2012ರಲ್ಲಿ ಬಿಡುಗಡೆಯಾಗಿದ್ದ ಒಎಂಜಿ: ಓ ಮೈ ಗಾಡ್ (OMG Oh My God) ಸಿನಿಮಾದಲ್ಲಿ ಶ್ರೀಕೃಷ್ಣನ ಪಾತ್ರ ನಿಭಾಯಿಸಿದ್ದ ನಟ ಅಕ್ಷಯ್ಕುಮಾರ್ (Akshay Kumar) ಈಗ OMG 2 ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ವಿಶೇಷ ಎಂದರೆ 20 ಕಟ್ ಬಿದ್ದಿದೆ. ಜತೆಗೆ ಸಿನಿಮಾಗೆ ʻಎʼ ಸರ್ಟಿಫಿಕೇಟ್ ನೀಡಲಾಗಿದೆ.
ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ ಚಲನಚಿತ್ರದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) 15-20 ಕಟ್ ಸೂಚಿಸಿದೆ. ಈ ಬದಲಾವಣೆಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಚಿತ್ರತಂಡ ಯೋಜಿಸಿದೆ ಎಂದು ವರದಿಯಾಗಿದೆ. ವಿವಾದಕ್ಕೆ ಕಾರಣವಾಗಿರುವ ದೃಶ್ಯಗಳು ಮತ್ತು ಸಂಭಾಷಣೆಗಳ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.
‘ಬಾಲಿವುಡ್ ಹಂಗಾಮ’ ವರದಿ ಮಾಡಿರುವ ಪ್ರಕಾರ, ದೃಶ್ಯ ಹಾಗೂ ಸಂಭಾಷಣೆ ಮ್ಯೂಟ್ ಸೇರಿ 20 ಕಡೆಗಳಲ್ಲಿ ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ. ಆದರೆ, ಇದಕ್ಕೆ ಸಿನಿಮಾ ತಂಡ ಸಿದ್ಧವಿಲ್ಲ ಎನ್ನಲಾಗುತ್ತಿದೆ. ಇದರ ಜತೆಗೆ ಸಿನಿಮಾಗೆ ಎ ಪ್ರಮಾಣಪತ್ರ ಸಿಕ್ಕಿದ್ದು, 18 ವರ್ಷದ ಕೆಳಗಿನವರು ಚಿತ್ರವನ್ನು ನೋಡುವಂತಿಲ್ಲ.
ನಟ ಅಕ್ಷಯ್ ಕುಮಾರ್ ಇದೀಗ OMG 2ನಲ್ಲಿ ಶಿವನಾಗಿದ್ದಾರೆ. ಇದೂ ಕೂಡ ವಿಡಂಬನಾತ್ಮಕ ಸಿನಿಮಾವೇ ಆಗಿದ್ದು, OMG-Oh My God ಸಿನಿಮಾದ ಮುಂದುವರಿದ ಭಾಗವಾಗಿದೆ. ಕಳೆದ ವಾರ ಇದರ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಮತ್ತು ಅರುಣ್ ಗೋವಿಲ್ ಕೂಡ ಅಭಿನಯಿಸಿದ್ದಾರೆ. ಸಿನಿಮಾದ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಅಕ್ಷಯ್ ಕುಮಾರ್ ಅವರ ಶಿವನ ಪಾತ್ರದ ಬಗ್ಗೆ ಇಂಟರ್ನೆಟ್ನಲ್ಲಿ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಸಿನಿಮಾ ಇದು ಎಂಬ ವಿವಾದ ಸಣ್ಣದಾಗಿ ಶುರುವಾಗಿದೆ. ಜುಲೈ 31ರಂದು ‘ಒಎಂಜಿ 2’ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ.
ಇದನ್ನೂ ಓದಿ: OMG ಸಿನಿಮಾ ಮಾಡುವಾಗ ನಟ ಅಕ್ಷಯ್ ಕುಮಾರ್ ನಾನ್ವೆಜ್ ತ್ಯಜಿಸಿದ್ದರಂತೆ; ಕಾರಣ ಅವರ ಅಮ್ಮ!
OMG ಸಿನಿಮಾ ಮಾಡುವಾಗ ನಟ ಅಕ್ಷಯ್ ಕುಮಾರ್ ನಾನ್ವೆಜ್ ತ್ಯಜಿಸಿದ್ದರಂತೆ
ಅಕ್ಷಯ್ ಕುಮಾರ್ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. OMG-Oh My God ಸಿನಿಮಾದಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿದ್ದು ನನ್ನ ಪಾಲಿಗೆ ಅತ್ಯಂತ ಸವಾಲಾಗಿತ್ತು ಎಂದೂ ಅವರು ತಿಳಿಸಿದ್ದರು. ಅದರೊಂದಿಗೆ ತಾನು ಮಾಂಸಾಹಾರ ಬಿಟ್ಟಿದ್ದನ್ನೂ, ಅದಕ್ಕೆ ಕಾರಣವನ್ನೂ ಹೇಳಿಕೊಂಡಿದ್ದರು. ಅಕ್ಷಯ್ ಕುಮಾರ್ ಅವರು OMG-Oh My God ಸಿನಿಮಾದಲ್ಲಿ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಗೊತ್ತಾದ ತಕ್ಷಣ ಅವರ ತಾಯಿ ಖುಷಿಪಟ್ಟಿದ್ದರಂತೆ. ಅವರು ಶ್ರೀಕೃಷ್ಣನ ಭಕ್ತೆಯಾಗಿದ್ದರಿಂದ, ಮಾಂಸಾಹಾರ ಬಿಟ್ಟುಬಿಡು ಎಂದು ಮಗ ಅಕ್ಷಯ್ ಕುಮಾರ್ಗೆ ಹೇಳಿದ್ದರಂತೆ. ಅಮ್ಮ ಹೇಳಿದ್ದಾರೆ ಎಂಬ ಕಾರಣಕ್ಕೆ ಅಕ್ಷಯ್ ಕುಮಾರ್ 2012ರಲ್ಲಿ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗುವವರೆಗೂ ನಾನ್ವೆಜ್ ಮುಟ್ಟಿರಲಿಲ್ಲವಂತೆ. ಶ್ರದ್ಧೆಯಿಂದ ಅವರ ಮಾತನ್ನು ಪಾಲಿಸಿದ್ದೆ. ಈ ಬಗ್ಗೆ ನನಗೆ ತೃಪ್ತಿಯಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದರು.