Site icon Vistara News

Kalki 2898 AD: ಕ್ಯೂ ನಿಂತು ಟಿಕೆಟ್‌ ಖರೀದಿಸಿ ʼಕಲ್ಕಿʼ ವೀಕ್ಷಿಸಿದ ಸ್ಟಾರ್‌ ನಿರ್ದೇಶಕ! ವೈರಲ್‌ ಫೋಟೊ ಇಲ್ಲಿದೆ

Kalki 2898 AD

Kalki 2898 AD

ಮುಂಬೈ: ಈ ವರ್ಷದ ಬಹು ನಿರೀಕ್ಷಿತ, ಅತ್ಯಂತ ದುಬಾರಿ ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ವಿವಿಧ ಭಾಷೆಗಳಲ್ಲಿ ಇಂದು (ಜೂನ್‌ 27) ವಿಶ್ವಾದ್ಯಂತ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಟಾಲಿವುಡ್‌ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ (Nag Ashwin) ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮತ್ತಿತರರು ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕಮಲ್‌ ಹಾಸನ್‌ ಮತ್ತು ಶೋಭನಾ ಕಾಣಿಸಿಕೊಂಡಿದ್ದಾರೆ. ಪೌರಾಣಿಕ ಕಥೆಯನ್ನು ಆಧುನಿಕ ಜಗತ್ತಿನೊಂದಿಗೆ ಬೆರೆಸಿದ ಈ ಸೈನ್ಸ್‌ ಫಿಕ್ಷನ್‌ಗೆ ಪ್ರೇಕ್ಷಕರು ಜೈ ಎಂದಿದ್ದಾರೆ. ಎಲ್ಲ ಶೋಗಳು ಹೌಸ್‌ಫುಲ್‌ ಆಗಿವೆ. ಈ ಮಧ್ಯೆ ಟಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರಗಳ ಜನಪ್ರಿಯ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ (S.S. Rajamouli) ಇಂದು ಮುಂಜಾನೆಯೇ ʼಕಲ್ಕಿʼ ಸಿನಿಮಾವನ್ನು ವೀಕ್ಷಿಸಿದ್ದು, ಅವರು ಥಿಯೇಟರ್‌ನಲ್ಲಿ ನಿಂತಿರುವ ಫೋಟೊ ವೈರಲ್‌ ಆಗಿದೆ.

ರಾಜಮೌಳಿ, ಅವರ ಪತ್ನಿ ರಮಾ ಮತ್ತು ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಥಿಯೇಟರ್‌ ಮುಂದೆ ನಿಂತಿರುವ ಫೋಟೊ ಇದಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ‌ʼʼಎಲ್ಲ ಕಡೆ ಶೋ ಹೌಸ್‌ಫುಲ್‌ ಆಗಿದೆ. ರಾಜಮೌಳಿ, ಕೀರವಾಣಿ ಅವರೂ ಚಿತ್ರದ ಟಿಕೆಟ್‌ಗಾಗಿ ಕಾಯುವಂತಾಗಿದೆʼʼ ಎಂದು ಕ್ಯಾಪ್ಶನ್‌ ಬರೆದು ಫೋಟೊ ಹಂಚಿಕೊಳ್ಳಲಾಗಿದೆ.

ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ರಾಜಮೌಳಿ ʼಕಲ್ಕಿʼ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದರು. ಟ್ರೈಲರ್‌ ವೀಕ್ಷಿಸಿ, ʼʼಅದ್ಭುತ ಟ್ರೈಲರ್‌. ಅಮಿತಾಭ್‌, ಪ್ರಭಾಸ್‌, ದೀಪಿಕಾ ಪಡುಕೋಣೆ ಪಾತ್ರಗಳು ಮನ ಮುಟ್ಟುವಂತಿದೆ. ಕಮಲ್‌ ಹಾಸನ್‌ ಅವರ ಲುಕ್‌ ಅಂತೂ ಅಮೋಘವಾಗಿದೆʼʼ ಎಂದು ಬರೆದುಕೊಂಡಿದ್ದರು. ತೆರೆಮೇಲೆ ಮ್ಯಾಜಿಕ್‌ ಸೃಷ್ಟಿಸುವ ರಾಜಮೌಳಿ ಅವರಂತಹ ನಿರ್ದೇಶಕರೇ ಶ್ಲಾಘಿಸಿರುವುದು ಚಿತ್ರತಂಡದ ಆತ್ಮವಿಶ್ವಾಸ ವೃದ್ಧಿಸಿತ್ತು.

ಮನಸೋತ ಪ್ರೇಕ್ಷಕರು

ತೆರೆಮೇಲೆ ಬೇರೆಯದೇ ಲೋಕ ತೆರೆದಿಟ್ಟ ನಿರ್ದೇಶಕರ ಶ್ರಮವನ್ನು ಚಿತ್ರ ನೋಡಿದ ಪ್ರತಿಯೊಬ್ಬರೂ ಶ್ಲಾಘಿಸುತ್ತಿದ್ದಾರೆ. ಹಾಲಿವುಡ್‌ ಚಿತ್ರದ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಅದ್ಭುತ ವಿಷುವಲ್ಸ್‌, ನಟನೆ, ಕಥೆ, ನಿರ್ದೇಶನ ಹೀಗೆ ಹಲವು ಕಾರಣಗಳಿಂದ ಸಿನಿಮಾ ವೀಕ್ಷಕರ ಮನಗೆದ್ದಿದೆ. ಸಂಗೀತ, ಡಬ್ಬಿಂಗ್‌, ಎಡಿಟಿಂಗ್‌ ಇನ್ನೂ ಉತ್ತಮಪಡಿಸಬಹುದಾಗಿತ್ತು ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ನಿರ್ದೇಶಕರೇ ಹೇಳಿರುವಂತೆ ಇದು ಸುಮಾರು 6,000 ವರ್ಷಗಳಲ್ಲಿ ನಡೆಯುವ ಕಥೆ. ಕುರುಕ್ಷೇತ್ರ ಯುದ್ಧದ ಅಂತ್ಯದ ಮೂಲಕ ಚಿತ್ರ ಆರಂಭವಾಗುತ್ತದೆ. ಬಳಿಕ ಕಥೆ 6,000 ವರ್ಷಗಳ ನಂತರಕ್ಕೆ ಬದಲಾಗುತ್ತದೆ. ಅದು ಕಲಿಯುಗದ ಅಂತ್ಯದ ಸಮಯ. ಆಗ ಅರಾಜಕತೆ ತಾಂಡವವಾಡುತ್ತಿರುತ್ತದೆ. ಒಳಿತಿನ ವಿರೋಧಿ ಯಾಸ್ಕಿನ್, ಕಾಂಪ್ಲೆಕ್ಸ್ ಹೆಸರಿನ ಭವ್ಯ ಪ್ರಪಂಚವನ್ನೇ ಕಟ್ಟಿಕೊಂಡು ಅಮರತ್ವ ಪಡೆಯುವ ಹಪಾಹಪಿಯಲ್ಲಿರುತ್ತಾನೆ. ಆತನ ಅಟ್ಟಹಾಸ ಹೇಗೆ ಮತ್ತು ಯಾರು ಮಟ್ಟ ಹಾಕುತ್ತಾರೆ ಎನ್ನುವುದೇ ಸಿನಿಮಾದ ಒಟ್ಟು ಸಾರಾಂಶ. ಭೈರವನಾಗಿ ಪ್ರಭಾಸ್‌, ಸುಮತಿಯಾಗಿ ದೀಪಿಕಾ, ಅಶ್ವತ್ಥಾಮನಾಗಿ ಅಮಿತಾಭ್‌ ಬಚ್ಚನ್‌, ಯಾಸ್ಕಿನ್ ಆಗಿ ಕಮಲ್‌ ಹಾಸನ್‌ ಕಮಾಲ್‌ ಮಾಡಿದ್ದಾರೆ. ವೈಜಯಂತಿ ಮೂವೀಸ್‌ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಿಸಿದ್ದು, ಯಾವೆಲ್ಲ ದಾಖಲೆ ಉಡೀಸ್‌ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Kalki 2898 AD Review: ʼಕಲ್ಕಿʼ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ಎಂದ ಪ್ರೇಕ್ಷಕರು; ಹೀಗಿದೆ ನೋಡುಗರ ಪ್ರತಿಕ್ರಿಯೆ

Exit mobile version