ಬೆಂಗಳೂರು: ‘ಕವಚ’ ಸಿನಿಮಾ ಖ್ಯಾತಿಯ ನಟಿ ಹಾಗೂ ನಿರ್ಮಾಪಕಿ ಇತಿ ಆಚಾರ್ಯ (Iti Acharya) ಅಮೆರಿಕನ್ ಮ್ಯೂಸಿಕ್ ವಿಡಿಯೊದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೆರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಕಂಪೋಸ್ ಮಾಡಿರುವ ಆಲ್ಬಂ ಸಾಂಗ್‌ನಲ್ಲಿ ಕನ್ನಡತಿ ಇತಿ ಆಚಾರ್ಯ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮೆರ್ಲಿನ್ ಬಾಬಾಜಿ ಅಮೆರಿಕದಲ್ಲಿ ಖ್ಯಾತಿ ಗಳಿಸಿರುವ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ. ಕಳೆದ ವರ್ಷ ಇವರ ‘ವೈಬ್ಸ್’ ಸಾಂಗ್ ಬಿಡುಗಡೆಯಾಗಿ ಪ್ರಪಂಚದಾದ್ಯಂತ ಜನಪ್ರಿಯಗೊಂಡಿತ್ತು. ಸೋಷಿಯಲ್ ಮೀಡಿಯಾ ಸೆನ್ಸೇಶನ್ ಆಗಿದ್ದ ‘ವೈಬ್ಸ್’ ಸಾಂಗ್ ಹತ್ತು ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಇದೀಗ ಮತ್ತೊಂದು ವಿಡಿಯೊ ಸಾಂಗ್ ಮೂಲಕ ಮೆರ್ಲಿನ್ ಸೆನ್ಸೇಶನ್ ಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ. ತಮ್ಮ ಹೊಸ ವಿಡಿಯೊ ಹಾಡಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವ ನಟಿ ಹಾಗೂ ಮಾಡೆಲ್ ಇತಿ ಆಚಾರ್ಯ ಅವರ ಜತೆ ಕೈ ಜೋಡಿಸಿರುವುದು ವಿಶೇಷ.
ಮೆರ್ಲಿನ್ ಬಾಬಾಜಿ ಕಳೆದ ಒಂದು ವರ್ಷದಿಂದ ನನಗೆ ಪರಿಚಿತರು. ಅವರ ಸಂಗೀತದ ದೊಡ್ಡ ಅಭಿಮಾನಿ ನಾನು. ‘ಲವ್ ಹರ್ ಟೂ ಮಚ್’ ಸಾಂಗ್ ಕೇಳಿದ ಮೇಲೆ ತುಂಬಾ ಇಷ್ಟವಾಯ್ತು. ನಾನು ಈ ಹಾಡಿನಲ್ಲಿ ನಟಿಸುವೆ ಎಂದು ಹೇಳಿದೆ ಎಂದು ಇತಿ ಆಚಾರ್ಯ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ; Iti Acharya: ಫ್ಯಾಷನ್ ಶೋನಲ್ಲಿ ಅಪ್ಸರೆಯಂತೆ ಕಂಡ ಇತಿ ಆಚಾರ್ಯ
ಇತಿ ಆಚಾರ್ಯ ಸಹೋದರ ಅಭಿ ಆಚಾರ್ಯ ಕೂಡ ಅಮೆರಿಕಾದಲ್ಲಿ ಸಂಗೀತ ಕಲಾವಿದರಾಗಿದ್ದು, 2023ರ ಗ್ರ್ಯಾಮ್ಮಿ ಅವಾರ್ಡ್‌ನಲ್ಲಿ ಇವರ ಹೆಸರು ನಾಮ ನಿರ್ದೇಶನವಾಗಿತ್ತು. ಅಮೆರಿಕಾದಲ್ಲಿ ನನ್ನ ಸಹೋದರ ನೆಲೆಸಿರುವುದು ಅಲ್ಲಿನ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಗಿದೆ ಎನ್ನುತ್ತಾರೆ ಇತಿ ಆಚಾರ್ಯ.
ನಟಿ ಹಾಗೂ ಮಾಡೆಲ್ ಆಗಿರುವ ಇತಿ ಆಚಾರ್ಯ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್. ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಒಳಗೊಂಡಂತೆ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ. ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್‌ನಲ್ಲಿ ಕಾಣಿಸಿಕೊಂಡ ಹಿರಿಮೆ ಇವರದ್ದು, 2022ರ ಕ್ಯಾನಿಸ್ ಫಿಲ್ಮ್ಸ್ ಫೆಸ್ಟ್ ರೆಡ್ ಕಾರ್ಪೆಟ್‌ನಲ್ಲೂ ಇತಿ ಹೆಜ್ಜೆ ಹಾಕಿದ್ದಾರೆ. ಇದೀಗ ಅಮೆರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದಾರೆ.