ತನ್ನ ಚಿತ್ರ ವಿಚಿತ್ರ ವೇಷಭೂಷಣಗಳಿಂದಲೇ ಸದಾ ಸುದ್ದಿಯಾಗುತ್ತಲೇ ಇರುವ ಕರ್ನಾಟಕದ ಅಳಿಯ ಬಾಲಿವುಡ್ ನಟ ರಣವೀರ್ ಸಿಂಗ್ ಈ ಬಾರಿ ಬೆತ್ತಲೆ ಪೋಸ್ ಕೊಟ್ಟು ಸುದ್ದಿಯಾಗುತ್ತಿರುವುದು ಸದ್ಯ ಭಾರೀ ಟ್ರೆಂಡಿಂಗ್ ಟಾಪಿಕ್. ಬೆತ್ತಲೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ಟಿಪ್ಪಣಿ, ಹಾಸ್ಯ, ಅಪಹಾಸ್ಯಗಳಿಗೆ ಗುರಿಯಾಗಿರುವ ಈ ನಟ ಕೂತಿರುವ ರಗ್/ಕಾರ್ಪೆಟ್ ಕೂಡಾ ಈಗ ಹಾಟ್ ಟಾಪಿಕ್ಕೇ ಬಿಡಿ.
ಸೆಲೆಬ್ರಿಟಿಗಳು ಯಾವತ್ತಿಗೂ ಸುದ್ದಿಯಲ್ಲಿರುವವರು. ಅವರು ಹಾಕಿದ ಚಪ್ಪಲಿಯಿಂದ ಹಿಡಿದು ತಿಂದ ಐಸ್‌ಕ್ರೀಂವರೆಗೆ ಎಲ್ಲವೂ ಸುದ್ದಿಯೇ. ನಟನೋ ನಟಿಯೋ ಹಾಕಿದ ಚಪ್ಪಲಿಯಿಂದ ಹಿಡಿದು ಸ್ಟೈಲಿಶ್ ಕನ್ನಡಕದವರೆಗೆ ಪ್ರತಿಯೊಂದೂ ಮಾರ್ಕೆಟಿಂಗ್ ತಂತ್ರದ ಭಾಗವೇ. ಸೆಲೆಬ್ರಿಟಿಗಳು ಧರಿಸಿದ ಎಲ್ಲದರ ಬಗ್ಗೆಯೂ, ಇದು ಇಂಥ ಔಟ್‌ಲೆಟ್‌ನ ಜಾಕೆಟ್, ಇದು ಇಂಥವರು ಡಿಸೈನ್ ಮಾಡಿದ ಬಟ್ಟೆ, ಇವರು ಹಾಕಿದ ಈ ಬೆಲ್ಟ್ ಒಂದಕ್ಕೇ ಇಷ್ಟು ಲಕ್ಷ ರೂಪಾಯಿಗಳು, ಇವು ಇಂತಿಂತಹ ಬ್ರ್ಯಾಂಡ್‌ನದ್ದು, ಈ ನಟಿಯ ಐ ಶ್ಯಾಡೋ ಈಗಿನ ಹೊಸ ಟ್ರೆಂಡು, ಈಕೆಯ ಬ್ಯಾಗು ಇಂತಹ ಬ್ರ್ಯಾಂಡಿನದ್ದು ಎಂದೆಲ್ಲ ವಿವರಣೆ ಹೊತ್ತ ಸೆಲೆಬ್ರಿಟಿ ಫೋಟೋಗಳು ಮ್ಯಾಗಜಿನ್ ಪುಟದಲ್ಲಿ ರಾರಾಜಿಸುತ್ತದೆ. ಅಭಿಮಾನಿಗಳು ಕಣ್ಣುಬಾಯಿ ಬಿಟ್ಟು ನೋಡುತ್ತಾರೆ. ಅದಕ್ಕೇ, ಆಗಾಗ ಸಿಂಪಲ್ ಆಗಿ ಹವಾಯಿ ಚಪ್ಪಲಿ ಮೆಟ್ಟಿ ವೇದಿಕೆ ಮೇಲೇರಿದ ನಟ ವಿಶೇಷವೆನಿಸುತ್ತಾನೆ. ಅಪರೂಪಕ್ಕೆ ತಲೆಗೆ ಎಣ್ಣೆ ಹಾಕಿ ಕೂದಲು ಬಾಚಿ ಕಟ್ಟಿದ ಸಾಧಾರಣ ದಿರಿಸಿನಲ್ಲಿ ನಮ್ಮ ನಿಮ್ಮಂತೆ ಕಾರಿನಿಂದಿಳಿದ ಸೆಲೆಬ್ರಿಟಿ ಚಪ್ಪಾಳೆ ಗಿಟ್ಟಿಸುತ್ತಾಳೆ.
ಸೆಲೆಬ್ರಿಟಿ ಫೋಟೋಶೂಟ್‌ನಲ್ಲಿಯೂ, ಚಿತ್ರದ ಇಡೀ ಫ್ರೇಮಿನಲ್ಲಿ ಯಾವೆಲ್ಲ ವಸ್ತುವಿದೆಯೋ ಅವೆಲ್ಲ ಮುಖ್ಯವಾಗುತ್ತದೆ. ಅವೆಲ್ಲ ಎಷ್ಟು ಬೆಲೆಯದ್ದು, ಯಾವ ಬ್ರಾಂಡಿನದ್ದು, ಎಲ್ಲಿ ಸಿಗುತ್ತದೆ ಇತ್ಯಾದಿ ಇತ್ಯಾದಿ ವಿಷಯಗಳೆಲ್ಲ ಮುಖ್ಯವಾಗುತ್ತವೆ. ಆದರೆ, ಬೆತ್ತಲೆ ಫೋಟೋಶೂಟ್ ಮಾಡಿಸಿಕೊಳ್ಳುವ ಒಂದು ದೌರ್ಭ್ಯಾಗ್ಯ ಎಂದರೆ ಇಲ್ಲಿ ಇಂಥ ಪ್ರೊಮೇಶನ್‌ಗಳಿಗೆಲ್ಲ ಕಡಿಮೆ ಅವಕಾಶವಿರುತ್ತದೆ. ಇಂಥ ಫೋಟೋಶೂಟ್‌ಗಳಲ್ಲಿ ಏನೂ ಧರಿಸದಿದುದೇ ಮುಖ್ಯವಾದ್ದರಿಂದ ಕಾರಣ ಉಳಿದ ವಿಷಯಗಳು ಗೌಣವಾಗುತ್ತವೆ.
ಇದನ್ನೂ ಓದಿ: ರಣವೀರ್ ಸಿಂಗ್ ನಗ್ನತೆಗೂ, ಹಿಜಾಬ್‌ಗೂ ನಂಟು ಕಲ್ಪಿಸಿ ಆಕ್ರೋಶ ಹೊರಹಾಕಿದ ರಾಜಕೀಯ ನಾಯಕ !
ಆದರೆ, ರಣವೀರ್ ಸಿಂಗ್ ಪೇಪರ್ ಮ್ಯಾಗಜಿನ್‌ಗೆ ಕೊಟ್ಟ ಫೋಟೋಶೂಟ್ ವಿಷಯದಲ್ಲಿ ಹೀಗಾಗಿಲ್ಲ. ಇಡೀ ಫೋಟೋದಲ್ಲಿ ಬೆತ್ತಲೆಯಾಗಿರುವ ಸಿಂಗ್ ಬಿಟ್ಟರೆ ಬೇರೆ ಏನೂ ಇಲ್ಲ ಎಂದು ಮೊದಲ ನೋಟಕ್ಕೆ ಅನಿಸಿದರೂ, ಅಲ್ಲೂ ಇದೆ. ಎಲ್ಲರ ಗಮನ ಸಹಜವಾಗಿಯೇ ಬೆತ್ತಲೆ ದೇಹ ಕೂತ ತಿಳಿನೀಲಿ ಹಾಗೂ ಕೆಂಪು ಬಣ್ಣದ ಕಾಂಬಿನೇಶನ್‌ನ ರಗ್/ಕಾರ್ಪೆಟ್ (ನೆಲಹಾಸು) ಮೇಲೆ ಹೋಗಿದೆ!
ಹೌದು. ಬೆತ್ತಲೆಯಾಗಿರುವ ಈ ಫೋಟೋದಲ್ಲಿ ರಣವೀರ್ ಕೂತಿರುವ ರಗ್ ಅಂತಿಂಥದ್ದಲ್ಲ. ಇದರ ಬೆಲೆ ೬.೬ ಲಕ್ಷ ರೂಪಾಯಿಗಳು ಎಂದು ಗುಲ್ಲೆದ್ದಿದೆ. ಜೈಪುರ್ ರಗ್ಸ್ ಹೆಸರಿನ ಪ್ರೀಮಿಯಂ ರಗ್ ಬ್ರ್ಯಾಂಡ್ ಇದೀಗ ರಣವೀರ್ ಸಿಂಗ್ ಬೆತ್ತಲೆ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪ್ರೊಮೋಶನ್ ಮಾಡಿಕೊಳ್ಳುತ್ತಿದೆ. “ಜೈಪುರ್ ರಗ್ಸ್ ಇರುವಾಗ ಬೇರೆ ಏನೂ ಬೇಕಾಗಿಲ್ಲ” ಎಂಬ ಸಾಲುಗಳನ್ನೂ ಬರೆದುಕೊಂಡಿದೆ.
ಜೈಪುರ್ ರಗ್ಸ್ ತನ್ನ ಐಷಾರಾಮಿ ಹಾಗೂ ಆಕರ್ಷಕ ಕಾರ್ಪೆಟ್‌ಗಳ ಮೂಲಕ ಪ್ರಸಿದ್ಧ ಬ್ರ್ಯಾಂಡ್ ಆಗಿದೆ. ಬಾಲಿವುಡ್ ಬಾದ್‌ಶಾಹ್ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಕೂಡಾ ಈ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಸಂಸ್ಥೆಯ ಕಾರ್ಪೆಟ್‌ಗಳ ಡಿಸೈನಿಂಗ್ ಕೆಲಸವನ್ನು ನೋಡಿಕೊಳ್ಳುತ್ತಾರೆ ಎನ್ನಲಾಗಿದೆ. ಗೌರಿ ಖಾನ್ ಕಾರ್ಪೆಟ್ ಡಿಸೈನ್‌ಗಳು ಇಲ್ಲಿ ೨೦,೦೦೦ ರೂಪಾಯಿಗಳಿಂದ ಶುರುವಾಗಿ ೫ ಲಕ್ಷ ರೂಪಾಯಿಗಳವರೆಗೂ ಇದೆ ಎನ್ನಲಾಗಿದೆ.
ಇದನ್ನೂ ಓದಿ: Ranveer Singh | ಸಾವಿರ ಜನರೆದುರೂ ಬೆತ್ತಲಾಗಬಲ್ಲೆ ಎಂದ ರಣವೀರ್ ಸಿಂಗ್