ಬೆಂಗಳೂರು : ಖ್ಯಾತ ನಟಿ ಸಾಯಿ ಪಲ್ಲವಿ ಅಭಿನಯದ ‘ಗಾರ್ಗಿ’ ಚಿತ್ರ (Gargi Film) ಜುಲೈ 15ರಂದು ಬಿಡುಗಡೆಯಾಗುತ್ತಿದೆ. ಗೌತಮ್ ರಾಮಚಂದ್ರನ್ ನಿರ್ದೇಶನದ ತಮಿಳಿನ ಈ ಚಿತ್ರವನ್ನು ಕನ್ನಡ ಮತ್ತು ತೆಲುಗಿಗೆ ಡಬ್ ಮಾಡಲಾಗಿದ್ದು, ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ಸಾಯಿ ಪಲ್ಲವಿಯೇ ಧ್ವನಿ ನೀಡಿದ್ದಾರೆ.
ಕನ್ನಡಕ್ಕೆ ಡಬ್ ಆದ ಈ ಚಿತ್ರದ ವಿತರಣೆಯ ಹಕ್ಕನ್ನು ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪಡೆದಿದ್ದಾರೆ. ಅವರು ತಮ್ಮ ʼಪರಂವಃ ಸ್ಟುಡಿಯೋಸ್ʼ ಮೂಲಕ ವಿತರಣೆ ಮಾಡಲಿದ್ದಾರೆ. ಈ ಚಿತ್ರದ ವಿತರಣೆಯ ಹಕ್ಕನ್ನು ತಾವು ಪಡೆದಿರುವುದೇಕೆ ಎಂಬುಕ್ಕೆ ರಕ್ಷಿತ್ ಶೆಟ್ಟಿ ವಿವರಣೆಯನ್ನು ನೀಡಿದ್ದಾರೆ. ಈ ಬಗ್ಗೆ ಪ್ರಕಟಣೆಯೊಂದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ | ಕಾಶ್ಮೀರಿ ಪಂಡಿತರ ಕಗ್ಗೊಲೆ ಮತ್ತು ದನಸಾಗಣೆಗಾರರ ಮೇಲಿನ ಹಲ್ಲೆ ಹೋಲಿಸಿದ ನಟಿ ಸಾಯಿ ಪಲ್ಲವಿ
“ಈ ಚಿತ್ರದ ನಿದೇಶಕ ಗೌತಮ್ ನನ್ನ ಒಳ್ಳೆಯ ಸ್ನೇಹಿತನಾಗಿದ್ದು, ನಾವು ಭೇಟಿಯಾದಗಲೆಲ್ಲ ಸಿನಿಮಾ ಕುರಿತು ಮತ್ತು ಕಥೆಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಗೌತಮ್‌ನ ಸಿನಿಮಾದ ಬಗೆಗಿನ ಪ್ರೇಮ ಮತ್ತು ಒಲವು. ಅದರ ಜತೆಗೆ ʼಗಾರ್ಗಿʼ ಮೂಡಿ ಬಂದಿರುವ ರೀತಿ ಎಲ್ಲವೂ ಈ ಚಿತ್ರವನ್ನು ವಿತರಿಸುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿತುʼʼ ಎಂದು ಅವರು ಈ ಸಿನಿಮಾದೊಂದಿಗೆ ತಮಗಿರುವ ನಂಟಿನ ಕುರಿತು ಹೇಳಿದ್ದಾರೆ.
ಈ ಚಿತ್ರದಲ್ಲಿ ಸ್ವತಃ ಸಾಯಿ ಪಲ್ಲವಿ ಅವರೇ ಕನ್ನಡಕ್ಕೆ ತಮ್ಮ ಧ್ವನಿ ನೀಡಿರುವುದು ವಿಶೇಷ ಎಂದಿರುವ ರಕ್ಷಿತ್ ಶೆಟ್ಟಿ, ಕನ್ನಡ ಡಬ್ಬಿಂಗ್‌ಗೆ ನೆರವು ನೀಡಿದ ಶೀತಲ್ ಶೆಟ್ಟಿ ಹಾಗೂ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋಗಿಂದ್ ವಸಂತ ಸಂಗೀತ ನೀಡಿದ್ದಾರೆ. ಸ್ರೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣ, ಶಫಿಕ್ ಮೊಹಮದ್ ಆಲಿ ಅವರ ಸಂಕಲನ ಈ ಚಿತ್ರಕ್ಕಿದೆ. ಸಾಯಿಪಲ್ಲವಿ, ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್ ಎಸ್ ಶಿವಾಜಿ, ಲಿವಿಂಗ್ ಸ್ಟನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ | 777 ಚಾರ್ಲಿ: ಚಾರ್ಲಿನಾ ಭೇಟಿ ಮಾಡಿದ್ರಾ ಸಾಯಿಪಲ್ಲವಿ? ಚಿತ್ರಕ್ಕೆ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್