತೀಚೆಗಷ್ಟೆ TIME100 ಇಂಪ್ಯಾಕ್ಟ್ ಗೌರವಕ್ಕೆ ಪಾತ್ರರಾದ ದೀಪಿಕಾ ಇದೀಗ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೀಪಿಕಾ ಜತೆಗೆ ನಿರ್ದೇಶಕಿ-ನಟಿ-ನಿರ್ಮಾಪಕಿ ರೆಬೆಕಾ ಹಾಲ್, ನಿರ್ದೇಶಕ-ಚಿತ್ರಕಥೆಗಾರ ಜೆಫ್ ನಿಕೋಲಸ್, ನಿರ್ದೇಶಕ-ನಿರ್ಮಾಪಕ-ಚಿತ್ರಕಥೆಗಾರ ಅಸ್ಗರ್ ಫರ್ಹಾದಿ, ನಟ-ನಿರ್ದೇಶಕ ಜಾಸ್ಮಿನ್ ಟ್ರಿಂಕಾ, ನಟ ನೊವೊಮಿ ರಾಪೇಸ್ ಜ್ಯೂರಿಯಾಗಿರಲಿದ್ದಾರೆ. ತೀರ್ಪುಗಾರರ ಸಮಿತಿ ಅಧ್ಯಕ್ಷರಾಗಿ ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಜೊತೆಗೆ ಚಿತ್ರಕಥೆಗಾರ ಜೋಕಿಮ್ ಟ್ರೈಯರ್ ಆಯ್ಕೆಯಾಗಿದ್ದಾರೆ.
ಈ ವರ್ಷ ಟಾಪ್ ಗನ್ ಸೀಕ್ವೆಲ್ ಮೇವರಿಕ್, ಬಾಜ್ ಲುಹ್ರ್‌ಮನ್‌ನ ಎಲ್ವಿಸ್ ಬಯೋಪಿಕ್ ಮತ್ತು ಡೇವಿಡ್ ಕ್ರೋನೆನ್‌ಬರ್ಗ್‌ನ ಕ್ರೈಮ್ಸ್ ಆಫ್ ದಿ ಫ್ಯೂಚರ್‌ನಂತಹ ಚಲನಚಿತ್ರಗಳು ಸ್ಪರ್ಧೆಯಲ್ಲಿವೆ.
ದೀಪಿಕಾಗೂ ಮುನ್ನ 8 ಭಾರತೀಯರು ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿದ್ದಾರೆ. 2013ರಲ್ಲಿ ವಿದ್ಯಾ ಬಾಲನ್ ನಂತರ ಯಾವುದೇ ಭಾರತೀಯರನ್ನು ಸಮಿತಿಯಲ್ಲಿ ಸೇರ್ಪಡೆ ಮಾಡಿರಲಿಲ್ಲ. ಇದೀಗ 9 ವರ್ಷದ ನಂತರ ದೀಪಿಕಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 2003ರಲ್ಲಿ ಐಶ್ವರ್ಯ ರೈ ಜ್ಯೂರಿ ಆಗಿ ಕಾರ್ಯನಿರ್ವಹಿಸಿದ್ದರು. ಐಶ್ವರ್ಯ ನಂತರ ಕೇನ್ಸ್ ಚಿತ್ರೋತ್ಸವಕ್ಕೆ ಆಯ್ಕೆಯಾದ ಕರ್ನಾಟಕ ಮೂಲದ ಎರಡನೇ ನಟಿ ದೀಪಿಕಾ ಪಡುಕೋಣೆ.
ಜ್ಯೂರಿ ಆಗಿದ್ದ ಭಾರತೀಯರು
ದೀಪಿಕಾಗೂ ಮುನ್ನ 8 ಭಾರತೀಯರು ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿ ಕಾರ್ಯನಿರ್ವಹಿಸಿದ್ದಾರೆ.
- ದೇಶದ ಪ್ರಸಿದ್ಧ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ 1982ರ ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿದ್ದರು
- ಸಲಾಂ ಬಾಂಬೆ ನಿರ್ದೇಶಕಿ ಮೀರಾ ನಾಯರ್ 1990ರ ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿದ್ದರು
- ಲೇಖಕಿ ಅರುಂಧತಿ ರಾಯ್ 2000ನೇ ಇಸವಿಯ ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿದ್ದರು
- ಮಾಜಿ ವಿಶ್ವಸುಂದರಿ ಹಾಗೂ ನಟಿ ಐಶ್ವರ್ಯ ರೈ 2003ರ ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿದ್ದರು
- ನಿರ್ದೇಶಕಿ ನಂದಿತಾ ದಾಸ್ 2005ರ ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿದ್ದರು
- ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ 2009ರ ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿದ್ದರು
- ಖ್ಯಾತ ನಟ ಶೇಖರ್ ಕಪೂರ್ 2010ರ ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿದ್ದರು
- ನಟಿ ವಿದ್ಯಾಬಾಲನ್ 2013ರ ಕೇನ್ಸ್ ಚಿತ್ರೋತ್ಸವದ ಜ್ಯೂರಿ ಆಗಿದ್ದರು