ಬೆಂಗಳೂರು : ಸಂಚಾರಿ ವಿಜಯ್ (Sanchari Vijay) ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಅಭಿಮಾನಿಗಳು ಮತ್ತು ಆಪ್ತರು ಸ್ಮರಿಸಿಕೊಳ್ಳುತ್ತಿದ್ದಾರೆ. ಕೇವಲ 37ನೇ ವಯಸ್ಸಿಗೆ ನಟ ಸಂಚಾರಿ ವಿಜಯ್ ಬಾರದ ಲೋಕಕ್ಕೆ ಹೋಗಿದ್ದಾರೆ. 2021 ರ ಜೂನ್ 15 ರಂದು ಅಪಘಾತದಲ್ಲಿ ಗಾಯಗೊಂಡು ನಿಧನರಾದರು. ಪ್ರತಿಭಾನ್ವಿತ ನಟನಾಗಿರುವ ಸಂಚಾರಿ ವಿಜಯ್ ಅವರ ಅಗಲಿಕೆ ಅರಗಿಸಿಕೊಳ್ಳಲು ಅವರ ಅಭಿಮಾನಿಗಳಿಗೆ ಸಾಧ್ಯವಾಗಲೇ ಇಲ್ಲ. ಇದೀಗ ಅವರ ಮೊದಲ ಪುಣ್ಯ ಸ್ಮರಣೆಯಲ್ಲಿ ಎಲ್ಲರೂ ಅವರ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ. ಹಾಗೂ ಮಾಡಿದ ಸಾಧನೆಗಳನ್ನು ಶ್ಲಾಘಿಸುತ್ತಿದ್ದಾರೆ.
ಬಣ್ಣದ ಲೋಕದಲ್ಲಿ ಸಂಚಾರಿ
ಕೆಲಕಾಲ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ʼಸಂಚಾರಿ ಥಿಯೇಟರ್ʼ ಹಾಗೂ ರಂಗ ತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜತೆ ರಂಗತಂಡಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ | ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ
2011ರಲ್ಲಿ ಸಂಚಾರಿ ವಿಜಯ್ ಸಿನಿಮಾ ರಂಗಕ್ಕೆ ಕಾಲಿಟ್ಟರು. ಅವರು ನಟಿಸಿದ ಮೊದಲ ಸಿನಿಮಾ ʼರಂಗಪ್ಪ ಹೋಗ್ಬಿಟ್ನಾʼ. ಸಂಚಾರಿ ವಿಜಯ್ ಅವರಿಗೆ ಮೊದಲ ಬಾರಿ ಖ್ಯಾತಿ ತಂದುಕೊಟ್ಟ ಸಿನಿಮಾ ʼಹರಿವುʼ (Harivu). ಈ ಚಿತ್ರಕ್ಕೆ ಮಂಸೋರೆ ನಿರ್ದೇಶನ ಮಾಡಿದ್ದರು. ಇನ್ನೂ ಹರಿವು ಸಿನಿಮಾದಲ್ಲಿ ತಂದೆಯ ಪಾತ್ರದ ಮೂಲಕ ವಿಜಯ್ ಅಭಿನಯಿಸಿದ್ದರು. ಮತ್ತು ʼಹರಿವುʼ ಸಿನಿಮಾ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿತು.
62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ʼನಾನು ಅವನಲ್ಲ ಅವಳುʼ (Nanu Avanalla Avalu) ಚಿತ್ರಕ್ಕೆ ಅತ್ತುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿ ಮೆಚ್ಚುಗೆಯನ್ನು ಗಳಿಸಿದ್ದರು.
ʼವ್ಯಾನಿಟಿ ಬ್ಯಾಗ್ʼ, ʼಹೀಗೆರಡು ಕಥೆಗಳುʼ, ʼಹಳ್ಳಿಯೂರ ಹಮ್ಮೀರʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ʼಪಾರ್ವತಿ ಪರಮೇಶ್ವರʼ, ʼಪಾಂಡುರಂಗ ವಿಠಲʼ, ʼಪಂಚರಂಗಿ ಪೋಂ..ಪೋಂʼ ಹಾಗೂ ʼಹೊಸ ಬಾಳಿಗೆ ನೀ ಜೊತೆಯಾದೆʼ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.
ʼಕಿಲ್ಲಿಂಗ್ ವೀರಪ್ಪನ್ʼ, ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ, ʼಸಿಪಾಯಿʼ, ʼಒಗ್ಗರಣೆʼ ಮುಂತಾದ ಸಿನಿಮಾಗಳಿಗೆ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ.
ಪಂಚನಹಳ್ಳಿಯಲ್ಲಿ ವಿಜಯ್ ಪುತ್ಥಳಿ
ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚನಹಳ್ಳಿ. ಅದೇ ಗ್ರಾಮದಲ್ಲಿ ವಿಜಯ್ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ವಿಜಯ್ ಅವರ ಸಮಾಧಿ ಸ್ಥಳದಲ್ಲಿ ಈಗ ಅವರದೊಂದು ಪುತ್ಥಳಿಯನ್ನು ಸಹ ನಿರ್ಮಾಣ ಮಾಡಲಾಗಿದೆ. ಇತ್ತಿಚೆಗೆ ಪುಣ್ಯಸ್ಮರಣೆ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸಂಚಾರಿ ವಿಜಯ್ ಅವರ ಕುಟುಂಬಸ್ಥರು ನೆರವೇರಿಸಿದ್ದರು. ಬುಧವಾರ (ಜೂನ್ 15) ವಿಜಯ್ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಅವರ ಅನೇಕ, ಆಪ್ತರು, ಸ್ನೇಹಿತರು ಪಂಚನಹಳ್ಳಿಗೆ ಭೇಟಿ ನೀಡಲಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಸಂಚಾರಿ
ವಿಜಯ್ ಅವರ ಬ್ರೇನ್ ಡೆಡ್ ಆಗಿದ್ದರಿಂದ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದರು. ವಿಜಯ್ ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್ ಹಾಗೂ ಹೃದಯದ ವಾಲ್ವ್ಸ್ ದಾನ ಮಾಡಲಾಗಿತ್ತು. ಇದರಿಂದ ಏಳು ಜನರಿಗೆ ಉಪಯೋಗವಾಗಿತ್ತು. ಅವರು ಜೀವಂತವಾಗಿದ್ದಾಗ ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ ಆಸರೆಯಾಗಿದ್ದರು.
ಇದನ್ನೂ ಓದಿ | ಕಿರಣ್ ಮಜುಂದಾರ್ ಶಾ ತಾಯಿ ಯಾಮಿನಿ ಮಜುಂದಾರ್ ನಿಧನ