| ಬಿ.ಸೋಮಶೇಖರ್, ಬೆಂಗಳೂರು
ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? Why Did Kattappa Kill Bahubali?
2015ರ ಅರ್ಧ ಭಾಗ (ಬಾಹುಬಲಿ 1 ಬಿಡುಗಡೆಯಾಗಿದ್ದು 2015ರ ಜುಲೈ 10), 2016 ಪೂರ್ತಿ ಹಾಗೂ 2017ರ ನಾಲ್ಕು ತಿಂಗಳು (ಬಾಹುಬಲಿ 2 ಬಿಡುಗಡೆಯಾಗಿದ್ದು 2017ರ ಏಪ್ರಿಲ್ 28) ದೇಶದ ಬಹುತೇಕ ಜನರ ತಲೆಯಲ್ಲಿ ಗುಂಯ್‌ಗುಡುತ್ತಿದ್ದ ಪ್ರಶ್ನೆ ಇದು. ‘ಈಗ’ ಸಿನಿಮಾ ಮೂಲಕ ಅದುವರೆಗೆ ಜನರ ಮನಸ್ಸಿನಲ್ಲಿ ‘ನೊಣ’ ಬಿಟ್ಟಿದ್ದ ಎಸ್.ಎಸ್.ರಾಜಮೌಳಿ, 2015ರಲ್ಲಿ ದೇಶದ ಪ್ರತಿಯೊಬ್ಬರ ಮೆದುಳಿನಲ್ಲಿಯೂ ಇಂತಹದ್ದೊಂದು ಪ್ರಶ್ನೆಯ ‘ಹುಳ’ ಬಿಟ್ಟಿದ್ದರು. ಅಷ್ಟೇ ಅಲ್ಲ, ಬಾಹುಬಲಿ ಪಾರ್ಟ್ 1 ಹಾಗೂ ಪಾರ್ಟ್ 2 ಮೂಲಕ ಸಿನಿಮಾ ನೋಡಿದ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಅಚ್ಚಳಿಯದ ಸ್ಥಾನ ಪಡೆದರು. ಭಾರತದ ಸಿನಿಮಾ ರಂಗ, ಅದರಲ್ಲೂ, ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದ ಅಗ್ರ ನಿರ್ದೇಶಕರು ಯಾರು? ಯಾರು ದೇಶದ ಸಿನಿಮಾ ಕ್ಷೇತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಾರೆ ಎಂಬ ಪ್ರಶ್ನೆಗೂ ‘ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ’ ಎಂಬ ಒಂದೇ ಪ್ರಶ್ನೆಯ ಮೂಲಕ ರಾಜಮೌಳಿ ಎಂಬ ಸಿನಿಮಾ ಮಾಂತ್ರಿಕ ಉತ್ತರ ಕೊಟ್ಟಿದ್ದರು(Oscars 2023).
ಗಳಿಕೆ ಒತ್ತಟ್ಟಿಗಿರಲಿ, ಭಾರತೀಯ ಸಿನಿಮಾ ರಂಗವನ್ನು ಬಾಹುಬಲಿ ಮೊದಲಿನ ಹಾಗೂ ಬಾಹುಬಲಿ ನಂತರದ ಕಾಲಘಟ್ಟ ಎಂಬ ‘ಸಕಾರಾತ್ಮಕ ವಿಂಗಡಣೆ’ಯನ್ನು ಮಾಡಿದ್ದು ಇದೇ ರಾಜಮೌಳಿ. ಇಂತಹ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ‘ನಾಟು ನಾಟು’ ಹಾಡು ಜಾಗತಿಕ ಮಟ್ಟದ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದಿದೆ. ಆ ಮೂಲಕ ಭಾರತದ ಸಿನಿಮಾಗಳು ವಿಮರ್ಶಾತ್ಮಕವಾಗಿ ಮಾತ್ರ ಹಿಟ್ ಆಗಿ, ಪ್ರಶಸ್ತಿ ಪಡೆಯುತ್ತವೆ ಎಂಬ ಮಾತನ್ನು ಸುಳ್ಳಾಗಿಸಿ, ಬಾಕ್ಸ್ ಆಫೀಸ್‌ನಲ್ಲೂ ಗೆದ್ದು, ಜಾಗತಿಕ ಮಟ್ಟದ ಪ್ರಶಸ್ತಿಯನ್ನೂ ಬಾಚಿಕೊಳ್ಳುತ್ತವೆ ಎಂಬುದನ್ನು ಎಸ್.ಎಸ್.ರಾಜಮೌಳಿ ಸಾಬೀತುಪಡಿಸಿದ್ದಾರೆ. ಇಂತಹ ಹೊತ್ತಿನಲ್ಲಿ ರಾಜಮೌಳಿ ಎಂಬ ಕೌತುಕ ಮನಸ್ಸಿನ ನಿರ್ದೇಶಕನ ಜೀವನದ ಅಂತರಾಳಕ್ಕೆ ಹೋಗದಿದ್ದರೆ ಹೇಗೆ ಹೇಳಿ?
ರಾಯಚೂರು ಮೂಲ, ಸಿನಿಮಾದಲ್ಲಿ ಹಿಂತಿರುಗಿ ನೋಡಲಿಲ್ಲ
ಸದ್ಯ ಜಗದ್ವಿಖ್ಯಾತರಾಗಿರುವ ಎಸ್.ಎಸ್.ರಾಜಮೌಳಿ ಅವರು ಹುಟ್ಟಿದ್ದು ಕರ್ನಾಟಕದ ಬಿಸಿಲ ನಾಡು ರಾಯಚೂರಿನ ಮಾನ್ವಿ ತಾಲೂಕಿನಲ್ಲಿ. ಆದರೆ, ಸ್ಟಾರ್ ಪಟ್ಟ ಗಳಿಸಿದ್ದು ಮಾತ್ರ ಟಾಲಿವುಡ್‌ನಲ್ಲಿ. 1973ರ ಅಕ್ಟೋಬರ್ 10ರಂದು ಜನಿಸಿದ ರಾಜಮೌಳಿ ಅವರ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರು ಕೂಡ ನಿರ್ದೇಶಕರು. ಹಾಗಾಗಿ, ರಾಜಮೌಳಿ ಅವರು ಸಿನಿಮಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಲು ಕಾರಣವಾಯಿತು. ಕೊನೆಗೆ ಅದೇ ಸಿನಿಮಾ ಕ್ಷೇತ್ರವೇ ರಾಜಮೌಳಿ ಅವರನ್ನು ಜಗತ್ತಿಗೆ ಪರಿಚಯಿಸಿತು.
ತಂದೆ ನಿರ್ದೇಶಕರಾದರೂ, ಕುಟುಂಬದಲ್ಲಿ ಹಲವರು ಸಿನಿಮಾ ಕ್ಷೇತ್ರದಲ್ಲಿ ಇದ್ದರೂ ರಾಜಮೌಳಿ ಅವರಿಗೆ ಏಕಾಏಕಿ ಯಶಸ್ಸು ಸಿಗಲಿಲ್ಲ. ತಂದೆಯವರಿಗೇ ರಾಜಮೌಳಿ ಆರು ವರ್ಷ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ತೆಲುಗು ಧಾರಾವಾಹಿ ಶಾಂತಿ ನಿವಾಸಂಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅವರಿಗೆ ನಿರ್ಮಾಪಕ ರಾಘವೇಂದ್ರ ರಾವ್ ಅವರು ಬ್ರೇಕ್ ಕೊಟ್ಟರು. ರಾಘವೇಂದ್ರ ರಾವ್ ಅವರ ಪ್ರೊಡಕ್ಷನ್‌ನ “ಸ್ಟುಡೆಂಟ್ ನಂಬರ್ 1ʼʼ ಚಿತ್ರದ ನಿರ್ದೇಶಕರಾಗಿ ರಾಜಮೌಳಿ ಅವರಿಗೆ ಅವಕಾಶ ಸಿಕ್ಕಿತು. ಜೂನಿಯರ್ ಎನ್‌ಟಿಆರ್ ನಟನೆಯ ಮೊದಲ ಸಿನಿಮಾವೇ ರಾಜಮೌಳಿ ಅವರಿಗೆ ಹೆಸರು ತಂದುಕೊಟ್ಟಿತು. 2001ರಲ್ಲಿ ಸಿನಿಮಾ 12 ಕೋಟಿ ರೂ. ಗಳಿಸುವ ಮೂಲಕ ಯಶಸ್ವಿ ಸಿನಿಮಾ ಎನಿಸಿತು.
ಜೂನಿಯರ್ ಎನ್‌ಟಿಆರ್, ರಾಜಮೌಳಿ ಜೋಡಿ ಮೋಡಿ
ಆರ್‌ಆರ್‌ಆರ್ ಸಿನಿಮಾ ನೋಡಿ ತುಂಬ ಜನ ಜೂನಿಯರ್ ಎನ್‌ಟಿಆರ್ ಹಾಗೂ ರಾಜಮೌಳಿಯದ್ದು ಅತ್ಯುತ್ತಮ ಜೋಡಿ ಎನ್ನುತ್ತಾರೆ. ಆದರೆ, 2003ರಲ್ಲಿಯೇ ಈ ಜೋಡಿ ಮೋಡಿ ಮಾಡಿತ್ತು. ಜೂನಿಯರ್ ಎನ್‌ಟಿಆರ್ ನಟನೆಯ ಸಿಂಹಾದ್ರಿ ಸಿನಿಮಾವನ್ನು ನಿರ್ದೇಶಿಸಿದ ರಾಜಮೌಳಿ, ತೆಲುಗು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದರು. ಆಗಿನ ಕಾಲಘಟ್ಟದಲ್ಲಿ ತೆಲುಗು ಇಂಡಸ್ಟ್ರಿಯಲ್ಲೇ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿ ಸಿಂಹಾದ್ರಿಯದ್ದಾಯಿತು. 2004ರಲ್ಲಿ ತೆರೆ ಕಂಡ ಸೈ, 2005ರಲ್ಲಿ ಬಿಡುಗಡೆಯಾದ ಛತ್ರಪತಿ, ನಂತರ ಬಂದ ವಿಕ್ರಮಾರ್ಕುಡು, ಯಮದೊಂಗು ಸಿನಿಮಾಗಳು ಕೂಡ ಹೆಸರು ಗಳಿಸಿದವು.
ಆರ್‌ಆರ್, ದಿ ರೈಸ್ ಆಫ್ ರಾಜಮೌಳಿ
ಇಷ್ಟೆಲ್ಲ ಸಿನಿಮಾಗಳನ್ನು ನಿರ್ದೇಶಿಸಿದರೂ ರಾಜಮೌಳಿ ಅವರಿಗೆ ಆಂಧ್ರಪ್ರದೇಶದಾಚೆಗೆ ಹೆಸರು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, 2009ರಲ್ಲಿ ತೆರೆ ಕಂಡ “ಮಗಧೀರʼʼ ಸಿನಿಮಾವು ರಾಜಮೌಳಿ ಅವರನ್ನು ದಕ್ಷಿಣ ಭಾರತಕ್ಕೆ ಪರಿಚಯಿಸಿತು. ರಾಮ್ ಚರಣ್ ಹಾಗೂ ಕಾಜಲ್ ಅಗರ್ವಾಲ್ ನಟನೆಯ, ಐತಿಹಾಸಿಕ ಹಿನ್ನೆಲೆಯುಳ್ಳ ಮಗಧೀರ ಸಿನಿಮಾವು 44 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿ, ದಾಖಲೆಯ 150 ಕೋಟಿ ರೂ. ಗಳಿಸಿತು. ರಾಜಮೌಳಿ ಅವರು ಮಗಧೀರ ಸಿನಿಮಾಗೆ ಬಳಸಿದ ವಿಎಫ್‌ಎಕ್ಸ್ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ನೊಣವನ್ನೇ ಹೀರೊ ಮಾಡಿದ ನಿರ್ದೇಶಕ
ಸಾಮಾನ್ಯವಾಗಿ, ಸ್ಟಾರ್‌ಗಿರಿ ಪಡೆದ ನಿರ್ದೇಶಕರು ಆರಡಿ ಎತ್ತರ, ಅತ್ಯುತ್ತಮ ದೇಹದಾರ್ಢ್ಯ, ಕಂಚಿನ ಕಂಠದವರನ್ನು ತಮ್ಮ ಸಿನಿಮಾಗಳಿಗೆ ಹೀರೊ ಆಗಿ ಆಯ್ಕೆ ಮಾಡುತ್ತಾರೆ. ಆದರೆ, ಮಗಧೀರದಂತಹ ಸಿನಿಮಾ ಮಾಡಿ, ಹೆಸರು ಗಳಿಸಿದ ರಾಜಮೌಳಿ, ‘ಈಗ’ ಸಿನಿಮಾ ಮೂಲಕ ಒಂದು ನೊಣವನ್ನು ತಂದು ಹೀರೊ ಮಾಡಿದರು. ಕನ್ನಡದ ಸುದೀಪ್ ಸಿನಿಮಾದ ವಿಲನ್ ಆಗಿ ಉತ್ತಮ ಹೆಸರು ಪಡೆದರು. ಆದರೂ, ಒಂದು ನೊಣವನ್ನು ಇಟ್ಟುಕೊಂಡು ಸಿನಿಮಾ ಮಾಡಬಹುದು ಎಂಬ ಕ್ರಿಯಾಶೀಲತೆಯನ್ನು ಮೆರೆದ ರಾಜಮೌಳಿ ಗೆದ್ದರು. ಸಿನಿಮಾವೂ ಗೆದ್ದಿತು.
ರಾಜಮೌಳಿ ಬಾಹುಬಲಿ
ಸಿಂಹಾದ್ರಿ ಸಿನಿಮಾ ಮಾಡಿ ಆಂಧ್ರಪ್ರದೇಶಕ್ಕೆ, ಮಗಧೀರ ಸಿನಿಮಾ ಮೂಲಕ ದಕ್ಷಿಣ ಭಾರತದಲ್ಲಿ ಪರಿಚಿತರಾಗಿದ್ದ ರಾಜಮೌಳಿ, ಬಾಹುಬಲಿ ಪಾರ್ಟ್ 1 ಮೂಲಕ ಭಾರತ ಮತ್ತು ಪಾರ್ಟ್ 2 ಮೂಲಕ ವಿಶ್ವಾದ್ಯಂತ ಪರಿಚಿತರಾದರು. ಭಾರತದ ನೆಲದ ಸಿನಿಮಾವೊಂದು ಜಗತ್ತಿನಲ್ಲಿ 2 ಸಾವಿರ ಕೋಟಿ ರೂ. ಗಳಿಸುತ್ತದೆ ಎಂಬುದನ್ನು ತೋರಿಸಿಕೊಟ್ಟ ರಾಜಮೌಳಿ ನಿಜವಾದ ಬಾಹುಬಲಿ ಎನಿಸಿದರು. ಬಾಹುಬಲಿ 1 ಹಾಗೂ 2ರ ಕತೆ, ಮೂಡಿಸಿದ ಕುತೂಹಲ, ವಿಎಫ್‌ಎಕ್ಸ್ ಬಳಕೆ, ಮೇಕಿಂಗ್ ಸೇರಿ ಭಾರತದ ಮಂದಿಗೆ, ಭಾರತದ ಸಿನಿಮಾದಲ್ಲಿಯೇ ಹಾಲಿವುಡ್‌ನಂತಹ ಮೇಕಿಂಗ್ ತೋರಿಸಿದ ಕೀರ್ತಿ ರಾಜಮೌಳಿ ಅವರಿಗೇ ಸಲ್ಲಬೇಕು.
ವಿವಾದಗಳಿಂದ ದೂರ, ನೆಲದ ಮೂಲವೇ ಆಧಾರ
ಬಾಲಿವುಡ್ ನಟ, ನಿರ್ದೇಶಕರಂತೆ ರಾಜಮೌಳಿ ಅವರು ವಿವಾದಾತ್ಮಕ ಹೇಳಿಕೆ ನೀಡುವುದಿಲ್ಲ, ಜನರನ್ನು ರೊಚ್ಚಿಗೆಬ್ಬಿಸುವುದಿಲ್ಲ. ಮೂರ್ನಾಲ್ಕು ವರ್ಷ ಸುಮ್ಮನಿರುವುದು, ಒಂದೊಳ್ಳೆ ಸಿನಿಮಾ ಮಾಡುವುದು, ಸಾವಿರಾರು ಕೋಟಿ ರೂ. ದೋಚಿಕೊಂಡು ಹೋಗುವುದಷ್ಟೇ ರಾಜಮೌಳಿ ಅವರ ತತ್ವವಾಗಿದೆ. ಹಾಗಾಗಿಯೇ, ಅವರು ವಿವಾದಗಳಿಂದ ದೂರವಿದ್ದಾರೆ. ಇನ್ನು, ರಾಜಮೌಳಿ ಅವರ ಸಿನಿಮಾಗಳಲ್ಲಿ ದೇಶದ ನೆಲದ ಮೂಲವೇ ಆಧಾರವಾಗಿದೆ. ಮಗಧೀರ, ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳು ನೆಲದ ಕತೆಯನ್ನೇ ಹೇಳುತ್ತವೆ. ಪೌರಾಣಿಕ ಸಂದೇಶಗಳನ್ನೇ ಹೊಂದಿರುತ್ತವೆ. ಆದರೆ, ಖ್ಯಾತಿ ಮಾತ್ರ ಜಾಗತಿಕ ಮಟ್ಟದಲ್ಲಿ ಗಳಿಸುತ್ತವೆ. ಇತ್ತೀಚಿನ ಆರ್‌ಆರ್‌ಆರ್ ಸಿನಿಮಾ ಜಾಗತಿಕ ಮಟ್ಟದ ಪ್ರಶಸ್ತಿ ಗಳಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ.
ಆಸ್ಕರ್ ತಂದು ಕೊಟ್ಟ ರಾಜಮೌಳಿ
ಆರ್‌ಆರ್‌ಆರ್ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಆಗ ರಾಜಮೌಳಿ ಭಾರತಕ್ಕೆ ಆಸ್ಕರ್ ತಂದುಕೊಡುವವರೇ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಈಗ ಇತಿಹಾಸ ಸೃಷ್ಟಿಯಾಗಿದೆ. ಆಸ್ಕರ್ ಗೆದ್ದ ಭಾರತದ ಸಂಪೂರ್ಣ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ RRR ಪಾತ್ರವಾಗಿದೆ. ಆರ್‌ಆರ್‌ಆರ್ ಸಿನಿಮಾ ಮೇಕಿಂಗ್ ಅಂತಾರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದಿದೆ. ಹಾಗಾಗಿ, ಭಾರತಕ್ಕೆ ಯಾರಾದರೂ ಆಸ್ಕರ್ ಸಿನಿಮಾ ತಂದುಕೊಡುವ ನಿರ್ದೇಶಕರಿದ್ದರೆ, ಅದು ರಾಜಮೌಳಿ ಎಂಬ ಮಾತು ಕೇಳಿಬರುತ್ತಿತ್ತು. ಅದೀಗ ಸಾಧ್ಯವಾಗಿದೆ. ಕೆ.ಬಾಲಚಂದರ್, ಗುರು ದತ್, ಸತ್ಯಜಿತ್ ರೇ ಸೇರಿ ಹಲವು ಮೇರು ನಿರ್ದೇಶಕರು ಭಾರತದ ಅಗ್ರ ನಿರ್ದೇಶಕರ ಸಾಲಿನಲ್ಲಿ ನಿಂತರೆ, ರಾಜಮೌಳಿ ಅವರು ಸ್ಟೀವನ್ ಸ್ಪೀಲ್ ಬರ್ಗ್ ಅವರೇ ಮೆಚ್ಚುವಂತಹ, ಡೇವಿಡ್ ಕ್ಯಾಮರಾನ್ ಅವರಂತಹ ತಂತ್ರಜ್ಞರ ಸಾಲಿನಲ್ಲಿ ನಿಲ್ಲುತ್ತಾರೆ. ಹಾಗಾಗಿ, ಬಾಕ್ಸ್ ಆಫೀಸ್ ಗಳಿಕೆಯ ಆಚೆಗೂ ರಾಜಮೌಳಿ ಇಷ್ಟವಾಗುತ್ತಾರೆ. ಹೆಮ್ಮೆ ಎನಿಸುತ್ತಾರೆ.
ಇದನ್ನೂ ಓದಿ : Oscars 2023: ಇತಿಹಾಸ ಸೃಷ್ಟಿಸಿದ RRR ಸಿನಿಮಾ, ನಾಟು ನಾಟು… ಹಾಡಿಗೆ ಆಸ್ಕರ್ ಪ್ರಶಸ್ತಿ!