ಬೆಂಗಳೂರು : ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿ (ಜೂನ್ 7) ಎರಡು ವರ್ಷ ಸಂದಿವೆ. ಕನಕಪುರ ರಸ್ತೆ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಚಿರು ಸಮಾದಿ ಇದ್ದು, ಎರಡನೇ ಪುಣ್ಯ ತಿಥಿಯಂದು ಅಲ್ಲಿಗೆ ತೆರಳಿ ಕುಟುಂಬಸ್ಥರು ಇಂದು ಪೂಜೆ ಸಲ್ಲಿಸಿದ್ದಾರೆ.
ಕನಕಪುರ ರಸ್ತೆಯ ನೆಲಗುಳಿಯ ಧ್ರುವ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿಗೆ ಕುಟುಂಬಸ್ಥರಿಂದ
ಪೂಜೆ ನಡೆದಿದ್ದು, ಮೇಘನಾ ರಾಜ್ ಸರ್ಜಾ,ಅರ್ಜುನ್ ಸರ್ಜಾ, ದ್ರುವ ಸರ್ಜಾ ಹಾಗು ಕುಟುಂಬಸ್ಥರು ಭಾಗಿಯಾಗಿದ್ದರು.
ಚಿರು ಅಂತ್ಯ ಸಂಸ್ಕಾರ ಮಾಡಿದ್ದ ಸ್ಥಳದಲ್ಲಿ ಅಮೃತ ಶಿಲೆಯಲ್ಲಿ ಸಮಾಧಿ ಕಟ್ಟಿಸಿರುವ ಧ್ರುವ ಸರ್ಜಾ ,ಸಮಾಧಿ ಬಳಿ ಚಿರು ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಕೆತ್ತನೆ ಮಾಡಲಾಗಿದೆ. ಅಭಿಮಾನಿಗಳಿಗೂ ಚಿರು ಸಮಾಧಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೇಘನಾ ಭಾವುಕ ಮಾತು
ಚಿರುವಿನ ಪುಣ್ಯತಿಥಿಯಂದು ಕಳೆದ ವರ್ಷ ಮೇಘನಾ ಭಾವುಕ ಮಾತುಗಳನ್ನು ಹಂಚಿಕೊಂಡಿದ್ದರು. ‘ನೀನು ದೇವರ ಮನೆಗೆ ಹೋಗಿ ವರ್ಷವಾಯಿತು. ಎಷ್ಟು ಬೇಗ ಒಂದು ವರ್ಷ! ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರು ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರ ಗೌರವ. ಜನನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ, ಉದಾರಗುಣ ಮತ್ತು ಅಜಾತ ಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು. ಆ ಪ್ರಾರ್ಥನೆಯಲ್ಲೇ ಎಂದೆಂದೂ ನಿನ್ನ ನೆನಪಿನಲ್ಲೇ,’ ಎಂದು ಮೇಘನಾ ಬರೆದುಕೊಂಡಿದ್ದರು.
ಅಸ್ತಂಗತನಾದ ಚಿರು
ಒಂದರ ಮೇಲೆ ಒಂದು ಸಿನಿಮಾಗಳು ಇದ್ದರೂ ಕೊರೋನಾ ಲಾಕ್ಡೌನ್ನಿಂದಾಗಿ ಚಿರು ಮನೆಯಲ್ಲೇ ಇರುವಂತಾಗಿತ್ತು. ಅಲ್ಲದೆ ಆಗಲೇ ಮೇಘನಾ ಗರ್ಭಿಣಿ ಎಂಬ ವಿಷಯವೂ ತಿಳಿದಿತ್ತು. ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಚಿರು ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೂ ಸಹ ಚಿರು ಬದುಕಲಿಲ್ಲ. ಚಿರು ಅಗಲಿಕೆಯ ಸುದ್ದಿ ಇಡೀ ಕುಟುಂಬ ಹಾಗೂ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡಿದಿತ್ತು.
ಇದನ್ನೂ ಓದಿ | ಲೊಡ್ಡೆ ಸಿನಿಮಾ ಮಾಡಿ ಲಾಸ್ ಆದ ನಿರ್ಮಾಪಕ ವಂಚನೆ ಪ್ರಕರಣದಲ್ಲಿ ಅಂದರ್
ಮೇಘನಾ , ಚಿರು ಜರ್ನಿ
ಮೇಘನಾ ರಾಜ್ ಆಗಾಗ ಚಿರು ಫೋಟೋವನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಮೇಘನಾ ರಾಜ್ ಹಾಗೂ ಚಿರು ಅವರದ್ದು ಹತ್ತು ವರ್ಷಗಳ ಸ್ನೇಹ.
ಮೊದಲು ಸ್ನೇಹಿತರಾಗಿದ್ದ ಈ ಜೋಡಿ ನಂತರದಲ್ಲಿ ಪ್ರೀತಿಸಲಾರಂಭಿಸಿದರು. ಪ್ರೀತಿಯ ವಿಷಯ ಮನೆಯವರಿಗೆ ತಿಳಿಸಿ, ಹಿರಿಯ ಸಮ್ಮತಿ ಮೇರೆಗೆ ಮದುವೆಯಾಗಿದ್ದರು. ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯಂತೆ ಮದುವೆ ನೆರವೇರಿತ್ತು. 2018 ಏ. 29ರಂದು ಚಿರು ಹಾಗೂ ಮೇಘನಾ ಅವರ ಮದುವೆ ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆಂಥೋನೀಸ್ ಫೈರಿ ಚರ್ಚ್ನಲ್ಲಿ ನಡೆದಿತ್ತು.
ಮೇಘನಾ ಬಾಳಿನಲ್ಲಿ ಜೂನಿಯರ್ ಚಿರು
ಕುಟುಂಬದವರ ಬಾಳಿನಲ್ಲಿ ಖುಷಿ ತಂದಿದ್ದು ಜೂನಿಯರ್ ಚಿರು. ಮೇಘನಾ ಅಕ್ಟೋಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಆಗಲೇ ಕುಟುಂಬದವರು ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಖುಷಿ ಪಟ್ಟರು. ಸದ್ಯ ಮೇಘನಾ ರಾಜ್ ಮಗುವಿನ ಲಾಲನೆ ಹಾಗೂ ಪಾಲನೆ ಜೊತೆಗೆ ಸಿನಿಮಾ ನಟನೆ, ಕಿರುತೆರೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ನಟ ಚಿರಂಜೀವಿ ಹಾಗೂ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಸ್ಟಾರ್ ಕಿಡ್ಸ್‌ಗಳ ಪೈಕಿಯಲ್ಲಿ ಹೆಚ್ಚು ಆಕ್ಟಿವ್ ಹಾಗೂ ಹೆಚ್ಚು ಅಭಿಮಾನಿಗಳ ಪ್ರೀತಿ ಪಡೆದಿದ್ದಾನೆ. ಸದಾ ಸೋಷಿಯಲ್ ಮಿಡಿಯಾ ಮೂಲಕ ಮೇಘನಾ ರಾಜ್, ರಾಯನ್ ಸರ್ಜಾ ಕುರಿತಾದ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗಾಗಲೇ ಒಂದುವರೆ ವರ್ಷದವನಾಗಿರೋ ರಾಯನ್ ಮನೆಯಿಂದ ಹೊರ ಬಂದು ಆಟವಾಡುತ್ತಾನೆ.
ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಮೇಘನಾ
ಮೇಘನಾ ರಾಜ್ ರಿಯಾಲಿಟಿ ಶೋ ಜಡ್ಜ್ ಆಗಿ ಮತ್ತು ಕೆಲ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಮೇ 13 ರಂದು ಮೇಘನಾ ಹಾಗೂ ಸೃಜನ್ ಅಭಿನಯದ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರ ತೆರೆಕಂಡಿತ್ತು. ಸದ್ಯದಲ್ಲಿಯೇ ಚಿರು ಅಗಲಿಕೆ ನಡುವೆ ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್ ಆಗಲಿದೆ.
ಇದನ್ನೂ ಓದಿ | ಶಿವಣ್ಣ ಹುಟ್ಟುಹಬ್ಬಕ್ಕೂ ಮುನ್ನ ಬೈರಾಗಿ ರಿಲೀಸ್, 123ನೇ ಸಿನಿಮಾ ನೋಡಲು ಅಭಿಮಾನಿಗಳ ಕಾತರ