Site icon Vistara News

Gandhada Gudi | ‘ಪುನೀತ್ ಪರ್ವ’ಕ್ಕೆ ಬಾಲಯ್ಯ, ಸೂರ್ಯ, ಕಮಲ್ ಹಾಸನ್ ಆಗಮನ!

100 Days Of Gandhada Gudi

ಬೆಂಗಳೂರು: ಎಲ್ಲೆಲ್ಲೂ ‘ಗಂಧದ ಗುಡಿ’ (Gandhada Gudi) ಘಮಲು ಹರಡಿದ್ದು, ಸಿನಿಮಾ ರಿಲೀಸ್​ಗೂ ಮೊದಲೇ ಅಬ್ಬರಿಸುತ್ತಿದೆ. ಈಗಾಗಲೇ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಇವೆಂಟ್​ನ ಭರ್ಜರಿಯಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ‘ಪುನೀತ್ ಪರ್ವ’ ಹೆಸರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಟಾಲಿವುಡ್ ಸ್ಟಾರ್ ನಂದಮೂರಿ ಬಾಲಕೃಷ್ಣ, ತಮಿಳು ನಟರಾದ ಸೂಪರ್ ಸ್ಟಾರ್ ಸೂರ್ಯ ಹಾಗೂ ಕಮಲ್ ಹಾಸನ್ ಆಗಮಿಸಲಿದ್ದಾರೆ. ಈ ಮೂಲಕ ಅಕ್ಟೋಬರ್ 21ರಂದು ದೇಶವೇ ಬೆಂಗಳೂರಿನತ್ತ ತಿರುಗಿ ನೋಡಲಿದೆ.

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಮತ್ತಷ್ಟು ಘಟಾನುಘಟಿ ಸ್ಟಾರ್​ಗಳು ಬರಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈವರೆಗೂ ಅಮಿತಾಬ್ ಎಂಟ್ರಿ ಕನ್ಫರ್ಮ್ ಆಗಿಲ್ಲ. ಆದರೆ ನಟ ನಂದಮೂರಿ ಬಾಲಕೃಷ್ಣ, ಸೂರ್ಯ ಹಾಗೂ ಕಮಲ್ ಹಾಸನ್ ಮತ್ತಿತರ ಗಣ್ಯರು ಆಗಮಿಸುವುದು ಪಕ್ಕಾ ಆಗಿದೆ. ಹಾಗೇ ಅಭಿಮಾನಿಗಳ ಸಾಗರವೇ ‘ಪುನೀತ್ ಪರ್ವ’ಕ್ಕೆ ಬರಲಿದೆ. ಲಕ್ಷಾಂತರ ಜನ ಬೆಂಗಳೂರಿಗೆ ಬರಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲು ಅಪ್ಪು ಅಭಿಮಾನಿ ಬಳಗ ಸಜ್ಜಾಗಿದೆ. ಸ್ವಯಂಸೇವೆ ಮೂಲಕ ‘ಪುನೀತ್ ಪರ್ವ’ ಕಾರ್ಯಕ್ರಮ ಯಶಸ್ವಿಗೊಳಿಸಲು ಲಕ್ಷಾಂತರ ಅಭಿಮಾನಿಗಳು ಸಜ್ಜಾಗಿ ನಿಂತಿದ್ದಾರೆ.

ಇದನ್ನೂ ಓದಿ: Head Bush | ಬೆಂಗಳೂರನ್ನು ನಡುಗಿಸಲು ಮತ್ತೊಮ್ಮೆ ಬರ್ತಿದ್ದಾನೆ ಡಾನ್ ಜಯರಾಜ್!

ಊಟ, ವಸತಿ ವ್ಯವಸ್ಥೆ
ಅಕ್ಟೋಬರ್ 21ರಂದು ಅರಮನೆ ಮೈದಾನದಲ್ಲಿ ‘ಪುನೀತ್ ಪರ್ವ’ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ನಡೆಯಲಿದೆ. ಆದರೆ ದಿಢೀರ್ 5 ಲಕ್ಷ ಅಭಿಮಾನಿಗಳು ಬೆಂಗಳೂರಿಗೆ ಬಂದರೆ ಟ್ರಾಫಿಕ್ ನಿರ್ವಹಣೆ ಕಷ್ಟ. ಹೀಗಾಗಿ ಸ್ವತಃ ಅಪ್ಪು ಅಭಿಮಾನಿಗಳೇ ನಿರ್ವಹಣೆ ಹೊಣೆ ಹೊತ್ತಿದ್ದು, ಪೊಲೀಸರಿಗೆ ಸಾಥ್ ನೀಡಿಲಿದ್ದಾರೆ. ಮತ್ತೊಂದು ಕಡೆ ಬೇರೆ ಬೇರೆ ಊರುಗಳಿಂದ ಬರುವ ಫ್ಯಾನ್ಸ್​ಗೆ ಊಟ, ವಸತಿಯ ವ್ಯವಸ್ಥೆ ಕಲ್ಪಿಸಲಿದ್ದಾರೆ. ‘ಗಂಧದ ಗುಡಿ’ ಸಿನಿಮಾ ಮಾತ್ರವಲ್ಲ, ಅದೊಂದು ಭಾವನೆ ಅಂತಿದ್ದಾರೆ ಅಭಿಮಾನಿಗಳು.

‘ಅಮೋಘ’ ಜೋಡಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ‘ವೈಲ್ಡ್ ಕರ್ನಾಟಕ’ ನಿರ್ದೇಶಿಸಿದ್ದವರು ಅಮೋಘವರ್ಷ. ಇದೀಗ ‘ಗಂಧದ ಗುಡಿ’ ಮೂಲಕ ಅಮೋಘವರ್ಷ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ‘ಗಂಧದ ಗುಡಿ’ ಅಪ್ಪು ಹಾಗೂ ಅಮೋಘವರ್ಷ ಕಾಂಬಿನೇಷನ್​ನಲ್ಲಿ ಮೂಡಿಬಂದಿದೆ. ಅಷ್ಟಕ್ಕೂ ‘ಗಂಧದ ಗುಡಿ’ ಶೂಟಿಂಗ್ ಶುರುವಾದಗಲೇ ಭಾರಿ ನಿರೀಕ್ಷೆ ಮೂಡಿಸಿತ್ತು. ಆದರೆ ದುರದೃಷ್ಟವಶಾತ್ ‘ಗಂಧದ ಗುಡಿ’ ರಿಲೀಸ್​​ಗೆ ಮೊದಲೇ ಅಪ್ಪು ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದರು. ಇದಾದ ಬಳಿಕ ‘ಗಂಧದ ಗುಡಿ’ ರಿಲೀಸ್ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಗಳು ಇದೀಗ ನೂರುಪಟ್ಟು ಹೆಚ್ಚಾಗಿದ್ದು, ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ಕೋಟ್ಯಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವ & ಕನ್ನಡ ಸಿನಿ ಕ್ಷೇತ್ರದ ದಿಗ್ಗಜ ಡಾ.ಪುನೀತ್ ರಾಜ್​​ಕುಮಾರ್ ಅಭಿನಯದ ಕೊನೇ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಗಂಧದ ಗುಡಿ ಅ.28ಕ್ಕೆ ಜಗತ್ತಿನಾದ್ಯಂತ ಸಾವಿರಾರು ಸ್ಕ್ರೀನ್​ನಲ್ಲಿ ರಿಲೀಸ್ ಆಗಲಿದೆ. ಹೀಗಾಗಿ ಅಕ್ಟೋಬರ್ 21ರಂದು ಅರಮನೆ ಮೈದಾನದಲ್ಲಿ ‘ಪುನೀತ್ ಪರ್ವ’ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಲಾಗಿದೆ. ಈ ಮೂಲಕ ಅಪ್ಪು ಅಭಿನಯದ ಕೊನೆಯ ಸಿನಿಮಾ ಜಗತ್ತಿನಾದ್ಯಂತ ನಿರೀಕ್ಷೆ ಮೂಡಿಸಿದ್ದು, ಈಗಾಗಲೇ ಟ್ರೈಲರ್ ಹೊಸ ಇತಿಹಾಸವನ್ನೇ ಸೃಷ್ಟಿಮಾಡಿದೆ.

ಇದನ್ನೂ ಓದಿ: Gandhada Gudi | ಗಂಧದ ಗುಡಿಗೆ ಬರಲಿದ್ದಾರೆ 5 ಲಕ್ಷ ಅಪ್ಪು ಅಭಿಮಾನಿಗಳು!

Exit mobile version