Site icon Vistara News

Actress Leelavathi: ಇಂದು ಹಾಲು, ತುಪ್ಪ ಕಾರ್ಯ; ಲೀಲಾವತಿ ಆಪ್ತರು ಮಾತ್ರ ಭಾಗಿ

Family performs haalu tuppa rituals of Leelavathi

ಬೆಂಗಳೂರು: ಹಿರಿಯ ನಟಿ ಲೀಲಾವತಿ ಅವರ (Actress Leelavathi) ಅಂತ್ಯ ಸಂಸ್ಕಾರ ನೆಲಮಂಗಲದ ಸೋಲದೇವನಹಳ್ಳಿಯ ತೋಟದ ಮನೆ ಬಳಿ ಕುಟುಂಬಸ್ಥರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ(ಡಿ.9) ಸಂಜೆ ನೆರವೇರಿತು. ಸಕಲ ಸರ್ಕಾರಿ ಗೌರವದೊಂದಿಗೆ ಹಿಂದು ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಯಿತು. ಇಂದು 11.30 ರಿಂದ 12 ಗಂಟೆಯ ಒಳಗೆ ಹಾಲುತುಪ್ಪದ ಕಾರ್ಯ ನಡೆಯಲಿದೆ. ಬಳಿಕ 11 ದಿನದ ಕಾರ್ಯ ಮಾಡಲು ನಿರ್ಧಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರಷ್ಟೇ ಭಾಗಿಯಾಗುತ್ತಾರೆ. ಮಧ್ಯಾಹ್ನ 12 ಗಂಟೆಯ ನಂತರ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ವಿನೋದ್ ರಾಜ್, ಪತ್ನಿ ಅನು, ಪುತ್ರ ಯುವರಾಜ್ ಸೇರಿ ಕುಟುಂಬದ ಆಪ್ತರು ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಲೀಲಾವತಿ ಅವರು ನಿಧನವಾಗಿ ಮೂರು ದಿನಗಳ ಪೂರ್ಣವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೂರನೇ ದಿನದ ಕಾರ್ಯ ನೆರವೇರಿಸಲಿದ್ದಾರೆ.

ವಿನೋದ್‌ ಅವರು ಲೀಲಾವತಿ ಕುರಿತು ಹಲವು ವಿಚಾರಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು. ‘ಕಳೆದ ಹದಿನೈದು ದಿನಗಳಲ್ಲಿ ಅಮ್ಮ ಹೆಚ್ಚು ಮಾತನ್ನೇ ಆಡಿಲ್ಲ. ಅವರಿಗೆ ಸಾಧ್ಯವಾಗುತ್ತಿರಿಲಿಲ್ಲ. . ನನಗೆ ನೆನಪಿರುವಂತೆ ನೀರು ಕುಡಿಸುವಂತೆ ನನ್ನನ್ನು ಕೇಳಿದರು, ನೀರು ಕುಡಿಸಿದೆ, ನೀರು ಕುಡಿದು ಕಣ್ಣು ಮುಚ್ಚಿ ಬಿಟ್ಟರು’ ಎಂದು ನೆನಪು ಮಾಡಿಕೊಂಡಿದ್ದಾರೆ ವಿನೋದ್ ರಾಜ್.

ಪುತ್ರನ ಬಗ್ಗೆಯೂ ಮಾತನಾಡಿದ ವಿನೋದ್ ರಾಜ್, ‘‘ನನ್ನ ಪುತ್ರ ಯುವರಾಜ್ ಎಂದರೆ ಅಮ್ಮನಿಗೆ ಬಹಳ ಪ್ರೀತಿ. ಕಳೆದ ಬಾರಿ ಬಂದಿದ್ದಾಗ ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟು ನೋಡಿದ್ದರು. ಅವನನ್ನು ಚಿತ್ರರಂಗಕ್ಕೆ ತರಬೇಕೆಂಬ ಆಸೆ ಅಮ್ಮನಿಗೆ ಇರಲಿಲ್ಲ. ಆದರೆ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆಯಿತ್ತು, ಹಾಗೆಯೇ ಅವನು ಒಳ್ಳೆಯ ವಿಧ್ಯಾಭ್ಯಾಸ ಮಾಡಿದ್ದಾನೆ. ಸಾಫ್ಟ್​ವೇರ್ ಉದ್ಯೋಗ ಮಾಡುತ್ತಿದ್ದಾನೆ’’ ಎಂದಿದ್ದಾರೆ.

ಇದನ್ನೂ ಓದಿ: Actress Leelavathi: ಮಣ್ಣಲ್ಲಿ ಮಣ್ಣಾದ ಲೀಲಾವತಿ; ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ

ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಸೋಲದೇವನಹಳ್ಳಿಗೆ ಆಂಬ್ಯುಲೆನ್ಸ್‌ನಲ್ಲಿ ತರಲಾಯಿತು. ನಂತರ ವಿನೋದ್‌ ರಾಜ್‌ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ನಂತರ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಸರ್ಕಾರದ ಪರವಾಗಿ ಸಚಿವ ಕೆ.ಎಚ್‌.ಮುನಿಯಪ್ಪ ಪುಷ್ಪಗುಚ್ಛ ಸಮರ್ಪಿಸಿದರು. ಬಳಿಕ ಹಿಂದು ಧರ್ಮದ ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.

Exit mobile version