ಬೆಂಗಳೂರು: ರೋಡ್ ರೋಮಿಯೊ ಸಿನಿಮಾ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ಆಶಿತಾ ಸಹ ಮೀಟೂ ಕಾಟಕ್ಕೆ (MeToo Case) ತುತ್ತಾಗಿದ್ದಾರೆ. ಸಂದರ್ಶನವೊಂದರಲ್ಲಿ ಚಿತ್ರರಂಗದಿಂದ ದೂರಾಗಿದ್ದಕ್ಕೆ ಇದೇ ಕಾರಣ ಎಂದು ನಟಿ ಹೇಳಿಕೊಂಡಿದ್ದಾರೆ.
ಈ ಹಿಂದೆ ನಟಿ ಶ್ರುತಿ ಹರಿಹರನ್ ಸೇರಿದಂತೆ ಹಲವು ನಟಿಯರು ಈಗಾಗಲೇ ಮೀಟೂ ಆರೋಪ ಮಾಡಿದ್ದರು. ಕೆಲ ವರ್ಷಗಳ ಹಿಂದೆ ಈ ಪ್ರಕರಣಗಳು ಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದವು. ಇದೀಗ ಸಿನಿಮಾ ರಂಗದಿಂದಲೇ ದೂರವಾಗಿರುವ ಆಶಿತಾ (Ashita) ತಮಗಾದ ಕಹಿ ಅನುಭವಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ʻʻಕನ್ನಡ ಚಿತ್ರರಂಗದಲ್ಲಿ ಹಲವರು ನನಗೆ ಯಾಕೆ ಸಿನಿಮಾದಿಂದ ದೂರ ಆದಿರಿ ಎಂದು ಪ್ರಶ್ನೆ ಕೇಳುತ್ತಾರೆ. ಆದರೆ ಆ ಸಮಯದಲ್ಲಿ ಸೆಟ್‌ನಲ್ಲಿ ಒಳ್ಳೆಯ ವಾತಾವರಣ ಇರಲಿಲ್ಲ. ಅವರು ಬಯಸಿದ ಹಾಗೇ ಇರಲಿಲ್ಲ ಎಂದು ಕಷ್ಟವನ್ನು ಕೊಟ್ಟರು. ಹೀಗಾಗಿ ಸಿನಿಮಾದಿಂದ ದೂರ ಉಳಿಯಬೇಕಾಯಿತುʼʼ ಎಂದು ಆಶಿತಾ ಹೇಳಿಕೊಂಡಿದ್ದಾರೆ.
ʻʻಮೊದ ಮೊದಲು ಎಲ್ಲವೂ ಸರಿಯಾಗಿತ್ತು. 2007ರ ನಂತರ ಚಿತ್ರಣ ಬದಲಾಯಿತು. ಅವರ ಅಪೇಕ್ಷೆಗಳು ಬೇರೆಯೇ ಇದ್ದವು. ಅವಕಾಶ ಸಿಗಲು ಅವರ ಜತೆ ಸಲುಗೆಯಿಂದ ಇರಬೇಕಿತ್ತು. ಕರೆದಾಗ ಮೀಟ್ ಆಗಬೇಕು, ಹೀಗೆಲ್ಲ ಬೇಡಿಕೆಯನ್ನು ಒಡ್ಡಿದ್ದರು. ಇದರಿಂದ ಬೇಸತ್ತು ನಾನು ಚಿತ್ರರಂಗವನ್ನು ತೊರೆದೆ. ಹಾಗೇ ಅಂತಹ ಕೀಳು ಮಟ್ಟಕ್ಕೆ ಇಳಿಯದೇ ನಾನು ಚಿತ್ರರಂಗ ಬಿಟ್ಟೆ ಎನ್ನುವ ಹೆಮ್ಮೆ ಇದೆ” ಎಂದು ಹೇಳಿಕೊಂಡಿದ್ದಾರೆ. “ಅವರ ಬೇಡಿಕೆಗಳಿಗೆ ಒಪ್ಪದೆ ಇದ್ದಾಗ ಕೆಲವೊಮ್ಮೆ ಟೇಕ್ ಚೆನ್ನಾಗಿ ಬಂದಿದ್ದರೂ ರಿಟೇಕ್ ಮಾಡಿಸುತ್ತಿದ್ದರು. ಇದೇ ರೀತಿ ಎಷ್ಟೋ ಹುಡುಗಿಯರಿಗೆ ಆಗಿದೆ. ನನಗೆ ಈಗಲೂ ನಟಿಸುವ ಆಸೆ ಇದೆ. ನಾನೊಪ್ಪುವ ಪಾತ್ರ ಸಿಕ್ಕರೆ ಖಂಡಿತ ಸಿನಿರಂಗಕ್ಕೆ ವಾಪಸ್ ಆಗುತ್ತೇನೆʼʼ ಎಂದು ನಟಿ ಹೇಳಿಕೊಂಡರು.
ಕನ್ನಡ ಚಿತ್ರರಂಗಕ್ಕೆ ʻʻಹಾರ್ಟ್ ಬೀಟ್ಸ್ʼʼ, ʻʻರೋಡ್ ರೊಮಿಯೋʼʼ, ʻʻಬಾ ಬಾರೋ ರಸಿಕಾʼʼ ಸಿನಿಮಾದಲ್ಲಿ ಆಶಿತಾ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ | Sukesh Case | ‘ರಕ್ಕಮ್ಮ’ ಜಾಕ್ವೆಲಿನ್, ನೋರಾ ಬಳಿಕ ಇನ್ನೂ 4 ನಟಿಯರ ವಿಚಾರಣೆ ಸಾಧ್ಯತೆ