ಮೈಸೂರು: ಮೈಸೂರಿನ ಎಚ್.ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಿರುವ ಸಾಹಸ ಸಿಂಹ ವಿಷ್ಣುವರ್ಧನ್ ( Vishnuvardhan ) ಅವರ ಸ್ಮಾರಕವನ್ನು ಭಾನುವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನಂತರ ಫೋಟೊ ಗ್ಯಾಲರಿ ವೀಕ್ಷಣೆ ಮಾಡಿ ವಿಷ್ಣುವರ್ಧನ್ ಅವರ 7 ಅಡಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು . ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ಪುತ್ರಿ ಕೀರ್ತಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ವಿಷ್ಣು ಸ್ಮಾರಕ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಾತನಾಡಿ ʻʻವಿಷ್ಣುವರ್ಧನ್ ಒಬ್ಬ ಮೇರು ನಟ. ಹಲವಾರು ಭಾಷೆಗಳಲ್ಲಿ ನಟಿಸಿರುವ ನಟ. 200ಕ್ತಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಗಲಿಕೆ ನಂತರ ಸ್ಮಾರಕಕ್ಕೆ ಸ್ವಲ್ಪ ಗೊಂದಲಗಳು ಉಂಟಾಗಿತ್ತು. ಕೊನೆಗೆ ಮೈಸೂರಿನಲ್ಲಿ ಮಾಡಿದ್ದೇವೆ. ಈಗ 10 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಅವರ ಕುಟುಂಬ ಬಯಸಿದಂತೆ ಆಗಿದೆ. ಕಲೆ ಸಂಸ್ಕೃತಿ ಚಿತ್ರರಂಗ ಅದರ ಬಗ್ಗೆ ಆಸಕ್ತಿ ಇರುವವರು ಬಂದು ಅದನ್ನ ನೋಡಿ ಬಂದು ಕಲಿಯಲಿ ಎಂದು ಆಶಿಸುತ್ತೇನೆʼʼ ಎಂದು ಹೇಳಿಕೆ ನೀಡಿದರು.
ಇದನ್ನೂ ಓದಿ: Vishnuvardhan: ಸ್ಮಾರಕ ಜಾಗದಲ್ಲಿಆಲ್ ಇಂಡಿಯಾ ಫಿಲ್ಮ್ ಇನ್ಸ್‌ಟಿಟ್ಯೂಟ್ ಶಾಖೆ ತೆರೆಯುವುದರ ಬಗ್ಗೆ ಪ್ರಸ್ತಾಪಿಸಿದ ಅನಿರುದ್ಧ
ಮಾತು ಮುಂದುವರಿಸಿ ʻʻನಾನು ವಿಷ್ಣುವರ್ಧನ್ ಅಭಿಮಾನಿಯಾಗಿ ಬಂದಿದ್ದೇನೆ. ನಾಗರಹಾವು ಸಿನಿಮಾ ನೋಡಿದವರು ವಿಷ್ಣುವರ್ಧನ್ ಅಭಿಮಾನಿ ಆಗುತ್ತಾರೆ. ಯುವಕರು, ಸಾಹಸ, ಪೌರಾಣಿಕ ಪಾತ್ರ ಮಾಡಿದ್ದಾರೆ.
ನಾಲ್ಕು ದಶಕಗಳ ಕಾಲ ಸಾಹಸ ಸಿಂಹ ಆಗಿ ಮೆರೆದಿದ್ದಾರೆ. ಯಾವುದೇ ಪಾತ್ರ ನೀಡಿದರೂ ನೈಜವಾಗಿ ನಟಿಸಿದ್ದಾರೆ.
ವಿಷ್ಣು ಒಬ್ಬ ಭಾವುಕ ಜೀವಿ. ಮಾನವೀಯತೆ ಮೆರೆದವರು. ಕೊನೆಯ ಕಾಲದಲ್ಲಿ ಆಧ್ಯಾತ್ಮಿಕವಾಗಿ ಆಸಕ್ತಿ ಬೆಳೆಸಿಕೊಂಡರು. ಸ್ಮಾರಕ ನಿರ್ಮಿಸುವ ಸಂದರ್ಭದಲ್ಲಿ ದೊಡ್ಡ ವಿವಾದ ಆಯ್ತು. ಭಾರತಿಯವರು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನ ಕೈಗೊಂಡರು. ಯಡಿಯೂರಪ್ಪ ಸಿಎಂ ಆಗಿದ್ದಾಗ 11 ಕೋಟಿ ರೂ. ನೀಡಿದರು.
ಇದಕ್ಕಾಗಿ ಯಡಿಯೂರಪ್ಪ, ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ: Vishnuvardhan: ಸ್ಮಾರಕ ಸರ್ಕಾರದ ಯೋಜನೆ, ಲಾಭ, ನಷ್ಟ ಎರಡೂ ಸರ್ಕಾರಕ್ಕೆ ಸೇರಿದ್ದು: ನಟ ಅನಿರುದ್ಧ
ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಆಗ್ರಹ
ವಿಷ್ಣು ಸ್ಮಾರಕ ಉದ್ಘಾಟನೆ ವೇಳೆ ಭಿತ್ತಿಪತ್ರ ಪ್ರದರ್ಶನ ವೇಳೆ ಬೋರ್ಡ್ ಹಿಡಿದು ವಿಷ್ಣು ಅಭಿಮಾನಿಗಳು ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಆಗ್ರಹಿಸಿದ್ದಾರೆ . ಅನಿರುದ್ಧ್ ಅವರ ಭಾಷಣಕ್ಕೂ ಅಭಿಮಾನಿಗಳು ಅವಕಾಶ ನೀಡದ ಪರಿಸ್ಥಿತಿ ಉಂಟಾಗಿದೆ. ನಿಮ್ಮ ಭಿತ್ತಿಪತ್ರ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ ಎಂದು ಅನಿರುದ್ಧ್ ಎಷ್ಟೇ ಕೇಳಿಕೊಂಡರು ಅಭಿಮಾನಿಗಳು ಭಿತ್ತಿಪತ್ರ ಕೆಳಗಿಳಿಸದೆ ಕಿರುಚಾಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ನಾನಾ ಕಾರಣಗಳಿಂದ ನನೆಗುದಿಯಲ್ಲಿತ್ತು. ಕೊನೆಗೂ ಮೈಸೂರಿನಲ್ಲಿ ಅನಾವರಣಗೊಂಡಿದೆ.ಇದೀಗ ದಾದಾ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.