ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ (Actor Vishnuvardhan ) ಅವರ ಸ್ಮಾರಕ ಉದ್ಘಾಟನೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಮೈಸೂರಿನ ಎಚ್.ಡಿ ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ನಿರ್ಮಾಣವಾಗಿರುವ ಸ್ಮಾರಕವನ್ನು ಜನವರಿ 29ರಂದು (ಭಾನುವಾರ) ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಾಗುತ್ತದೆ ಎಂದು ನಟ ಅನಿರುದ್ಧ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸ್ಮಾರಕದ ಲೋಕಾರ್ಪಣೆ ಮಾಡಲಿದ್ದಾರೆ.
ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ.. ಹೀಗೆ ಈ ಸ್ಮಾರಕದಲ್ಲಿ ಹತ್ತು ಹಲವು ವಿಶೇಷತೆಗಳಿವೆ.
ಇದನ್ನೂ ಓದಿ | Actor Vishnuvardhan | ʻಕೋಟಿಗೊಬ್ಬʼ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್
ʻʻಮೈಸೂರಿನಲ್ಲಿರುವ ವಿಷ್ಣು ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ 600 ಫೋಟೊಗಳ ಗ್ಯಾಲರಿ ಇದೆ.ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ. ಆಡಿಟೋರಿಯಂ ಕೂಡ ಇಲ್ಲಿ ನಿರ್ಮಿಸಲಾಗಿದೆ. ಸಿನಿಮಾ ಮತ್ತು ನಾಟಕಗಳ ಚಟುವಟಿಕೆಗೆ ಇದು ಅನುಕೂಲವಾಗಲಿದೆ. ಸ್ಮಾರಕದಲ್ಲಿ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಎರಡು ಮುಕ್ಕಾಲು ಎಕರೆಯಲ್ಲಿ ಇಡೀ ಸ್ಮಾರಕ ನಿರ್ಮಾಣಗೊಂಡಿದೆʼʼ ಎಂದು ಅನಿರುದ್ಧ ಅವರು ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು.
ಕೊನೆಗೂ ಉದ್ಘಾಟನೆ ಭಾಗ್ಯ
ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಸಂಬಂಧಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಈಗ ತೆರೆ ಬೀಳುವ ಕಾಲ ಸನ್ನಿಹಿತವಾಗಿದೆ. ವಿಷ್ಣುವರ್ಧನ್ ಅವರು ೨೦೦೯ರ ಡಿಸೆಂಬರ್ ೩೦ರಂದು ನಿಧನರಾಗಿ ೧೩ ವರ್ಷಗಳೇ ಕಳೆದಿವೆ. ಆವತ್ತಿನಿಂದಲೇ ಸ್ಮಾರಕದ ವಿಚಾರದಲ್ಲಿ ಗೊಂದಲ ನಡೆಯುತ್ತಿತ್ತು. ಬೆಂಗಳೂರಿನಲ್ಲೇ ನಿರ್ಮಿಸಬೇಕೇ? ಮೈಸೂರಿನಲ್ಲೇ ಎಂಬ ಹಗ್ಗ ಜಗ್ಗಾಟ ನಡೆದಿತ್ತು. ಅಂತಿಮವಾಗಿ ಮೈಸೂರಿನಲ್ಲಿ ಎಂದು ತೀರ್ಮಾನವಾದರೂ ನಿರ್ಮಾಣ ವಿಳಂಬವಾಗಿದೆ. ಇದೀಗ ಕೊನೆಗೂ ಸ್ಮಾರಕಕ್ಕೆ ಉದ್ಘಾಟನಾ ಭಾಗ್ಯ ದೊರೆತು ವಿಷ್ಣು ಅಭಿಮಾನಿಗಳು ಖುಷಿಪಡುವಂತಾಗಿದೆ. ಹಿಂದೆ ಡಿಸೆಂಬರ್ ೧೬ಕ್ಕೆ ಸ್ಮಾರಕ ಉದ್ಘಾಟನೆಯಾಗಲಿದೆ ಎಂದು ಹೇಳಲಾಗಿತ್ತು, ಬಳಿಕ ದಿನಾಂಕ ಮುಂದೂಡಲಾಗಿತ್ತು.
ಇದನ್ನೂ ಓದಿ | Actor Vishnuvardhana | ಡಾ. ವಿಷ್ಣುವರ್ಧನ್ ನಿವಾಸದ ಗೃಹಪ್ರವೇಶ: ಕನಸಿನ ಮನೆಗೆ ಚೆಂದದ ಹೆಸರು, ವಿಡಿಯೊ ಇಲ್ಲಿದೆ!