ಬೆಂಗಳೂರು: ಚಿಯಾನ್ ವಿಕ್ರಮ್ (Chiyaan Vikram) ಅಭಿನಯದ ʻʻತಂಗಲಾನ್ʼʼ (Thangalaan) ಸಿನಿಮಾದ ರಿಹರ್ಸಲ್ ವೇಳೆ ನಟನಿಗೆ ಪೆಟ್ಟಾಗಿದ್ದು ಪಕ್ಕೆಲುಬು ಮುರಿದಿರುವುದಾಗಿ ವರದಿಯಾಗಿದೆ. ವಿಕ್ರಮ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ‘ತಂಗಲಾನ್’ ಸಿನಿಮಾದ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಸುಮಾರು ಒಂದು ತಿಂಗಳ ಕಾಲ ಚಿಯಾನ್ ವಿಕ್ರಮ್ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಚಿಯಾನ್ ವಿಕ್ರಮ್ ಅವರು ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್: ಭಾಗ 2 ರಲ್ಲಿ ಆದಿತಾ ಕರಿಕಾಳನ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಇದರ ಮಧ್ಯೆಯೆ ಈ ದುರ್ಘಟನೆ ಸಂಭವಿಸಿದೆ.
ಕೋಲಾರದ ಚಿನ್ನದ ಗಣಿ ಕಾರ್ಮಿಕರ ಜೀವನದ ಸುತ್ತ ಸುತ್ತುವ ನೈಜ ಘಟನೆಗಳಿಂದ ಪ್ರೇರಿತವಾದ ʻʻತಂಗಲಾನ್ʼʼನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಚಿಯಾನ್ ವಿಕ್ರಮ್ ಪಾ. ರಂಜಿತ್ ನಿರ್ದೇಶನದ ಚಿತ್ರದಲ್ಲಿ ವಿಕ್ರಮ್ ಬುಡಕಟ್ಟಿನ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ರಿಹರ್ಸಲ್ ವೇಳೆ ನಟನಿಗೆ ಪೆಟ್ಟಾಗಿದ್ದು, ವಿಕ್ರಮ್ ಅವರ ವಕ್ತಾರರು ಟ್ವೀಟ್‌ನಲ್ಲಿ ʻʻಆದಿತಾ ಕರಿಕಾಳನ್ ಪಾತ್ರಕ್ಕೆ ಮೆಚ್ಚಿದ ನಿಮ್ಮ ಪ್ರೀತಿ ಮತ್ತು ಮೆಚ್ಚುಗೆಗೆ ಧನ್ಯವಾದಗಳು. ಪ್ರಪಂಚದಾದ್ಯಂತ PS 2 ಗೆ ಅದ್ಭುತ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ‘ತಂಗಲಾನ್’ ರಿಹರ್ಸಲ್ ಸಮಯದಲ್ಲಿ ಚಿಯಾನ್ ಗಾಯಗೊಂಡಿದ್ದು ಪಕ್ಕೆಲುಬು ಮುರಿದಿದೆ. ತಂಗಲಾನ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ನಿಮ್ಮ ಪ್ರೀತಿಗೆ ಧನ್ಯವಾದಗಳು. ಬೇಗನೆ ಹಿಂದಿರುಗುತ್ತಾರೆ’ ಎಂದು ಹೇಳಿದ್ದಾರೆ.
ಬೇಗ ಗುಣಮಖರಾಗಿ ಎಂದು ಅಭಿಮಾನಿಗಳು ನಟನಿಗೆ ಹಾರೈಸುತ್ತಿದ್ದಾರೆ. ತಂಗಲಾನ್‌ನಲ್ಲಿನ ಈ ಪಾತ್ರಕ್ಕಾಗಿಯೇ ವಿಕ್ರಮ್ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಬ್ರಿಟಿಷರು ಹಾಗೂ ಬುಡಕಟ್ಟು ಸಮಾಜದ ನಡುವೆ ನಡೆಯುವ ಸಂಘರ್ಷವನ್ನು ʻತಂಗಲಾನ್ʼʼ ಹೇಳುತ್ತಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ನಟ ಚಿಯಾನ್ ವಿಕ್ರಮ್ ಜತೆ ಪಾರ್ವತಿ ಮೆನನ್, ಮಾಳವಿಕಾ ಮೋಹನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: Chiyaan Vikram: ವಿಕ್ರಮ್ ಜನುಮದಿನಕ್ಕೆ ʻತಂಗಲಾನ್ʼ ಚಿತ್ರತಂಡದಿಂದ ಮೇಕಿಂಗ್ ವಿಡಿಯೊ ಬಿಡುಗಡೆ
ಕನ್ನಡದ ಕೆಜಿಎಫ್ ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕಾಲ್ಪನಿಕ ಕಥೆಯನ್ನು ಕಟ್ಟಿಕೊಟ್ಟರೆ, ಕೆಜಿಎಫ್‌ನ ನಿಜವಾದ ಕಥೆಯನ್ನು ನಿರ್ದೇಶಕ ಪಾ. ರಂಜಿತ್ ಹೇಳಲು ಹೊರಟ್ಟಿದ್ದಾರೆ ಎಂದು ಈ ಮುಂಚೆ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಮೂಲಕ ಹೊಸ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ ರಂಜಿತ್.
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ತಂಗಲಾನ್’ ಸಿನಿಮಾ ಸಿದ್ಧವಾಗಲಿದೆ. ಈಗಾಗಲೇ ವಿಕ್ರಮ್ ನಟನೆಯ ಕಾಲಿವುಡ್ ಸಿನಿಮಾ ʻಕೋಬ್ರಾʼ ಹಾಗೂ ʻಪೊನ್ನಿಯಿನ್ ಸೆಲ್ವನ್ʼ ಸಾಕಷ್ಟು ಪ್ರಶಂಸೆಗೆ ವ್ಯಕ್ತವಾಗಿದೆ.