Site icon Vistara News

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

Actress Leelavati and Rajkumar film

ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದಾಗಿ ಶುಕ್ರವಾರ ಸಂಜೆ ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದ ನಟಿ ಲೀಲಾವತಿ (Actress Leelavathi) ಅವರು ಸ್ಯಾಂಡಲ್‌ವುಡ್‌ನಲ್ಲಿ (Sandalwood) ತಮ್ಮ ಅಮೋಘ ಅಭಿನಯದ ಮೂಲಕ ಮೋಡಿ ಮಾಡಿದ್ದರು. ಅದರಲ್ಲೂ ಡಾ. ರಾಜ್‌ಕುಮಾರ್‌ – ಲೀಲಾವತಿ ಜೋಡಿ (Dr Rajkumar and Leelavathi) ಭಾರಿ ಜನಪ್ರಿಯವಾಗಿತ್ತು.

ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ ಕನ್ನಡ ಮಾತ್ರವಲ್ಲದೆ, ವಿವಿಧ ಭಾಷೆಗಳ ಸುಮಾರು 600 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಪೈಕಿ ಕನ್ನಡದಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳಿವೆ. ನಾಯಕಿ ಮಾತ್ರವಲ್ಲ ಪೋಷಕ ಪಾತ್ರಗಳಲ್ಲಿಯೂ ಲೀಲಾವತಿ ಮಿಂಚಿದ್ದಾರೆ.

ಡಾ. ರಾಜ್‌ಕುಮಾರ್‌-ಲೀಲಾವತಿ ಜನಪ್ರಿಯ ಜೋಡಿ

ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿಯವರಾದ ಲೀಲಾವತಿ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ವಿಶೇಷ ಎಂದರೆ ಲೀಲಾವತಿ ಮತ್ತು ಡಾ.ರಾಜ್‌ ಕುಮಾರ್‌ ಜೋಡಿ ಬಹಳ ಜನಪ್ರಿಯವಾಗಿತ್ತು. ಇವರಿಬ್ಬರು ಜತೆಯಾಗಿ 45ಕ್ಕಿಂತಲೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎನ್ನುವುದೇ ಇದಕ್ಕೆ ಸಾಕ್ಷಿ.

ಈ ಜೋಡಿ ಒಟ್ಟಿಗೆ ಅಭಿನಯಿಸಿದ ಚಿತ್ರಗಳ ಪಟ್ಟಿ ಇಲ್ಲಿದೆ.

ವೀರ ಕೇಸರಿ (1963), ಭಕ್ತ ಕುಂಬಾರ (1974), ನಾ ನಿನ್ನ ಮರೆಯಲಾರೆ (1976), ಜ್ವಾಲಾಮುಖಿ (1985), ಅಬ್ಬಾ! ಆ ಹುಡುಗಿ (1959), ರಣಧೀರ ಕಂಠೀರವ (1960), ಕರುಣೆಯೇ ಕುಟುಂಬದ ಕಣ್ಣು (1962), ಕಲಿತರು ಹೆಣ್ಣೆ (1963), ನಂದಾ ದೀಪ (1963), ಸಂತ ತಯಕಾರಾಮ (1963), ವಾಲ್ಮೀಕಿ (1963), ಮಹಾಸತಿ ಅನಸೂಯಾ (1965), ಸಿಪಾಯಿ ರಾಮು (1972), ಶ್ರಾವಣ ಬಂತು (1984), ಮೂರೂವರೆ ವಜ್ರಗಳು (1973), ಜಗಜ್ಯೋತಿ ಬಸವೇಶ್ವರ (1959), ರಾಣಿ ಹೊನ್ನಮ್ಮ (1960), ಕೈವಾರ ಮಹಾತ್ಮೆ (1961), ಕಿತ್ತೂರು ಚೆನ್ನಮ್ಮ (1961), ಗಾಳಿ ಗೋಪುರ (1962), ಮನ ಮೆಚ್ಚಿದ ಮಡದಿ (1963), ಚಂದ್ರಹಾಸ (1965), ಮದುವೆ ಮಾಡಿ ನೋಡು (1965), ಮೋಹಿನಿ ಭಸ್ಮಾಸುರ (1966), ದಶಾವತಾರ (1960), ಭೂದಾನ (1962), ಧರ್ಮ ವಿಜಯ (1959), ಕಣ್ತೆರೆದು ನೋಡು (1961), ವಿಧಿ ವಿಲಾಸ (1962), ಜೀವನ ತರಂಗ (1963), ಕನ್ಯಾ ರತ್ನ (1963), ಕುಲವಧು (1963), ಮಲ್ಲಿ ಮದುವೆ (1963), ಶಿವರಾತ್ರಿ ಮಹಾತ್ಮೆ (1964), ತುಂಬಿದ ಕೊಡ (1964), ಇದೇ ಮಹಾ ಸುದಿನ (1965), ನಾಗಪೂಜೆ (1965), ವಾತ್ಸಲ್ಯ (1965), ಪ್ರೇಮಮಯಿ (1966), ತೂಗುದೀಪ (1966), ಗಂಗೆ ಗೌರಿ (1967), ಭಾಗ್ಯ ದೇವತೆ (1968), ಉಯ್ಯಾಲೆ (1969), ದೂರದ ಬೆಟ್ಟ (1973), ವಸಂತ ಗೀತಾ (1980), ಎರಡು ನಕ್ಷತ್ರಗಳು (1983).

ಇದನ್ನೂ ಓದಿ: Actress Leelavati : ಹಿರಿಯ ನಟಿ ಲೀಲಾವತಿ ವಿಧಿವಶ; ಹೋರಾಟದಲ್ಲೇ ಬೆಳೆದ ಲೀಲಮ್ಮ ಇನ್ನಿಲ್ಲ

ನಾಯಕಿಯಿಂದ ಪೋಷಕ ಪಾತ್ರದವರೆಗೆ ಅಭಿನಯ

1970ರ ಬಳಿಕ ಲೀಲಾವತಿ ಪೋಷಕ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಮ್ಮನಾಗಿ, ಅಜ್ಜಿಯಾಗಿ ಹೀಗೆ ನಾನಾ ಬಗೆಯ ಪಾತ್ರಗಳಲ್ಲಿ ನಟಿಸಿದರು. ನಾಟಕ, ರಂಗಭೂಮಿ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾವತಿ ವೃತ್ತಿ ಜೀವನ ಆರಂಭಿಸಿದ್ದು ಮೈಸೂರಿನಲ್ಲಿ.

ಲೀಲಾವತಿ 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಬಳಿಕ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಇನ್ನು ಡಾ. ರಾಜ್‌ಕುಮಾರ್‌ ಜತೆಗೆ ನಾಯಕಿಯಾಗಿ ನಟಿಸಿದ್ದು ಮಾತ್ರವಲ್ಲದೆ, ಕಾಲಾ ನಂತರದಲ್ಲಿ ಅವರಿಗೆ ತಾಯಿಯಾಗಿಯೂ ನಟಿಸಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಅವರು ನೆಲಮಂಗಲದಲ್ಲಿ ತಮ್ಮ ಪುತ್ರ ವಿನೋದ್‌ ರಾಜ್‌ ಜತೆಗೆ ವಾಸವಾಗಿದ್ದರು.

Exit mobile version