ಬೆಂಗಳೂರು: ಕೆಜಿಎಫ್, ಕಾಂತಾರದಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ಹೊಂಬಾಳೆ ಫಿಲ್ಮ್ಸ್ (Hombale Films) ಹಲವು ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದೆ. ಅಷ್ಟೇ ಅಲ್ಲದೇ ಬೇರೆ ಭಾಷೆಯ ಸಿನಿಮಾಗಳೂ ಹೊಂಬಾಳೆ ಕೈಯಲ್ಲಿವೆ. ಇದೀಗ ಮತ್ತೆ ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ. ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಜತೆ ಸಿನಿಮಾ ಮಾಡಲು ಸಜ್ಜಾಗಿದೆ ಎನ್ನಲಾಗುತ್ತಿದೆ.
ಹೊಂಬಾಳೆ ಫಿಲ್ಮ್ಸ್ ರಜನಿಕಾಂತ್ ಅವರಿಗೆ ಸಿನಿಮಾ ಮಾಡಲಿದೆ ಎಂದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ವಿಕ್ರಮ್’ (Vikram) ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಜತೆ ಚಿತ್ರ ಮಾಡಲು ಹೊಂಬಾಳೆ ಸಂಸ್ಥೆ ಪ್ಲ್ಯಾನ್ ಮಾಡಿದೆ. ರಜನಿಕಾಂತ್‌ಗಾಗಿಯೇ ಲೋಕೇಶ್ ಈಗಾಗಲೇ ಕಥೆ ಮಾಡಿದ್ದಾರೆ. ತಲೈವಾ 171ನೇ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ರಜನಿಕಾಂತ್ ಅವರು ಲೋಕೇಶ್ ಕಥೆ ಕೇಳಿ ಸಮ್ಮತಿಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ
ಹೊಂಬಾಳೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ. ಶ್ರೀಮುರಳಿ ಅಭಿನಯದಲ್ಲಿ ಡಾ. ಸೂರಿ ನಿರ್ದೇಶಿಸುತ್ತಿರುವ ‘ಬಘೀರ’ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಹೀಗೆ ಹೊಸ ಚಿತ್ರಗಳು ಸದ್ಯದಲ್ಲೇ ಶುರುವಾಗಲಿವೆ.
ಇದನ್ನೂ ಓದಿ: Hombale Films: ಸಿಂಗಲ್ ಸುಂದರನ ಮದುವೆ ಆಮಂತ್ರಣ ಬಂದಾಯ್ತು: ರಾಘವೇಂದ್ರ ಸ್ಟೋರ್ಸ್ ಟ್ರೈಲರ್ ಔಟ್!
ಬೇರೆ ಭಾಷೆಗಳ ಜವಾಬ್ದಾರಿ ಹೊತ್ತ ಹೊಂಬಾಳೆ
ಬೇರೆ ಭಾಷೆಯ ಚಿತ್ರಗಳ ವಿಷಯಕ್ಕೆ ಬಂದರೆ, ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.ತಮಿಳಿನಲ್ಲಿ ಎರಡು ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದೆ. ಈ ಪೈಕಿ ಒಂದು ಚಿತ್ರವನ್ನು ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದರೆ, ಇನ್ನೊಂದು ಚಿತ್ರದ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮಲಯಾಳಂನಲ್ಲೂ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಎರಡು ಚಿತ್ರ ನಿರ್ಮಾಣವಾಗುತ್ತಿವೆ. ಪೃಥ್ವಿರಾಜ್ ಸುಕುಮಾರನ್ ನಟಿಸಿ-ನಿರ್ದೇಶಿಸಲಿರುವ ‘ಟೈಸನ್’ ಚಿತ್ರವು ಮುಂದಿನ ವರ್ಷ ಪ್ರಾರಂಭವಾಗಲಿದೆ. ಹಿಂದಿ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.