ಚೆನ್ನೈ: ಹಿರಿಯ ನಟ, ಚಿತ್ರ ನಿರ್ಮಾಪಕ ಕಮಲ್ ಹಾಸನ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಚೆನ್ನೈನ ಪೊರುರ್ನಲ್ಲಿರುವ ಶ್ರೀ ರಾಮಚಂದ್ರ ವೈದ್ಯಕೀಯ ಕೇಂದ್ರ ಆಸ್ಪತ್ರೆ (SMRC)ಗೆ ದಾಖಲಾಗಿದ್ದಾರೆ. ನವೆಂಬರ್ 23ರಂದು ಅವರಲ್ಲಿ ಜ್ವರ ಕಾಣಿಸಿಕೊಂಡು, ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಗುರುವಾರ ಅವರು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಎಸ್.ಶಂಕರ್ ನಿರ್ದೇಶನದ ಇಂಡಿಯನ್ 2 ಸಿನಿಮಾ, ತಮಿಳು ಬಿಗ್ಬಾಸ್ ಸೀಸನ್ 6 ಶೂಟಿಂಗ್ಗಳಲ್ಲಿ ಕಮಲ್ ಹಾಸನ್ ತೊಡಗಿಸಿಕೊಂಡಿದ್ದಾರೆ. ಅದರೊಂದಿಗೆ ರಾಜಕೀಯ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಕಮಲ್ ಹಾಸನ್ ಹೈದರಾಬಾದ್ಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬಂದ ಅವರಿಗೆ ಜ್ವರ-ಅನಾರೋಗ್ಯ ಕಾಣಿಸಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ನೀಡುವ ಜತೆ, ರೆಗ್ಯೂಲರ್ ಚೆಕಪ್ ಕೂಡ ನಡೆಸಲಾಗಿದೆ.
ಕಮಲ್ ಹಾಸನ್ ಅಭಿನಯಿಸುತ್ತಿರುವ ಇಂಡಿಯನ್ 2 ಸಿನಿಮಾ ವಿವಾದಗಳ ಕಾರಣಕ್ಕೆ ಮುಂದೂಡಲ್ಪಡುತ್ತಿದೆ. 2020ರಿಂದಲೇ ಇದರ ಮೇಕಿಂಗ್ ಶುರುವಾಗಿದೆ. ಅದೇ ವರ್ಷ ಈ ಸಿನಿಮಾ ಸೆಟ್ನಲ್ಲಿ ಕ್ರೇನ್ ಬಿದ್ದು ಮೂವರು ಮೃತಪಟ್ಟಿದ್ದು, ಹಲವರಿಗೆ ಗಾಯವಾಗಿತ್ತು. ಅದಾದ ಬಳಿಕ ನಿರ್ದೇಶಕ ಎಸ್.ಶಂಕರ್ ಮತ್ತು ಎಸ್.ಶುಭಶಂಕರನ್ ಅವರ ಲೈಕಾ ಪ್ರೊಡಕ್ಷನ್ ನಡುವೆ ಇರುವ ಕಾನೂನು ಹೋರಾಟದಿಂದ ಸಿನಿಮಾ ರಿಲೀಸ್ಗೆ ತಡವಾಗುತ್ತಿದೆ.
ಇದನ್ನೂ ಓದಿ: Kamal Haasan | 35 ವರ್ಷಗಳ ನಂತರ ಮತ್ತೆ ಒಂದಾದ ಮಣಿರತ್ನಂ-ಕಮಲ್ ಹಾಸನ್