Site icon Vistara News

Actor Darshan : ವೈದ್ಯೆಗೆ ನಾಯಿ ಕಚ್ಚಿದ ಪ್ರಕರಣ; ವಿಚಾರಣೆಗೆ ನಟ ದರ್ಶನ್‌ ಹಾಜರ್‌

Darshan Vist police station

ಬೆಂಗಳೂರು: ತಮ್ಮ ಮನೆಯ ನಾಯಿಯು ವೈದ್ಯೆಯೊಬ್ಬರಿಗೆ ಕಚ್ಚಿದ (Dog Bite) ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್‌ (Actor Darshan) ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ.

ಅಮಿತಾ ಜಿಂದಾಲ್​ ಎಂಬ ಮಹಿಳೆಗೆ ದರ್ಶನ್​ ಮನೆಯ ನಾಯಿ ಕಚ್ಚಿತ್ತು. ಹೀಗಾಗಿ ಅಮಿತಾ ಅವರು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಹೀಗಾಗಿ ಐಪಿಸಿ ಸೆಕ್ಷನ್​ 289ರ ಅಡಿಯಲ್ಲಿ ಕೇಸ್​ ದಾಖಲು ಮಾಡಿಕೊಳ್ಳಲಾಗಿತ್ತು. ನಟ ದರ್ಶನ್‌ ಅವರನ್ನು ಈ ಪ್ರಕರಣದಲ್ಲಿ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಪೊಲೀಸರು ದರ್ಶನ್‌ಗೆ ನೋಟಿಸ್​ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಗೆ ದರ್ಶನ್‌ ಭೇಟಿ ನೀಡಿದ್ದು, ಹೇಳಿಕೆ ನೀಡಿದ್ದಾರೆ.

ಏನಿದು ಘಟನೆ?

ವೈದ್ಯೆಯಾಗಿರುವ ಅಮಿತಾ ಅವರು ಅ.28ರಂದು ಸ್ಪರ್ಶ ಆಸ್ಪತ್ರೆಗೆ ಆಗಮಿಸಿದ ವೇಳೆ ದರ್ಶನ್ ಅವರ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಕಾರು ಪಾರ್ಕಿಂಗ್‌ ಮಾಡಿದ್ದರು. ಆಸ್ಪತ್ರೆಯಿಂದ ಅವರು ವಾಪಸ್‌ ಬಂದಾಗ ಅಲ್ಲಿ ನಾಯಿಗಳು ಇದ್ದವು. ಇದರಿಂದ ಭಯಗೊಂಡ ಅಮಿತಾ ಅವರು, ಆ ನಾಯಿಗಳನ್ನು ಬೇರೆಡೆ ಕರೆದುಕೊಂಡು ಹೋಗುವಂತೆ ನಾಯಿಯನ್ನು ನೋಡಿಕೊಳ್ಳುತ್ತಿರುವ ವ್ಯಕ್ತಿಗೆ ಸೂಚಿಸಿದರೂ ಅವರು ಕೇಳಿಲಿಲ್ಲ ಎಂದು ದೂರಿನಲ್ಲಿ ಅಮಿತಾ ಉಲ್ಲೇಖಿಸಿದ್ದಾರೆ. ನಾಯಿಗಳನ್ನು ಬೇರೆಡೆ ಕರೆದೊಯ್ಯಿರಿ ಎಂದು ಹೇಳಿದರೂ ಅವುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ, ಇಲ್ಲಿ ಯಾಕೆ‌ ಪಾರ್ಕಿಂಗ್ ಮಾಡಿದ್ದೀರಿ ಎಂದು ನನ್ನ ಜತೆಗೆ ವಾಗ್ವಾದ ನಡೆಸಿದರು. ಈ ವೇಳೆ ಏಕಾಏಕಿ ಎರಡು ನಾಯಿಗಳು ದಾಳಿ ಮಾಡಿ ಕಚ್ಚಿವೆ ಎಂದು ವೈದ್ಯೆ ಅಮಿತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ, ಬೇರೆಡೆ ಕರೆದುಕೊಂಡು ಹೋಗುವಂತೆ ಸೂಚಿಸಿದರೂ ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ತಮಗೆ ನಾಯಿಗಳು ಕಚ್ಚಿವೆ. ಹೀಗಾಗಿ ಮಾಲೀಕ ದರ್ಶನ್ ಹಾಗೂ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೈದ್ಯೆ ದೂರಿನಲ್ಲಿ ಮನವಿ ಮಾಡಿದ್ದರು. ಆದರೆ, ಘಟನೆ ನಡೆದು ಎರಡು ವಾರ ಗತಿಸಿದರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗಂಭೀರ ಆರೋಪವನ್ನು ಸಹ ಮಾಡಿದ್ದರು.

ಇದನ್ನೂ ಓದಿ | BY Vijayendra : ಈ ಕಾರಣಕ್ಕೆ ವಿಜಯೇಂದ್ರ ಪದಗ್ರಹಣ ಸಮಾರಂಭಕ್ಕೆ ಹೋಗಿಲ್ಲವೆಂದ ಎಸ್‌ಟಿಎಸ್‌!

ಹೇಳಿಕೆ ನೀಡಿದ ದರ್ಶನ್‌

ಈ ಕುರಿತು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವೈದ್ಯೆ ಅಮಿತಾ ಅವರು ದೂರಿನ ಜತೆ ನೀಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲನೆ ನಡೆಸಿದ್ದಾರೆ, ತನಿಖೆಯನ್ನು ಚುರುಕುಗೊಳಿಸಿ, ನಟ ದರ್ಶನ್‌ ಅವರಿಗೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು. ಈ ಸಂಬಂಧ ನಟ ದರ್ಶನ್‌ ಅವರು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ಹಾಜರಾಗಿ ಹೇಳಿಕೆಯನ್ನು ನೀಡಿದ್ದಾರೆ. ಅದರನ್ವಯ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

Exit mobile version