–ಯಶಸ್ವಿ ದೇವಾಡಿಗ, ಬೆಂಗಳೂರು
ಸಿನಿಮಾ: ಕಾಂತಾರ
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಪಕರು: ವಿಜಯ್ ಕಿರಗಂದೂರು
ಛಾಯಾಗ್ರಹಣ: ಅರವಿಂದ್ ಎಸ್ ಕಶ್ಯಪ್
ಸಂಗೀತ: ಅಜನೀಶ್ ಬಿ. ಲೋಕನಾಥ್
ತಾರಾಗಣ: ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉಗ್ರಂ ರವಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ ಇತರರು
ರೇಟಿಂಗ್: 4/5
ವಿಶೇಷ ಶೀರ್ಷಿಕೆಯಡಿ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚು ಹಚ್ಚಿದ್ದ ಕಾಂತಾರ ಶುಕ್ರವಾರ (ಸೆ.30) ರಾಜ್ಯಾದ್ಯಂತ ತೆರೆಕಂಡಿದ್ದು, ಕಲಾರಸಿಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಕರಾವಳಿ ಸಂಪ್ರದಾಯದ ಸುತ್ತ ಕಥೆಯನ್ನು ಬೆಸೆದಿದ್ದು, ಪ್ರಮುಖವಾಗಿ ದೈವದ ಹೆಸರಲ್ಲಿ ನಡೆಯುವ ಅನಾಚಾರ, ಕಾನೂನಿನ ಸಂಘರ್ಷ, ಸ್ವಾರ್ಥಗಳ ಜಗತ್ತಿನ ನಡುವೆ ದೈವದ ಹಾಗೂ ನಾಯಕನ ಗೆಲುವು ಹೇಗಾಗುತ್ತದೆ? ಎಂಬುದನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ.
ʻʻಧೈರ್ಯ, ಧೈರ್ಯ ಬರುವುದು ನಿನ್ನೊಳಗಿನ ಕಿಚ್ಚಿನಿಂದ. ಆದರೆ, ನಿನ್ನೊಳಗಿನ ಕಿಚ್ಚು ನಿನ್ನನ್ನೇ ಸುಡದಿರಲಿʼʼಎಂಬ ಸಂಭಾಷಣೆಯುಳ್ಳ ಟ್ರೈಲರ್ ಸಾಕಷ್ಟು ಸದ್ದು ಮಾಡಿತ್ತು. ಈಗ ಆ ಮಾತಿನ ಗತ್ತನ್ನು ಉಳಿಸಿಕೊಳ್ಳುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಕರಾವಳಿ ಸಂಪ್ರದಾಯವನ್ನು ಉಳಿಸಲು ನಾಯಕ “ಶಿವ”ನ ನಾನಾ ಅವತಾರಗಳು, ಆಚರಣೆಗಳಿಂದ ಅರಣ್ಯಕ್ಕೆ ತೊಂದರೆಯಾಗುತ್ತದೆ ಎಂಬ ಅರಣ್ಯ ಆಫೀಸರ್, ಭೂಮಿ ಕಬಳಿಸಲು ಇನ್ನಿಲ್ಲದ ತಂತ್ರಗಳನ್ನು ಹೂಡುವ ದಣಿ ಎಲ್ಲವೂ ಚಿತ್ರದ ಗಟ್ಟಿತನವನ್ನು ಉಳಿಸಿಕೊಂಡು ಹೋಗಿದೆ.
ಕರಾವಳಿಯ ಸಾಂಸ್ಕೃತಿಕ ವೈಭವದ ಅನಾವರಣ!
ಕರಾವಳಿಯ ಸಾಂಸ್ಕೃತಿಕ ವೈಭವದ ಚಿತ್ರಣವನ್ನು ನೋಡುಗರಿಗೆ ತಲುಪಿಸುವಲ್ಲಿ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಕಂಬಳ, ಭೂತಕೋಲ, ಕೋಳಿ ಪಡೆ, ಹಾಗೂ ಯಕ್ಷಗಾನ ಹೀಗೆ ಒಟ್ಟು ಚಿತ್ರಣದ ನಂತರ ತೆರೆ ಮೇಲೆ ರಿಷಬ್ ಶೆಟ್ಟಿ ಶಿವನಾಗಿ ಕಂಬಳದ ಮೂಲಕ ಕಾಣಿಸುತ್ತಾರೆ. ಭೂಮಿಯ ವಿಚಾರಕ್ಕೆ ಮಾನವ ತನ್ನ ಸ್ವಾರ್ಥದಿಂದ ಯಾವ ಮಟ್ಟಿಗೆ ಬೇಕಾದರೂ ಇಳಿಯುತ್ತಾನೆ ಎಂಬುದನ್ನು ಮನಮುಟ್ಟುವಂತೆ ತೋರಿಸಲಾಗಿದೆ. ಕಾನೂನು, ಪ್ರಕೃತಿ, ದೈವ ಮತ್ತು ನಂಬಿಕೆ ಅಂಶಗಳನ್ನು ಇಟ್ಟುಕೊಂಡು ಅಲಂಕಾರಿಕವಾಗಿ ಕಥೆಯನ್ನು ಹೆಣೆದಿದ್ದಾರೆ ರಿಷಬ್. ಆದರೆ, ಈ ಅಬ್ಬರಗಳ ಸಂಭಾಷಣೆಯು ಆಗಾಗ ಪ್ರೇಕ್ಷಕನ ಕಿವಿಗೆ ಮುಟ್ಟದೇ ಇರುವುದು ಚಿತ್ರಕ್ಕೆ ನೆಗೆಟಿವ್ ಎಂದೇ ಹೇಳಬಹುದಾಗಿದೆ.
ಇದನ್ನೂ ಓದಿ | Kantara Movie | ಕಾಂತಾರ ಹೆಸರು ಸೂಚಿಸಿದ್ದು ಈ ನಿರ್ದೇಶಕ; ಕಾಂತಾರ ಅಂದರೆ?
ʻನಂಬಿಕೆ ಬೇರೆ ಆದರೆ ಅಸ್ತಿತ್ವ ಒಂದೇʼ
ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಜೆ, ಕಾಮಿಡಿ ಸನ್ನಿವೇಶಗಳು ಪ್ರೇಕ್ಷಕನಿಗೆ ಎಲ್ಲಿಯೂ ಬೋರ್ ಎನ್ನಿಸದಂತೆ ಕೊಂಡೊಯ್ಯುತ್ತದೆ. ಶಿವನಾಗಿ ರಿಷಬ್ ಶೆಟ್ಟಿ ಕಾಣಿಸಿಕೊಂಡರೆ, ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಮಿಂಚಿದ್ದಾರೆ. ಅರಣ್ಯಾಧಿಕಾರಿಯಾಗಿ ಕಿಶೋರ್ ಗಮನ ಸೆಳೆದಿದ್ದಾರೆ. ಶಿವ ಪಾತ್ರಧಾರಿ ಪ್ರಕೃತಿಯ ವಿರುದ್ಧ ಕೆಲಸ ಮಾಡಿದರೆ, ಅರಣ್ಯ ಅಧಿಕಾರಿಯು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಾರೆ. ಇವೆರಡರ ಮಧ್ಯೆ ದೈವ ನಂಬಿಕೆಯ ಸೇತುವೆ ಇದ್ದಂತೆ. ಕೊನೆಯಲ್ಲಿ ಈ ಮೂರು ಅಂಶಗಳಲ್ಲಿ ನ್ಯಾಯ ಹೇಗೆ ಗೆಲ್ಲುತ್ತದೆ ಎಂಬುದೇ ಕಥೆಯ ಸಾರಾಂಶ.
ʻನಂಬಿಕೆ ಬೇರೆ ಆದರೆ ಅಸ್ತಿತ್ವ ಒಂದೇʼ ಎನ್ನುವ ಸಂದೇಶವನ್ನು ಪ್ರತಿ ಪಾತ್ರದ ಮೂಲಕ ಎತ್ತಿ ಹಿಡಿದಿದೆ ಕಾಂತಾರ. ಸಿನಿಮಾ ಮೊದಲಿನಿಂದ ಅಂತ್ಯದವರೆಗೂ ಬಿಡದಂತೆ ನೋಡಿದರೆ ಮಾತ್ರ ನೋಡುಗನಿಗೆ ಅರ್ಥವಾಗುತ್ತದೆಯೇ ವಿನಃ, ಸ್ವಲ್ಪ ಗಮನ ಬೇರೆ ಕಡೆ ಹರಿಸಿದರೂ ಅರ್ಥೈಸಿಕೊಳ್ಳುವುದು ಕಷ್ಟಕರವೇ ಸರಿ. ಸನ್ನಿವೇಶಕ್ಕೆ ತಕ್ಕಂತೆ ಜನಪದ ಹಾಡುಗಳು ಸಿನಿಮಾದಲ್ಲಿ ಮನೋಜ್ಞವಾಗಿದೆ. ಅಜನೀಶ್ ಸಂಗೀತದ ಅಬ್ಬರ, ಜಾನಪದ ಸೊಗಡಿನ ಹಾಡುಗಳು, ಹಿನ್ನೆಲೆ ಸಂಗೀತವನ್ನು ನೀಡುವ ಪ್ರಯತ್ನಕ್ಕೆ ಮೆಚ್ಚಲೇ ಬೇಕು. ಶಿಕಾರಿಗೆ ಹೋಗುವ ಮಾನವನಿಗೆ ಪ್ರಕೃತಿಯು ಮುನಿದು, ನಂತರ ಪ್ರಕೃತಿಯೇ ದಾರಿ ತೋರಿಸುವ ಪ್ರಯತ್ನ ಚಿತ್ರದ್ದು.
ತಾಂತ್ರಿಕ ವರ್ಗಕ್ಕೂ ಸೈ!
ಟೆಕ್ನಿಕಲ್ ವಿಚಾರಕ್ಕೆ ಬಂದರೆ ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ, ಮೇಕಿಂಗ್ ಜತೆಗೆ ಫೈಟಿಂಗ್ ಸೀನ್‌ಗಳು ಅದ್ಭುತವಾಗಿ ಮೂಡಿ ಬಂದಿದೆ. ಒಟ್ಟಾರೆ ಸಿನಿಮಾದ ಕ್ಲೈಮ್ಯಾಕ್ಸ್ ಮಾತ್ರ ಪ್ರೇಕ್ಷಕರಿಗೆ ಊಹಿಸಲೂ ಸಾಧ್ಯವಿಲ್ಲ. ರಿಷಬ್ ಶೆಟ್ಟಿ ಹೊಸ ಅವತಾರದ ಮೂಲಕ ಕಾಣಿಸಿಕೊಳ್ಳುವ ಪರಿಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ. ದಣಿಯಾಗಿ ಅಚ್ಯುತ್ ಕುಮಾರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಮೋದ್ ಶೆಟ್ಟಿ, ಉಗ್ರಂ ರವಿ ಹೀಗೆ ಅನೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇದನ್ನೂ ಓದಿ | Kantara movie | ರಿಷಬ್ ಶೆಟ್ಟಿ ನಿರ್ದೇಶನ, ನಟನೆಯ ಕಾಂತಾರ ಶುಭಾರಂಭ