Site icon Vistara News

Kaatera Movie : ಕಾಟೇರ ಸಿನಿಮಾದ ಟ್ರೈಲರ್ ಲಾಂಚ್​, ಹೇಗಿದೆ ದರ್ಶನ್​ ಲುಕ್​?

Katera Movie

ಹುಬ್ಬಳ್ಳಿ: ಚಾಲೆಂಜಿಂಗ್ ಸ್ಟಾರ್​ ದರ್ಶನ್ ಹಾಗೂ ಮಾಲಾಶ್ರಿ ಪುತ್ರಿ ಆರಾಧನಾ ನಟಿಸಿರುವ ಕಾಟೇರ ಸಿನಿಮಾದ (Kaatera Movie) ಟ್ರೈಲರ್ ​ ಹುಬ್ಬಳ್ಳಿಯಲ್ಲಿ ಶನಿವಾರ (ಡಿಸೆಂಬರ್​ 16ರಂದು) ಸಂಜೆ ಅನಾವರಣಗೊಂಡಿತು. ಸಿಎಂ ಸಿದ್ದರಾಮಯ್ಯ ಅವರು ಚಲನಚಿತ್ರ ತಂಡ ಹಾಗೂ ಗಣ್ಯರ ಸಮ್ಮುಖದಲ್ಲಿ ಟ್ರೇಲರ್​ ಅನಾವರಣಗೊಂಡಿದೆ ಎಂದು ಘೋಷಿಸಿದರು.

ಹುಬ್ಬಳ್ಳಿಯಲ್ಲಿ ರೈಲ್ವೇ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರೇಲರ್ ಲಾಂಚ್ ಆಯಿತು. ದರ್ಶನ್ ಅವರ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ದೊಡ್ಡ ಸ್ಕ್ರೀನ್​ನಲ್ಲಿ ಟ್ರೈಲರ್ ಪ್ರದರ್ಶನ ಮಾಡಲಾಯಿತು. ನಾಯಕ ನಟ ದರ್ಶನ್, ನಟಿ ಆರಾಧನಾ, ಮಾಲಾಶ್ರೀ, ವಿನೋದ್ ಆಳ್ವಾ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತಿತರರು ಈ ವೇಳೆ ಉಪಸ್ಥಿತಿದದ್ದರು. ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್. ಎಚ್. ಕೋನರೆಡ್ಡಿ ಕೂಡ ಟ್ರೇಲರ್ ಲಾಂಚ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತರುಣ್ ಸುಧೀರ್ ನಿರ್ದೇಶನ, ರಾಕ್ ಲೈನ್ ವೆಂಕಟೇಶ್ ಅದ್ಧೂರಿ ನಿರ್ಮಾಣದ ಕಾಟೇರ ಚಲನಚಿತ್ರ ಡಿಸೆಂಬರ್ 29ರಂದು ತೆರೆ ಕಾಣಲಿದೆ.

ಹೇಗಿದೆ ಟ್ರೈಲರ್

ಕಾಟೇರ ಸಿನಿಮಾವನ್ನು ಅತ್ಯಂತ ಅದ್ಧೂರಿಯಾಗಿ ನಿರ್ಮಾಣ ಮಾಡಿರುವುದು ಟ್ರೈಲರ್​ನಲ್ಲಿ ಸಾಬೀತಾಗಿದೆ. ಜನರ ಭಕ್ತಿ, ಸಮರ್ಪಣೆ ಹಾಗೂ ಅನ್ಯಾಯದ ವಿರುದ್ಧದ ಹೋರಾಟದ ಕತೆಯನ್ನು ಸಿನಿಮಾ ಹೊಂದಿರುವುದು ಪಕ್ಕಾ. ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರು ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷರ ಚಪ್ಪಾಳೆ ಹಾಗೂ ಶಹಬ್ಬಾಸ್​ಗಿರಿ ಖಾತರಿಯಾಗಿದೆ.

70ರ ದಶಕದಲ್ಲಿ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಸಿನಿಮಾ ತಂಡ ಹಿಂದೆಯೇ ಹೇಳಿತ್ತು. ಕತೆಗೆ ಹಳ್ಳಿಯ ಕತೆಯೇ ಸ್ಫೂರ್ತಿ ಎಂದು ಹೇಳಿರುವುದು ಟ್ರೈಲರ್​ನಲ್ಲಿ ಅಚ್ಚುಕಟ್ಟಾಗಿ ಕಾಣಿಸಿಕೊಂಡಿದೆ.

ದರ್ಶನ್ ಅವರಿಗೆ ಈ ಹಿಂದೆ ತರುಣ್​ ಸುಧೀರ್​ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗಾಗಿ ಉತ್ತಮ ಕಥೆಯೊಂದಿಗೆ ತರುಣ್ ಸುಧೀರ್ ಬಂದಿದ್ದಾರೆ ಎಂಬುದು ಸಿನಿ ಕ್ಷೇತ್ರ ಮಾತು.

ದರ್ಶನ್​ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಲಿದ್ದಾರೆ. ಕಾಟೇರ ಸಿನಿಮಾದ 2 ಹಾಡುಗಳು ಕೂಡ ಈಗಾಗಲೇ ರಿಲೀಸ್ ಆಗಿದ್ದು ಸೂಪರ್ ಹಿಟ್ ಆಗಿದೆ. ಪಸಂದಾಗವ್ನೆ ಹಾಗೂ ಯಾವ ಜನುಮದ ಗೆಳತಿ ಹಾಡುಗಳು ಜನಮನ ಗೆದ್ದಿವೆ.

ಭಾರಿ ಮೊತ್ತಕ್ಕೆ ಕಾಟೇರ ಡಿಜಿಟಲ್‌, ಸ್ಯಾಟಲೈಟ್ ಮಾರಾಟ!

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ (Darshan Thoogudeepa) ಅಭಿನಯದ ಮುಂದಿನ ಚಿತ್ರ ‘ಕಾಟೇರ’ (Kaatera)ದ ಡಿಸೆಂಬರ್‌ 29ರಂದು ಬಿಡುಗಡೆಯಾಗಲಿದೆ. ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದರೆ ಮತ್ತೆ ಕೆಲವರು ಒಂದು ಕೈ ನೋಡೇಬಿಡೋಣ ಎನ್ನುತ್ತಿದ್ದಾರೆ. ಇದೇ ಸಮಯದಲ್ಲಿ ಪ್ರಭಾಸ್‌ ನಟನೆಯ ಸಲಾರ್‌ ಹಾಗೂ ಶಾರುಖ್‌ ನಟನೆಯ ಡಂಕಿ ರಿಲೀಸ್‌ ಆಗುತ್ತಿವೆ. ಕಳೆದ ವರ್ಷ ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ‘ಕಾಟೇರ’ ಸಿನಿಮಾ ಸೆಟ್ಟೇರಿತ್ತು. ಆದರೆ ಆಗ ಟೈಟಲ್ ಫಿಕ್ಸ್ ಆಗಿರಲಿಲ್ಲ. ಈ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೈಟಲ್ ಸಮೇತ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು.

ಈ ಚಿತ್ರಕ್ಕೆ ನಿರ್ದೇಶಕ ತರುಣ್​ ಸುಧೀರ್​ ಆ್ಯಕ್ಷನ್​-ಕಟ್​ ಹೇಳಿದ್ದು, ರಾಕ್​ಲೈನ್​ ವೆಂಕಟೇಶ್​ ನಿರ್ಮಿಸಿದ್ದಾರೆ. ‘ಕಾಟೇರ’ ದರ್ಶನ್‌ ಅಭಿನಯದ 56ನೇ ಸಿನಿಮಾ. ಇದು 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗಿದೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನೊಳಗೊಂಡ ಈ ಚಿತ್ರದಲ್ಲಿ ದರ್ಶನ್‌ ರಗಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷಾರಂಭದಲ್ಲಿ ʼಕ್ರಾಂತಿʼ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಚಾಲೆಂಜಿಂಗ್‌ ಸ್ಟಾರ್‌ ವರ್ಷಾಂತ್ಯದಲ್ಲಿ ʼಕಾಟೇರʼ ಮೂಲಕ ದರ್ಶನ ನೀಡುತ್ತಿದ್ದಾರೆ.

ಇದೆಲ್ಲದರ ನಡುವೆ ಜೀ ಸಂಸ್ಥೆ ‘ಕಾಟೇರ’ ಚಿತ್ರದ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗುತ್ತಿದೆ. 48 ದಿನಗಳ ಬಳಿಕ ಜೀ5ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಒಟಿಟಿಗೆ ಬರಬಹುದು. ಯುಗಾದಿ ಹಬ್ಬಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Exit mobile version