ಮುಂಬಯಿ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಟನೆಯ ಹೈ ಬಜೆಟ್ ಸಿನಿಮಾ ʼಧಾಕಡ್ʼ (Dhaakad) ಬಾಕ್ಸ್ ಆಫೀಸ್‌ನಲ್ಲಿ ದಯನೀಯವಾಗಿ ನೆಲಕಚ್ಚಿದೆ. ಮೇ 20ರಂದು ಬಿಡುಗಡೆಯಾದ ಸಿನಿಮಾದ 8ನೇ ದಿನ ಕಲೆಕ್ಷನ್ ಕೇಳಿದ್ರೆ ಖಂಡಿತವಾಗಿ ನೀವು ಬೆಚ್ಚಿಬೀಳುತ್ತೀರಾ? ಸಿನಿಮಾ 8ನೇ ದಿನ ಗಳಿಸಿರುವುದು ಕೇವಲ ₹4420. ನೀವು ನಂಬಲೇಬೇಕು, ಶುಕ್ರವಾರ ಇಡೀ ದಿನದಲ್ಲಿ ಇಡೀ ದೇಶದಲ್ಲಿ ಈ ಸಿನಿಮಾವನ್ನು ನೋಡಿದ್ದು ಕೇವಲ 20 ಜನ ಮಾತ್ರ.
ಫ್ಯಾಷನ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಹೊಸ ಅಲೆಯನ್ನೇ ಕ್ರಿಯೇಟ್ ಮಾಡಿದ ಕಂಗನಾ ರಣಾವತ್ ಅತ್ಯಂತ ಭರವಸೆಯ ನಟಿಯಾಗಿ ಹೊರಹೊಮ್ಮಿದರು. ಕ್ವೀನ್ ಚಿತ್ರವಂತೂ ಆಕೆಯನ್ನು ದೇಶದ ಸೆನ್ಸೇಷನ್ ಆಗುವಂತೆ ಮಾಡಿದರು. ಮಣಿಕರ್ಣಿಕಾ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನು ಬಾಚಿಕೊಂಡ ಆಕೆಯನ್ನು ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಕೂಡಾ ಅರಸಿಕೊಂಡು ಬಂತು. ಈ ನಡುವೆ, ಚಿತ್ರರಂಗದ ಹೊರಗೂ ತನ್ನ ಪ್ರಖರ ನಿಲುವುಗಳಿಂದ ಆಕೆ ಜನಪ್ರಿಯರಾದರು.
ಹೀಗೆ ಜನಪ್ರಿಯತೆ ತುತ್ತತುದಿಯಲ್ಲಿರುವಾಗಲೇ ಬಿಡುಗಡೆ ಆಗಿದ್ದು ಧಾಕಡ್ (Dhaakad). ಮಹಿಳಾ ಕಥಾಧರಿತ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಒಬ್ಬ ಹೋರಾಟಗಾರ್ತಿ ಎಂಬಂತೆ ಬಿಂಬಿತವಾಗಿದ್ದ ಆಕೆಯ ಪೋಸ್ಟರ್‌ಗಳು ಗಮನ ಸೆಳೆದಿದ್ದವು. ಅದಕ್ಕಿಂತಲೂ ಹೆಚ್ಚಾಗಿ ಭರ್ಜರಿ 90 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು. ದೇಶದ 2100 ಸ್ಕ್ರೀನ್‌ಗಳಲ್ಲಿ ಮೇ 20ರಂದು ಬಿಡುಗಡೆಗೊಂಡಿತ್ತು.
ಮೊದಲ ದಿನವೇ ಸ್ಲೋ!
ಇಷ್ಟೆಲ್ಲ ಅಬ್ಬರದೊಂದಿಗೆ, ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಸೆನ್ಸೇಷನಲ್ ನಟಿಯ ಸಿನಿಮಾ ಮೊದಲ ದಿನವೇ ನಿರಾಸೆ ಮೂಡಿಸಿತ್ತು. ಅರ್ಜುನ್ ರಾಮ್ ಪಾಲ್, ದಿವ್ಯಾ ದತ್ತಾ ಕೂಡಾ ನಟಿಸಿರುವ ರಜನೀಶ್ ಘಾಯ್ ನಿರ್ದೇಶನದ ಸಿನಿಮಾವನ್ನು ಜನ ಯಾವ ಪರಿಯಲ್ಲಿ ನಿರ್ಲಕ್ಷಿಸಿದರು ಎಂದರೆ ಮೇ 22ರ ಹೊತ್ತಿಗೆ ಸಿನಿಮಾ ಪ್ರದರ್ಶನ 2100 ಸ್ಕ್ರೀನ್‌ಗಳಿಂದ ಕೇವಲ 300ಕ್ಕೆ ಇಳಿದಿತ್ತು.
ಥಿಯೇಟರ್‌ಗಳಿಂದ ಸಿನಿಮಾ ಹೊರಗೋಡುವ ವೇಗ ಎಷ್ಟಿತ್ತೆಂದರೆ ಮೇ 28ರ ಹೊತ್ತಿಗೆ ದೇಶದಲ್ಲಿ ಧಾಕಡ್ ಪ್ರದರ್ಶನ ಕಾಣುತ್ತಿದ್ದುದು ಕೇವಲ 25 ಸ್ಕ್ರೀನ್‌ಗಳಲ್ಲಿ ಮಾತ್ರ! ಅಂದರೆ, ಒಂದೇ ವಾರದಲ್ಲಿ ಶೇ. 99 ಸ್ಕ್ರೀನ್‌ಗಳಿಂದ ಧಾಕಡ್ ಕಣ್ಮರೆ ಆಗಿತ್ತು. ಬಾಲಿವುಡ್‌ನ ರಾಜಧಾನಿ ಎಂದೇ ಕರೆಯಲಾಗುವ ಮುಂಬಯಿಯಲ್ಲಿ ಒಂದೇ ಒಂದು ಥಿಯೇಟರ್‌ನಲ್ಲಿ ಧಾಕಡ್ ಪ್ರದರ್ಶನ ಕಾಣುತ್ತಿಲ್ಲ. ಇದ್ದುದರಲ್ಲಿ ದಿಲ್ಲಿಯೇ ಮೇಲು, ನಾಲ್ಕು ಸ್ಕ್ರೀನ್‌ಗಳಲ್ಲಿ ಪ್ರದರ್ಶನವಿದೆ!
ಚಿತ್ರವನ್ನು 25 ಸ್ಕ್ರೀನ್‌ಗಳಲ್ಲಿ ಉಳಿಸಿಕೊಳ್ಳಲಾಗಿದೆಯಾದರೂ ಅದಕ್ಕೂ ಯಾರೂ ಜನ ಬರ್ತಿಲ್ಲ. ಒಬ್ಬೇ ಒಬ್ಬ ಪ್ರೇಕ್ಷಕನೂ ಬಾರದೆ ಅದೆಷ್ಟೋ ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನೇ ರದ್ದುಪಡಿಸಲಾಗಿದೆ. ಎಂಟನೇ ದಿನ ಕೇವಲ 20 ಮಂದಿ ಚಿತ್ರ ನೋಡಿದ್ದು ಎಂದರೆ ಸಿನಿಮಾ ಕಲೆಕ್ಷನ್‌ನ ದಯನೀಯ ಪರಿಸ್ಥಿತಿಯನ್ನು ಊಹಿಸಬಹುದು.
ಒಟಿಟಿಯಲ್ಲೂ ಬೇಡಿಕೆಯಿಲ್ಲ!
ಸಾಮಾನ್ಯವಾಗಿ ಥಿಯೇಟರ್‌ನಲ್ಲಿ ಓಡುತ್ತಿಲ್ಲ ಎಂದು ಗೊತ್ತಾದ ಕೂಡಲೇ ಕೆಲವು ಚಿತ್ರಗಳನ್ನು ಒಟಿಟಿಗೆ ಮಾರಲಾಗುತ್ತದೆ. ಇಲ್ಲೂ ಅದೇ ಪ್ರಯತ್ನ ನಡೆಯುತ್ತದೆಯಾದರೂ ಯಾರೂ ಕೂಡಾ ಸ್ವೀಕರಿಸಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ. ಕಡಿಮೆ ಲಾಭಕ್ಕಾದರೂ ಮಾರಬಹುದು ಎನ್ನುವ ಲೆಕ್ಕಾಚಾರವೂ ಹಳಿ ತಪ್ಪಿದೆ.
ಅಂದ ಹಾಗೆ, 90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾದ ಎಂಟು ದಿನದ ಒಟ್ಟು ಕಲೆಕ್ಷನ್ 3 ಕೋಟಿ ರೂ. ಮಾತ್ರ! ಧಾಕಡ್ ಬಿಡುಗಡೆಯಾದ ದಿನವೇ ತೆರೆಕಂಡ ಅಕ್ಷಯ್ ಕುಮಾರ್ ನಟನೆಯ ಭೂಲ್ ಭುಲಯ್ಯಾ ಚಿತ್ರ ಇದೇ ಅವಧಿಯಲ್ಲಿ ಗಳಿಸಿರುವ ಮೊತ್ತ 100 ಕೋಟಿ!
ಇದನ್ನೂ ಓದಿ | ಅದೊಂದು ರೂಮರ್‌ನಿಂದ ನನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಅಂತಾರೆ ನಟಿ ಕಂಗನಾ!
ಇದನ್ನೂ ಓದಿ | ಥಿಯೇಟರ್‌ನಿಂದ ಧಾಕಡ್ ಔಟ್; ಭೂಲ್ ಭುಲಯ್ಯ-2 ಜಾದೂ