Site icon Vistara News

Devil Movie: ಪವರ್ ಫುಲ್ ರಾಜಕಾರಣಿಯಾಗಿ ಕಲ್ಯಾಣ್ ರಾಮ್ ‘ಡೆವಿಲ್’ ಅಂಗಳಕ್ಕೆ‌ ಕಾಲಿಟ್ಟ ಮಾಳವಿಕಾ ನಾಯರ್

devil

devil

ಬೆಂಗಳೂರು: ವಿಭಿನ್ನ ಚಿತ್ರ, ಪಾತ್ರಗಳ ಮೂಲಕ ತೆಲುಗು ಪ್ರೇಕ್ಷಕಗರ ಗಮನ ಸೆಳೆದಿರುವ ನಟ ಕಲ್ಯಾಣ್‌ ರಾಮ್‌. ಟಾಲಿವುಡ್‌ ಸೂಪರ್‌ ಸ್ಟಾರ್‌ ಜ್ಯೂನಿಯರ್‌ ಎನ್‌ಟಿಆರ್‌ ಸಹೋದರನಾಗಿರುವ ಇವರು ಸದಾ ಹೊಸ ಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಕಲ್ಯಾಣ್‌ ರಾಮ್‌ ಅಭಿನಯದ ʼಡೆವಿಲ್‌ʼ ಚಿತ್ರ ಸದ್ದು ಮಾಡುತ್ತಿದೆ. ಫಸ್ಟ್‌ ಗ್ಲಿಂಪ್‌ ಮೂಲಕವೇ ನಿರೀಕ್ಷೆ ಮೂಡಿಸಿದ್ದ ಈ ಚಿತ್ರದಲ್ಲಿ ಕಲ್ಯಾಣ್‌ ರಾಮ್‌ ಗೂಢಚಾರಿ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಮಾಳವಿಕಾ ನಾಯರ್‌ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಿ ಸಿನಿಮಾ ತಂಡ ಕುತೂಹಲ ಹೆಚ್ಚಿಸಿದೆ.

ರಾಜಕಾರಣಿ ಮಾತ್ರದಲ್ಲಿ ಮಾಳವಿಕಾ

ʼಡೆವಿಲ್‌ʼ ಚಿತ್ರದಲ್ಲಿ ಮಾಳವಿಕಾ ನಾಯರ್‌ ಪವರ್‌ ಫುಲ್‌ ರಾಜಕಾರಣಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವುದು ಫಸ್ಟ್‌ ಲುಕ್‌ನಲ್ಲೇ ಸಾಬೀತಾಗಿದೆ. ಮಣಿಮೇಕಲಾ ಎಂಬ ರಾಜಕಾರಣಿಯಾಗಿ ಅವರು ನಟಿಸುತ್ತಿದ್ದಾರೆ. ಬಿಳಿ ಬಣ್ಣದ ಕಾಟನ್ ಸೀರೆ ತೊಟ್ಟು ಭಾಷಣ ಮಾಡುತ್ತಿರುವ ಮಾಳವಿಕಾ ನಾಯರ್ ಫಸ್ಟ್ ಲುಕ್‌ ಗಮನ ಸೆಳೆಯುತ್ತಿದ್ದು, ಇದರಲ್ಲಿ ಶಾಂತಿಯ ಸಂಕೇತವಾದ ಪಾರಿವಾಳವೂ ಇದೆ.

ಕಥೆ ಏನು?

ಚಿತ್ರ ಸ್ವಾತಂತ್ರ್ಯ ಪೂರ್ವದ ಕಥೆ ಹೇಳಲಿದೆ. ಕಲ್ಯಾಣ್‌ ರಾಮ್‌ ಧೈರ್ಯಶಾಲಿ ಬ್ರಿಟಿಷ್‌ ಗೂಢಚಾರಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ತೆಲುಗಿನಲ್ಲಿ ಮಿಂಚುತ್ತಿರುವ ಮಲೆಯಾಳಿ ಬೆಡಗಿ ಸಂಯುಕ್ತಾ ಮೆನನ್‌ ʼಡೆವಿಲ್‌ʼ ಚಿತ್ರದ ನಾಯಕಿ. ನೈಷಾಧಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವರ ಪಾತ್ರದ ಫಸ್ಟ್‌ ಲುಕ್‌ ಅನ್ನು ಚಿತ್ರತಂಡ ಇತ್ತೀಚೆಗೆ ರಿವೀಲ್‌ ಮಾಡಿತ್ತು.

‘ಡೆವಿಲ್’ ಸಿನಿಮಾವನ್ನು ದೇವಾಂಶ್ ನಾಮಾ ಅರ್ಪಿಸುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ನಾಮಾ ನಿರ್ಮಿಸುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ ಈ ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ, ಸೌಂದರ್ಯ ರಾಜನ್ ಛಾಯಾಗ್ರಹಣ ಮಾಡಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ʼಡೆವಿಲ್ʼ ಸಿನಿಮಾ ತಯಾರಾಗುತ್ತಿದ್ದು,‌ ನವೆಂಬರ್ 24ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

ಈ ವರ್ಷದ ಫೆಬ್ರವರಿಯಲ್ಲಿ ತೆರೆಕಂಡ ಕಲ್ಯಾಣ್‌ ರಾಮ್‌ ಅಭಿನಯದ ʼಅಮಿಗೋಸ್‌ʼ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅವರು ತ್ರಿಬಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಜೇಂದ್ರ ರೆಡ್ಡಿ ನಿರ್ದೇಶನದ ಈ ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ಆಶಿಕಾ ರಂಗನಾಥ್‌ ತೆಲುಗಿಗೆ ಪಾದಾರ್ಪಣೆ ಮಾಡಿದ್ದರು. ಆದರೆ ಈ ಚಿತ್ರ ಅಂದುಕೊಂಡಷ್ಟು ಕಲೆಕ್ಷನ್‌ ಮಾಡದ ಹಿನ್ನಲೆಯಲ್ಲಿ ಕಲ್ಯಾಣ್‌ ರಾಮ್‌ ನಿರೀಕ್ಷೆ ಈಗ ʼಡೆವಿಲ್‌ʼ ಚಿತ್ರದ ಮೇಲಿದೆ. ಫಸ್ಟ್‌ ಲುಕ್‌, ಗ್ಲಿಂಪ್‌ ಮೂಲಕವೇ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಯಶಸ್ವಿಯಾಗುತ್ತ ಎನ್ನುವುದನ್ನು ಕಾದು ನೋಡಬೇಕಿದೆ. ಇತ್ತ ನಾಯಕಿ ಸಂಯುಕ್ತಾ ಮೆನನ್‌ ʼವಿರೂಪಾಕ್ಷʼ ಸಿನಿಮಾ ಮೂಲಕ ದೊಡ್ಡ ಮಟ್ಟದ ಗೆಲುವು ಕಂಡಿದ್ದು, ʼಡೆವಿಲ್‌ʼ ಮೂಲಕ ಯಶಸ್ಸಿನ ಓಟ ಮುಂದುವರಿಸುತ್ತಾರೆ ಎನ್ನುವುದು ಅವರ ಅಭಿಮಾನಿಗಳ ನಿರೀಕ್ಷೆ.

ಇದನ್ನೂ ಓದಿ: Shah Rukh Khan: ಡಂಕಿ Vs ಸಲಾರ್: ಸ್ಕ್ರೀನ್‌ಗಳಿಗಾಗಿ ಆಫ್-ಸ್ಕ್ರೀನ್ ಫೈಟ್!

Exit mobile version