-ಶಿವರಾಜ್ ಡಿ ಎನ್ ಎಸ್
ಸುತ್ತಲೂ ಅಚ್ಚ ಹಸಿರಿನಿಂದ ಕೂಡಿರುವ ಸುಂದರ ಗುಡ್ಡಗಾಡು. ನಡುವೆ ಸಮೃದ್ಧವಾಗಿ ಹತ್ತಿ ಬೆಳೆಯುವ ಫಲವತ್ತಾದ ಕಪ್ಪು ರೇಷ್ಮೆಯ ಮಣ್ಣಿನ ಭೂಮಿ. ಕಂದು ಬಣ್ಣದ ಮುಗ್ಧ ಮನಸ್ಸಿನ ಮಂದಿ, ಬಿಳಿ ಚರ್ಮದ ರಕ್ಕಸ ಎನ್ನಬಹುದಾದ ಕ್ರೂರ ಬ್ರಿಟಿಷ್ ಅಧಿಕಾರಿ, ಅವನ ಕಾಮ ಪಿಶಾಚಿ ಮಗ ಹಾಗೂ ಇತ್ತ ಒಳ್ಳೆಯವರು ಎನ್ನಲಾಗದ ಕೆಟ್ಟವರು ಎನ್ನಲಾಗದ ಜಮೀನ್ದಾರ್ ಮನೆತನ, ಇವರೆಲ್ಲರೂ ಇರುವಂತಹ ಒಂದು ಅಸಾಮಾನ್ಯ ಹಳ್ಳಿಯನ್ನು ಸುತ್ತುವರಿದು ಹೆಣೆದಿರುವ ಸ್ವಾತಂತ್ರ್ಯ ಪೂರ್ವ ಕಾಲ್ಪನಿಕ ಕತೆ ಇದು.
ಇದು ದೇಶ ಸ್ವತಂತ್ರಗೊಳ್ಳುವ ಮೂರು ದಿನಗಳ ಹಿಂದಿನಿಂದ ಶುರುವಾಗುವ ಕಥೆ ಎಂದು ಬಿಂಬಿಸುತ್ತ ಚಿತ್ರ ತೆರೆದುಕೊಳ್ಳುತ್ತದೆ. ವೈಟ್ ಗೋಲ್ಡ್, ಬಿಳಿ ಚಿನ್ನ ಎಂದು ಕರೆಸಿಕೊಳ್ಳುವ ಹತ್ತಿಯನ್ನು ಬೆಳೆದು ಅತೀ ಹೆಚ್ಚು ನೂಲು ತಯಾರಾಗುತ್ತಿರುವ ಆ ಹಳ್ಳಿಯಲ್ಲಿ, ಸ್ವಾತಂತ್ರ್ಯದ ನಂತರವೂ ಆದಾಯದ ಪಾಲು ಲಭಿಸಬೇಕು ಎನ್ನುವ ಮಹದಾಲೋಚನೆಯಲ್ಲಿ ಬ್ರಿಟೀಷ್ ಹಿರಿಯ ಅಧಿಕಾರಿಗಳು ಇದ್ದಾರೆ. ಈ ಕುರಿತು ಚರ್ಚಿಸಲು ಅಲ್ಲಿಯ ಬ್ರಿಟೀಷ್ ಜನರಲ್ ರಾಬರ್ಟ್‌ಗೆ ಬುಲಾವ್ ಕೊಡುತ್ತಾರೆ, ಅಲ್ಲಿನ ಗುಡ್ಡಗಾಡು ಜನರಿಗೆ ಊರಿನಿಂದ ಹೊರಹೋಗುವ, ಬರುವ ಸ್ವಾತಂತ್ರ್ಯ ಇಲ್ಲ, ಆಗಾಗ ಅಲ್ಲಿಯ ಟೆಲಿಪೋನ್ ಕೂಡ ಸಂಪರ್ಕ ಸ್ಥಗಿತಗೊಳ್ಳುತ್ತದೆ. ಹೋಗಿ ಬರಲು ಸುಲಭ ಮಾರ್ಗಗಳೂ ಇಲ್ಲ. ಇಂತಹ ಸಂಪರ್ಕ ರಹಿತ ಹಳ್ಳಿ ಹೇಗಿದೆ, ಅಲ್ಲಿಯ ಜನರು ಹೇಗಿದ್ದಾರೆ, ಆ ಊರಿನ ಉಸ್ತುವಾರಿ ವಹಿಸಿರುವ ನರ ರೂಪ ರಕ್ಕಸ ರಾರ್ಬರ್ಟ್ ಕ್ಲೈವ್ ಯಾರು, ಆತನ ವ್ಯಕ್ತಿತ್ವ ಎಂಥದ್ದು ಎಂದು ಅಧಿಕಾರಿಗಳು ನೀಡಿದ ಪತ್ರ ಹಿಡಿದು ಸೆಂಗಾಡಿನತ್ತ ಸಾಗುತ್ತಿರುವ ಇಬ್ಬರು ಪೇದೆಗಳೊಂದಿಗೆ ಸಾಗುವ ಸಿನಿಮಾ ಟೈಟಲ್ ಕಾರ್ಡ್ ನಂತರ ಸೀದಾ ಹಳ್ಳಿಯ ಹತ್ತಿ ತೋಟಕ್ಕೆ ತಂದು ಬಿಡುತ್ತದೆ.
ಆಗುಹೋಗುಗಳನ್ನು ಅರಿಯದ ಪುಲಿಯಂಗುಡಿ ಎನ್ನುವ ಊರಿನ ಸಮೀಪದ ಸೆಂಗಾಡು ಗ್ರಾಮಸ್ಥರಿಗೆ ಇನ್ನೂ ಮೂರು ದಿನಗಳಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರುವ ಸುದ್ದಿಯೇ ತಿಳಿದಿಲ್ಲ. ಅವರಿಗೆ ತಿಳಿದಿರುವುದೆಂದರೆ ದೊರೆ ಎಂದು ಕರೆಯುವ ಬ್ರಿಟೀಷ್ ಜನರಲ್ ರಾಬರ್ಟ್ ಮತ್ತು ಅವನ ಮಗನ ಕ್ರೌರ್ಯ, ಮಾತು ಮೀರಿದರೆ ಎದುರಾಗುವ ಪರಿಣಾಮ, ಅವರು ನೀಡುವ ಅಮಾನುಷ ಶಿಕ್ಷೆಯಷ್ಟೆ.
ಇದನ್ನೂ ಓದಿ: ನೋಡಲೇಬೇಕಾದ ಸಿನಿಮಾ: Where The Crawdads Sing; ಸ್ವತಂತ್ರ ಹೆಣ್ಣಿನ ಸಂಪೂರ್ಣ ಬದುಕಿನ ಚಿತ್ರಣ
ಆ ಹಳ್ಳಿಯಲ್ಲಿ ನಡೆಯುವ ದೌರ್ಜನ್ಯ ಒಂದೆರಡಲ್ಲ, ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಹೊತ್ತೊಯ್ಯುವ ರಾಬರ್ಟ್ ಮಗ ಜಸ್ಟೀನ್, ತಪ್ಪಿಸಲು ಯಾರೇ ಮುಂದಾದರೂ ಅವರ ಬಂದೂಕುಗಳಷ್ಟೆ ಮಾತನಾಡುತ್ತಿದ್ದವು, ಕಾಮುಕನ ಕಣ್ಣು ತಪ್ಪಿಸಲು ಹೆಣ್ಣು ಮಕ್ಕಳಿಗೆ ಗಂಡುಮಕ್ಕಳಂತೆ ಮಾರು ವೇಷ ಹಾಕಿ ಬೆಳೆಸಬೇಕಿತ್ತು. ಅವನ ಅಮಾನುಷ ಕೃತ್ಯಕ್ಕೆ ಹೆದರುತ್ತಿದ್ದ ಮಂದಿ ಹೆಣ್ಣು ಮಕ್ಕಳು ವಯಸ್ಸಿಗೆ ಬಂದರೆ ಸಜೀವ ಸಮಾಧಿ ಮಾಡಲು ಮುಂದಾಗುತ್ತಿದ್ದರು. ದಿನದಲ್ಲಿ ಹದಿನಾರು ಗಂಟೆಗಳ ಕಾಲ ದುಡಿಯಬೇಕು. ಕೆಲಕ್ಷಣ ಮೈ ಮರೆತರೂ ಚಡೀ ಏಟು. ಹಸಿದಾಗ ಊಟವೂ ಇಲ್ಲ ದಣಿದಾಗ ನೀರು ಕುಡಿಯುವ ಹಾಗಿಲ್ಲ. ಮಲ ಮೂತ್ರಕ್ಕೂ ತೆರಳುವ ಹಾಗಿಲ್ಲ, ಇಂತಹ ಕ್ರೂರ ವ್ಯವಸ್ಥೆಯ ಹಳ್ಳಿಯೊಳಗೊಂದು ನಿಷ್ಕಲ್ಮಶ ಪ್ರೇಮಕಾವ್ಯ.
ದೌರ್ಜನ್ಯದ ದೆಸೆಯಿಂದ ಅನಾಥನಾಗಿ ಬೆಳೆದ ಪರಮನ್ ಹಾಗು ಜಮೀನ್ದಾರರ ಮಗಳು ತೇನ್ಮಲ್ಲಿ ನಡುವೆ ಪ್ರೇಮ ಚಿಗುರುವುದು, ಅವರಿಬ್ಬರೂ ಒಂದಾಗುತ್ತಾರಾ? ಅಷ್ಟಕ್ಕೂ ಜಸ್ಟಿನ್ ಕಣ್ತಪ್ಪಿಸಿ ಜಮೀನ್ದಾರನ ಮಗಳು ಹೇಗೆ ಉಳಿದಿರಲು ಸಾಧ್ಯ? ಬ್ರಿಟಿಷ್ ಜನರಲ್ ರಾಬರ್ಟ್ ಕ್ಲೈವ್ ಕ್ರೌರ್ಯದ ವಿರುದ್ಧ ಪರಮನ್ ಹೋರಾಡುತ್ತಾನಾ? ಆ ಹೋರಾಟ ಹೇಗೆ ರೂಪುಗೊಳ್ಳುತ್ತದೆ? ಶತಮಾನಗಳಿಂದ ದಬ್ಬಾಳಿಕೆಯ ಸಂಕೋಲೆಯಲ್ಲಿ ಸಿಲುಕಿರುವ ಸೆಂಗಾಡು ಸ್ವತಂತ್ರ ಆಗುವುದು ಹೇಗೆ ಎನ್ನುವುದೇ ಚಿತ್ರದ ಕಥಾಹಂದರ.
ನರಕ ಯಾತನೆಯನ್ನು ಅನುಭವಿಸುವ ಸೆಂಗಾಡಿನ ಕಟ್ಟುವಿಕೆ ಅಚ್ಚುಕಟ್ಟಾಗಿದೆ. ಜನರ ಮೇಲಿನ ದೌರ್ಜನ್ಯ ದೃಶ್ಯಗಳನ್ನು ನೈಜವೆನಿಸಿ ಪ್ರೇಕ್ಷಕರ ಮನ ಕಲಕಿಸುತ್ತದೆ. ಸಂಪೂರ್ಣ ಚಿತ್ರ ಕುತೂಹಲ ಉಳಿಸಿಕೊಂಡು ನೋಡಿಸಿಕೊಳ್ಳುತ್ತದೆ. ಪ್ರೇಮ ಕಥೆ ಹಳೆಯತೆನಿಸಿದರೂ ಮುದ ನೀಡುತ್ತದೆ. ತೇನ್‌ಮಲ್ಲಿಯ ಸಹಜ ಸೌಂದರ್ಯವು ಮನದಲ್ಲಿ ಉಳಿಯಬಹುದು. ಒಟ್ಟಾರೆ ಸಿನಿಮಾ ಒಂದು ಕಾದಂಬರಿ ಓದಿದ ಅನುಭವವನ್ನು ನೀಡಬಹುದು.
ರಾಬರ್ಟ್ ಕ್ಲೈವ್ ಆಗಿ Richard Ashton, ಜೆಸ್ಟಿನ್ ಪಾತ್ರದಲ್ಲಿ Jason Shah, ಜಮೀನ್ದಾರ್ ಮಧುಸೂದನ್ ರಾವ್ ಪರಮನ್ ಪಾತ್ರದಲ್ಲಿ ಗೌತಮ್ ಕಾರ್ತಿಕ್, ತೇನ್‌ಮಲ್ಲಿಯಾಗಿ ರೇವತಿ ಶರ್ಮಾ ನಟಿಸಿದ್ದಾರೆ. ಇನ್ನೂ ಹತ್ತು ಹಲವು ಪಾತ್ರಗಳೂ ಚಿತ್ರದಲ್ಲಿದ್ದೂ ಎಲ್ಲರು ಅಮೋಘ ಅಭಿನಯ ನೀಡಿದ್ದಾರೆ.
ಇದನ್ನೂ ಓದಿ: ನೋಡಲೇಬೇಕಾದ ಸಿನಿಮಾ : Sirf Ek Bandaa Kaafi Hai; ನ್ಯಾಯದ ಕನ್ನಡಿ, ಹೋರಾಟದ ಛಲಕ್ಕೆ ಮುನ್ನುಡಿ ಬರೆಯುವ ಚಿತ್ರ
ನಿರ್ದೇಶನ ಮಾಡಿರುವ N. S. Ponkumar ಚಿತ್ರಕ್ಕೆ ತಾವೇ ಕತೆ, ಚಿತ್ರಕಥೆ ರಚಿಸಿ ತೆರೆಮೇಲೆ ತಂದಿದ್ದು, Selvakumar s.k ಅವರ ಸುಂದರ ಛಾಯಗ್ರಹಣವಿದೆ. ಈ ಚಿತ್ರಕ್ಕೆ Sean roldan ಸಂಗೀತ ನೀಡಿದ್ದಾರೆ. A R Murugadoss ಹಾಗೂ Purple Bull Entertainmentನವರು ಬಂಡವಾಳ ಹೂಡಿದ್ದಾರೆ. ಚಿತ್ರ ಏಪ್ರಿಲ್ 2023ರಲ್ಲಿ ತೆರೆ ಕಂಡಿತ್ತು. ಸದ್ಯ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿದ್ದು ಆಸಕ್ತರು ನೋಡಬಹುದು.