ಖ್ಯಾತ ಪಂಜಾಬಿ ಗಾಯಕಿ ಜಾಸ್ಮಿನ್ ಸ್ಯಾಂಡ್ಲಸ್ (Jasmine Sandlas) ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಮತ್ತು ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾದ ಹಾಡುಗಳ ಮೂಲಕ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಗಾಯಕಿಯ ಅಸಲಿ ಬಣ್ಣ ಲೈವ್ ಕಾರ್ಯಕ್ರಮವೊಂದರಲ್ಲಿ ಬಯಲಾಗಿದೆ. ಏಪ್ರಿಲ್ 19ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಜಾಸ್ಮಿನ್ ಅವರು ಲೈವ್ ಆಗಿ ಹಾಡುವ ಬದಲು ‘ಲಿಪ್ ಸಿಂಕ್’ (Lip Sync) ಮಾಡುವ ಮೂಲಕ ಪ್ರೇಕ್ಷಕರಿಗೆ ಮೋಸ ಮಾಡಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.
ಕಾರ್ಯಕ್ರಮದ ವೇಳೆ ಜಾಸ್ಮಿನ್ ತಮ್ಮ ಹಿಟ್ ಹಾಡು ‘ಶರಾರತ್’ ಹಾಡುತ್ತಾ ವೇದಿಕೆಯ ಮೇಲೆ ಅತಿರೇಕದ ವರ್ತನೆ ತೋರಿದ್ದಾರೆ. ಹಾಡಿನ ಮಧ್ಯೆ ಹಠಾತ್ತನೆ ಮೈಮೇಲೆ ನೀರು ಸುರಿದುಕೊಂಡು, ವಿಚಿತ್ರವಾಗಿ ಸ್ಟೆಪ್ ಹಾಕುತ್ತಾ ಪ್ರೇಕ್ಷಕರನ್ನು ರಂಜಿಸಲು ಯತ್ನಿಸಿದ್ದಾರೆ. ಆದರೆ, ಇದೇ ವೇಳೆ ಅವರು ಮೈಕ್ ಅನ್ನು ಬಾಯಿಯಿಂದ ದೂರವಿಟ್ಟು ಕೆಳಗೆ ಇಳಿಸಿದರೂ ಹಿನ್ನೆಲೆಯಲ್ಲಿ ಹಾಡು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಕೇಳಿಬರುತ್ತಿತ್ತು. ಇದನ್ನು ಗಮನಿಸಿದ ನೆಟ್ಟಿಗರು, ‘ಲೈವ್ ಕಾನ್ಸರ್ಟ್ ಹೆಸರಿನಲ್ಲಿ ಈಕೆ ಮಾಡುತ್ತಿರುವುದು ಕೇವಲ ಓವರ್ ಆ್ಯಕ್ಟಿಂಗ್ ಅಷ್ಟೇ’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗಾಯಕಿಯ ವಿರುದ್ಧ ಸಮರ ಸಾರಿದ್ದಾರೆ. “ಲೈವ್ ಕಾನ್ಸರ್ಟ್ ಟಿಕೆಟ್ ಪಡೆದು ಜನರನ್ನು ವಂಚಿಸುತ್ತಿದ್ದಾರೆ” ಎಂದು ಕೆಲವರು ದೂರಿದರೆ, “ಕೇವಲ ಎರಡು ಹಾಡು ಹಿಟ್ ಆದ ತಕ್ಷಣ ಇವರಿಗೆ ಅಹಂಕಾರ ನೆತ್ತಿಗೇರಿದೆ” ಎಂದು ಮಗದೊಬ್ಬರು ಕಿಡಿಕಾರಿದ್ದಾರೆ. ಗಾಯಕಿಯನ್ನು ಹಾಡಲು ಕರೆಸಿದ್ದಾರೋ ಅಥವಾ ನಟನೆ ಮಾಡಲೋ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿವೆ. ಇಷ್ಟೆಲ್ಲಾ ವಿವಾದ ಮತ್ತು ಟೀಕೆಗಳು ಕೇಳಿಬರುತ್ತಿದ್ದರೂ, ಜಾಸ್ಮಿನ್ ಸ್ಯಾಂಡ್ಲಸ್ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಅಭಿಮಾನಿಗಳು ಅವರ ಪರವಾಗಿ ಬ್ಯಾಟ್ ಬೀಸುತ್ತಿದ್ದರೂ, ವಿಡಿಯೋ ಸಾಕ್ಷಿ ಮಾತ್ರ ಅವರ ಕಳ್ಳಾಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

