ಬೆಂಗಳೂರು: ವರನಟ ರಾಜಕುಮಾರ್ ಪುತ್ರಿ ಪೂರ್ಣಿಮಾ ಮಗ ಧೀರೇನ್ ರಾಮ್ಕುಮಾರ್ ಅವರ ಚೊಚ್ಚಲ ʻʻಶಿವ 143ʼʼ ಸಿನಿಮಾ (Shiva 143) ತೆರೆಗೆ ಬರಲು ಸಜ್ಜಾಗಿದೆ. ಇದೇ ಆಗಸ್ಟ್ 26ರಂದು ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಈಗಾಗಲೇ ಸಿನಿಮಾ ಟೀಸರ್ ಮತ್ತು ಟ್ರೈಲರ್ ಜನಮನ್ನಣೆ ಪಡೆದುಕೊಂಡಿದೆ. ಚಿತ್ರರಂಗ ಸೇರಿದಂತೆ ಪ್ರೇಕ್ಷಕ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ನಾಯಕ ಧೀರೇನ್ ರಾಮ್ಕುಮಾರ್ ಸ್ವತಃ ರಾಜ್ಯದ ಮೂಲೆ ಮೂಲೆಗೆ ತೆರಳಿ ಪ್ರಚಾರ ಮಾಡಿದ್ದಾರೆ.
ಖುಷಿ ವ್ಯಕ್ತಪಡಿಸಿದ್ದ ಅಪ್ಪು!
ಶಿವ ೧೪೩ ಚಿತ್ರದ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಕುಟುಂಬದ ಕುಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ. ಮೈಸೂರಿನಲ್ಲಿ ಚಿತ್ರೀಕರಣದ ವೇಳೆ ಧೀರೇನ್ ನಟನೆಯನ್ನು ನೋಡಿ ಪುನೀತ್ ಖುಷಿ ವ್ಯಕ್ತಪಡಿಸಿದ್ದರು. ಸ್ನೇಹಿತರೊಬ್ಬರ ಬಳಿ ಮಾತನಾಡಿದ್ದ ಅಪ್ಪು, ʻಅವನ ಕಣ್ಣುಗಳನ್ನು ನೋಡಿ, ಹೊಳಪು ಕಾಣುತ್ತಿದೆ. ನಮ್ಮ ಕುಟುಂಬದಿಂದ ಒಳ್ಳೆಯ ಹೀರೋ ಒಬ್ಬ ಬರುತ್ತಿದ್ದಾನೆʼʼ ಎಂದು ಸಂತೋಷ ಪಟ್ಟಿದ್ದರು ಎಂದು ಹೇಳಲಾಗಿದೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಿನಿಮಾದ ಟೀಸರ್ ಬಿಡುಗಡೆಗೊಳಿಸಿದ್ದರು. ಈ ಕುರಿತು ಧೀರೇನ್ ರಾಮ್ಕುಮಾರ್ ʻʻಅಪ್ಪು ಮಾಮಾ ಬಿಡುಗಡೆ ಮಾಡಿದ್ದಷ್ಟೇ ಖುಷಿಯಾಯ್ತುʼʼ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ | Independence Day | ಸ್ಯಾಂಡಲ್ವುಡ್ ಟ್ರಿಬ್ಯೂಟ್ ವಿಡಿಯೊ ಸಾಂಗ್ ಔಟ್: ಇದು ಒಗ್ಗಟ್ಟಿನ ವಂದೇ ಮಾತರಂ!
ಈ ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನವಿದೆ. ಅನಿಲ್ ಕುಮಾರ್ ಚಿತ್ರದ ನಿರ್ದೇಶನ ಮಾಡಿದ್ದು, ಸಿನಿಮಾ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ʻʻಲಾಕ್ಡೌನ್ ಮುಂಚೆಯೇ ಚಿತ್ರ ತಯಾರಾಗಿತ್ತು. ಆದರೆ, ಕೊರೊನಾ ಕಾರಣದಿಂದ ವಿಳಂಬವಾಯಿತು. ಇದು ರೌಡಿಸಂ ಸಿನಿಮಾ ಅಲ್ಲ. ವಿಭಿನ್ನ ಪ್ರೇಮ ಕಥೆಯ ಸಿನಿಮಾʼʼ ಎಂದು ಅನಿಲ್ ಹೇಳಿದ್ದಾರೆ.
ಈ ಚಿತ್ರ ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿದೆ. ಛಾಯಾಗ್ರಹಣ ಜವಾಬ್ದಾರಿಯನ್ನು ಶಿವ ಹೊತ್ತಿದ್ದಾರೆ. ಜಯಣ್ಣ, ಭೋಗೇಂದ್ರ ಮತ್ತು ಡಾ. ಸೂರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ನಾಯಕಿಯಾಗಿ ಮಾನ್ವಿತಾ ಕಾಮತ್ ನಟಿಸಿದ್ದಾರೆ. ಚರಣ್ ರಾಜ್ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾಧುಕೋಕಿಲ ಹಾಗೂ ಚಿಕ್ಕಣ್ಣ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | ಕೃಷ್ಣ ಜನ್ಮಾಷ್ಟಮಿ ದಿನ ಅವಳಿ ಮಕ್ಕಳನ್ನು ಪರಿಚಯಿಸಿದ ಸ್ಯಾಂಡಲ್ವುಡ್ ಕ್ವೀನ್ ಅಮೂಲ್ಯ