ಬೆಂಗಳೂರು : ಕನ್ನಡ ಚಿತ್ರರಂಗದ ನಿರ್ದೇಶಕ ಪವನ್ ಒಡೆಯರ್ ಡೊಳ್ಳು ಸಿನಿಮಾದ (Dollu Kannada Movie) ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿ ಹೆಜ್ಜೆ ಇಟ್ಟಿದ್ದಾರೆ. ಇದು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಒಡಲಿಗೆ ಹಾಕಿಕೊಂಡಿರುವುದಲ್ಲದೇ, ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಭಾರಿ ಮೆಚ್ಚುಗೆ ಪಡೆದಿರುವ ಡೊಳ್ಳು ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ.
ನಟರಾಕ್ಷಸ ಡಾಲಿ ಧನಂಜಯ್ ಮಾಯಾನಗರಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ತಾವು ಬೆಂಗಳೂರಿಗೆ ಬಂದ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕನ ಕಣ್ಣಲ್ಲಿ ಮಾಯಾನಗರಿ ಸೊಬಗನ್ನು ತೆರೆದಿಡುವ ಈ ಹಾಡಿಗೆ ಪ್ರದ್ಯುಮ್ನ ನರಹಳ್ಳಿ ಪ್ರಾಸಬದ್ಧ ಪದಪುಂಜಗಳನ್ನು ಪೋಣಿಸಿ ಸಾಹಿತ್ಯ ಬರೆದಿದ್ದಾರೆ. ನಿರ್ದೇಶಕ ಸಾಗರ್ ಪುರಾಣಿಕ್ ಧ್ವನಿಯಾಗಿದ್ದಾರೆ. ಈ ಮೂಲಕ ಸಾಗರ್ ಗಾಯಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.
ಇದನ್ನೂ ಓದಿ | 68th National Film Awards | ಕನ್ನಡದ ಡೊಳ್ಳು ಮತ್ತು ತಲೆದಂಡಕ್ಕೆ ಪ್ರಶಸ್ತಿಯ ಗರಿ
ಜನಪದ ಕಲೆ ಡೊಳ್ಳಿನ ಸುತ್ತಾ ಸಾಗುವ ಕಥಾಹಂದರ ಹೊಂದಿರುವ ಸಿನಿಮಾಗೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ಒಡೆಯರ್ ಮೂವೀಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸಿದ್ದಾರೆ.
ನಿಧಿ ಹೆಗ್ಡೆ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರತ್ ಮುಂತಾದ ಕಲಾವಿದರು ನಟಿಸಿದ್ದಾರೆ. ಶ್ರೀನಿಧಿ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಳತ್ತಿ ಅವರ ಕ್ಯಾಮೆರಾ ಚಿತ್ರಕ್ಕಿದೆ. ಈ ಚಿತ್ರ ಆಗಸ್ಟ್ 26ರಂದು ತೆರೆಗೆ ಬರಲಿದೆ.
ಇದನ್ನೂ ಓದಿ | Dollu Kannada Movie | ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ರಿಲೀಸ್ ಡೇಟ್ ಫಿಕ್ಸ್