ಬೆಂಗಳೂರು: ಲೂಸಿಯಾ ಪವನ್ (Lucia Pawan) ನಿರ್ದೇಶನದ ʻಧೂಮಂʼ (Dhoomam Film) ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ʻಧೂಮಂʼ ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ. ಫಸ್ಟ್ ಲುಕ್ ಕುತೂಹಲಭರಿತವಾಗಿದ್ದು, ಫಹಾದ್ ಫಾಸಿಲ್ ಲುಕ್‌ಗೆ (Fahadh Faasil) ಫ್ಯಾನ್ಸ್ ಫಿದಾ ಆಗಿದ್ದಾರೆ. ʻಬೆಂಕಿಯಿಲ್ಲದೆ ಹೊಗೆ ಇಲ್ಲʼ ಎಂಬ ಕ್ಯಾಪ್ಷನ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಫಸ್ಟ್ ಲುಕ್ ಹಂಚಿಕೊಂಡಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷ. ಪ್ರಧಾನ ಪಾತ್ರದಲ್ಲಿ ಫಹಾದ್ ಫಾಸಿಲ್ ನಟಿಸಿದ್ದಾರೆ. ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಪರ್ಣಾ ಬಾಲಮುರಳಿ ಜತೆಯಾಗಿದ್ದಾರೆ. ಸೆಪ್ಟೆಂಬರ್ 30ರಂದು ಘೋಷಣೆಯಾಗಿದ್ದ ಈ ಸಿನಿಮಾ, ಅಕ್ಟೋಬರ್ 9ರಂದು ಮುಹೂರ್ತ ಮಾಡಿತ್ತು. ಮಾಲಿವುಡ್ ನಟ ಫಹಾದ್ ಮಲಯಾಳಂ ಹೊರತುಪಡಿಸಿ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಪುಷ್ಪ, ವಿಕ್ರಮ್ ಸಿನಿಮಾಗಳಲ್ಲಿ ಕೂಡ ಖ್ಯಾತಿ ಪಡೆದ ಫಹಾದ್ ಬೇಡಿಕೆಯ ನಟನಾಗಿ ಹೊರಹೊಮ್ಮುತ್ತಿದ್ದಾರೆ. ಈಗಾಗಲೇ ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಕೂಡ ಬಿಡುಗಡೆಗೆ ಸಿದ್ಧವಾಗಿದ್ದು, ಅದರ ಸಾಲಿಗೆ ಧೂಮಂ ಕೂಡ ಸೇರಿಕೊಂಡಿದೆ.
ತಾರಾಗಣ
ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣವಿದೆ.
ಇದನ್ನೂ ಓದಿ: Hombale Films | ಹೊಂಬಾಳೆ ಮೊದಲ ಮಲಯಾಳಂ ಫಿಲ್ಮ್ ʻಧೂಮಂʼ ಸಿನಿಮಾ ಚಿತ್ರೀಕರಣ ಮುಕ್ತಾಯ
ಧೂಮಂ ಸಿನಿಮಾದ ಫಸ್ಟ್ ಲುಕ್
ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವ ಹೊಂಬಾಳೆ
ಹೊಂಬಾಳೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ. ಶ್ರೀಮುರಳಿ ಅಭಿನಯದಲ್ಲಿ ಡಾ. ಸೂರಿ ನಿರ್ದೇಶಿಸುತ್ತಿರುವ ‘ಬಘೀರ’ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಹೀಗೆ ಹೊಸ ಚಿತ್ರಗಳು ಸದ್ಯದಲ್ಲೇ ಶುರುವಾಗಲಿವೆ.
ಬೇರೆ ಭಾಷೆಗಳ ಜವಾಬ್ದಾರಿ ಹೊತ್ತ ಹೊಂಬಾಳೆ
ಬೇರೆ ಭಾಷೆಯ ಚಿತ್ರಗಳ ವಿಷಯಕ್ಕೆ ಬಂದರೆ, ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ತಮಿಳಿನಲ್ಲಿ ಎರಡು ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದೆ. ಈ ಪೈಕಿ ಒಂದು ಚಿತ್ರವನ್ನು ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದರೆ, ಇನ್ನೊಂದು ಚಿತ್ರದ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮಲಯಾಳಂನಲ್ಲೂ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಎರಡು ಚಿತ್ರ ನಿರ್ಮಾಣವಾಗುತ್ತಿವೆ. ಪೃಥ್ವಿರಾಜ್ ಸುಕುಮಾರನ್ ನಟಿಸಿ-ನಿರ್ದೇಶಿಸಲಿರುವ ‘ಟೈಸನ್’ ಚಿತ್ರವು ಮುಂದಿನ ವರ್ಷ ಪ್ರಾರಂಭವಾಗಲಿದೆ. ಹಿಂದಿ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.