ಬೆಂಗಳೂರು: ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ‘ಮಾರ್ಟಿನ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇರುವುದು ಗೊತ್ತೇ ಇದೆ. ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡದವರ ಜತೆ ಧ್ರುವ ಸರ್ಜಾ ಅವರು ಶ್ರೀನಗರಕ್ಕೆ ತೆರಳಿದ್ದರು. ಅಲ್ಲಿ ಶೂಟಿಂಗ್ ಮುಗಿಸಿಕೊಂಡು ದೆಹಲಿಗೆ ವಾಪಸ್ ಬರುವಾಗ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಧ್ರುವ ಸರ್ಜಾ ಹಾಗೂ ಅವರ ‘ಮಾರ್ಟಿನ್’ ಸಿನಿಮಾ ತಂಡದವರು ವಿಮಾನ ದುರಂತದಿಂದ ಪಾರಾಗಿದ್ದಾರೆ. ಇದೀಗ ಈ ಬಗ್ಗೆ ವಿಡಿಯೊ ಹಂಚಿಕೊಂಡಿದ್ದಾರೆ ಧ್ರುವ.
ಧ್ರುವ ಸರ್ಜಾ ಅವರು ವಿಡಿಯೊ ಪೋಸ್ಟ್ ಮಾಡಿ ʻʻಇವತ್ತು ಕೆಟ್ಟ ಅನುಭವ ಆಗಿದೆ. ಕ್ರ್ಯಾಶ್ ಆಗಬೇಕಿದ್ದ ಫ್ಲೈಟ್ ಕೂದಲೆಳೆ ಅಂತರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪೈಲಟ್‌ಗೆ ಧನ್ಯವಾದ. ಈಗ ನಾವು ಸೇಫ್ ಆಗಿದ್ದೇವೆ. ಜೈ ಆಂಜನೇಯʼʼಎಂದು ಧ್ರುವ ಸರ್ಜಾ ಹೇಳಿದ್ದಾರೆ.
ʻʻಮೊದಲ ಬಾರಿ ಸಾವನ್ನು ಹತ್ತಿರದಿಂದ ನೋಡಿ ವಾಪಸ್ ಬಂದಿದ್ದೇನೆ. ನನ್ನ ಪೋಷಕರು, ನನ್ನ ವಿಐಪಿಗಳು ಮತ್ತು ನನ್ನ ಚಿರು ಅವರ ಸಂಪೂರ್ಣ ಆಶೀರ್ವಾದದಿಂದ ಪಾರಾಗಿದ್ದೇನೆ. ಫ್ಲೈಟ್ನಲ್ಲಿ ಇದ್ದ ಎಲ್ಲರೂ ಜೀವ ಉಳಿಸಿಕೊಳ್ಳಲು ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು. ನಾವು ಸೇಫ್ ಆಗಿ ಲ್ಯಾಂಡ್ ಆದಾಗ ಜನರು ಖುಷಿಯಿಂದ ಕೂಗಾಡಿದರು. ಪ್ರತಿಯೊಬ್ಬ ಪ್ರಯಾಣಿಕರು ತಮ್ಮ ಪ್ರೀತಿಪಾತ್ರರನ್ನು ನೆನೆದು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಚೆನ್ನಾಗಿ ಬದುಕಲು ನಮಗೆ ಈ ಮರುಜನ್ಮ ಒಂದು ಕಾರಣವಾಗಿದೆ’ ಎಂದು ಧ್ರುವ ಸರ್ಜಾ ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Dhruva Sarja: ಆಂಜನೇಯ ಪರಮಭಕ್ತ ಧ್ರುವ ಸರ್ಜಾ ಭೇಟಿಯಾದ ‘ಹನುಮಾನ್’ ಸಿನಿಮಾ ಹೀರೊ!
‘ಮಾರ್ಟಿನ್’ ಸಿನಿಮಾಗೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್ ಸರ್ದಾರಿಯಾ ಅವರು ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಅವರು ಕೂಡ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು.ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಟಿನ್ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್ ಕುಮಾರ್, ನಿಕಿತನ್ ಧೀರ್, ನವಾಬ್ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್ ಪಾಠಕ್ ಸಹ ‘ಮಾರ್ಟಿನ್’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.