ಹುಬ್ಬಳ್ಳಿ: ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಭುವನ್ ದಂಪತಿ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು (ಏ.24) ಹುಬ್ಬಳ್ಳಿಯಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಹಲ್ಲೆ ಸಂಬಂಧ ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದು, ನ್ಯಾಯ ದೊರಕಿಸಿ ಕೊಡುವಂತೆ ಸಚಿವರೆದುರು ಮೊರೆ ಇಟ್ಟರು. ದಂಪತಿ ಜತೆ ನಾವಿದ್ದೇವೆ ಎಂದು ಜೋಶಿಯವರು ಧೈರ್ಯ ತುಂಬಿದರು.
ಬೆಂಗಳೂರಿನ ಫ್ರೆಜರ್ ಟೌನ್‌ನಲ್ಲಿ ನಡೆದ ದೌರ್ಜನ್ಯ ಘಟನೆ ಬಳಿಕ ನಟಿ ಹರ್ಷಿಕಾ ಪೂರ್ಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ಬುಧವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿದರು. ಸೂಕ್ತ ಕ್ರಮಕ್ಕೆ ಮನವಿ ಮಾಡಿದರು.
ʻʻನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರುತಿಸಿದ್ದೇವೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿ ಕೆಲ ವ್ಯಕ್ತಿಗಳನ್ನು ತೋರಿಸಿದ್ದು, ಗಲಾಟೆ ಮಾಡಿದವರ ಮುಖಚರ್ಯೆ ಇರುವ ವ್ಯಕ್ತಿಗಳನ್ನು ಗುರುತಿಸಿದ್ದೇವೆʼʼ ಎಂದು ಸಚಿವರೆದುರು ಹೇಳಿದರು.
ʻʻನಮಗೆ ಆದಂತೆ ಬೇರೆ ಯಾರಿಗೂ ಈ ಘಟನೆ ಸಂಭವಿಸಿಬಾರದು. ಹೀಗಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆʼʼ ಎಂದು ಹರ್ಷಿಕಾ ಪೂಣಚ್ಚ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: Harshika Poonacha: ಹರ್ಷಿಕಾ ಪೂಣಚ್ಚ-ಭುವನ್ ಮೇಲೆ ಅಟ್ಯಾಕ್! ಕನ್ನಡ ಮಾತನಾಡಿದ್ದೇ ತಪ್ಪಾಯ್ತಾ?
ಏನಿದು ಘಟನೆ?
ಬೆಂಗಳೂರಿನಲ್ಲಿ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ಪತಿ ನಟ ಭುವನ್ ಮೇಲೆ ಹಲ್ಲೆ ನಡೆದಿತ್ತು. ಕಾರ್ ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ತೆಗೆದು ಚಿನ್ನದ ಸರ ಕದಿಯಲು ಆರೋಪಿಗಳು ಯತ್ನಿಸಿದ್ದರು. ಫ್ರೆಜರ್ ಟೌನ್ ಪುಲಕೇಶಿ ನಗರದಲ್ಲಿ ಘಟನೆ ನಡೆದಿತ್ತು. ಚಿನ್ನದ ಸರ ಕದಿಯಲು ಯತ್ನಿಸಿದ್ದಲ್ಲದೇ ಕನ್ನಡದಲ್ಲಿ ಮಾತನಾಡಬೇಡಿ ಎಂದು ಆರೋಪಿಗಳು ದರ್ಪ ತೋರಿದ್ದರು ಹರ್ಷಿಕಾ ಪೂಣಚ್ಚ ಹಲ್ಲೆ ನಡೆದ ವಿಡಿಯೊವನ್ನು ಚಿತ್ರೀಕರಿಸಿ, ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಘಟನೆ ಕುರಿತು ಹರ್ಷಿಕ ಪೂಣಚ್ಚ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಈ ಘಟನೆ ವಿರುದ್ಧ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿತ್ತು. ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲೂ ಘಟನೆಯ ಕುರಿತು ವರದಿಯಾಗಿತ್ತು.