ಬೆಂಗಳೂರು: ಕನ್ನಡದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಹಳೇ ಕನ್ನಡವನ್ನೂ ಹೊಸತಾಗಿ ಪರಿಚಯಿಸುತ್ತಾ ಬಂದಿರುವ ಕ್ರಿಯೇಟಿವ್ ನಿರ್ದೇಶಕ ಯೋಗರಾಜ್ ಭಟ್ ಅವರ ನೋಟ ಈಗ “ಕೇಡಿ” ಮೇಲೆ ಬಿದ್ದಿದೆ! ಅವರ ಹೊಸ ಸಿನಿಮಾವೊಂದು (Kannada New Film) ಅನೌನ್ಸ್ ಆಗಿದ್ದು, ಅದಕ್ಕೆ ʻK ಕರಟಕ D ದಮನಕʼ ಎಂದು ಹೆಸರು ಇಟ್ಟಿರುವುದಾಗಿ ಘೋಷಿಸಿದ್ದಾರೆ.
ಟಾಲಿವುಡ್ ನಟ, ಇಂಡಿಯನ್ ಮೈಕೆಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ ಅವರು ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜತೆ ಸಿನಿಮಾ ಮಾಡುತ್ತಿದ್ದಾರೆ.
ಯಾವುದೇ ಒಂದು ಸಿನಿಮಾ ಇರಲಿ, ಅದಕ್ಕೆ ಪ್ರಮೋಷನ್ ಬಹಳವೇ ಮುಖ್ಯ. ಹಾಗಾಗಿ ಚಿತ್ರದ ಮೋಷನ್ ಪೋಸ್ಟರ್ ಅನ್ನು ಸಾಧ್ಯವಾದಷ್ಟು ವಿಭಿನ್ನವಾಗಿ ಡಿಸೈನ್ ಮಾಡಿಸಿ, ಕುತೂಹಲವನ್ನು ಹುಟ್ಟುಹಾಕುವ ಪ್ರಯತ್ನ ಮಾಡಲಾಗುತ್ತದೆ. ಆದರೆ, ಈಗ ಚಿತ್ರೀಕರಣ ಪ್ರಾರಂಭವಾಗಿರುವ ʻK ಕರಟಕ D ದಮನಕʼದ ಮೋಷನ್ ಪೋಸ್ಟರ್ನಲ್ಲಿ ಯಾವ ಗ್ರಾಫಿಕ್ ಡಿಸೈನ್ಗಳೂ ಇಲ್ಲ. ಬದಲಾಗಿ ಒಂದು ಬಿಳಿ ಬೋರ್ಡ್ ಮೇಲೆ ಸ್ವತಃ ಯೋಗರಾಜ್ ಭಟ್ ಅವರು ಗೀಚಿದ ಕೆಲವು ಸಾಲುಗಳು ಇವೆ.
ಶ್ರೀ ಶಿವಣ್ಣ+ ಶ್ರೀ ಪ್ರಭುದೇವ ಎಂದು ಮೇಲ್ಭಾಗದಲ್ಲಿ ಬರೆದು ಬಳಿಕ ಒಂದು ವೃತ್ತವನ್ನು ಬರೆದಿದ್ದಾರೆ. ಆ ವೃತ್ತದೊಳಗೆ ʻK ಕರಟಕ D ದಮನಕʼ ಎಂದು ಬರೆದುಕೊಂಡಿದ್ದಾರೆ. ಕೆಳಗೆ ಶ್ರೀ ರಾಕ್ಲೈನ್ ವೆಂಕಟೇಶ್+ಯೋಗರಾಜ್ ಭಟ್ ಎಂದು ಬರೆದುಕೊಳ್ಳುವ ಮೂಲಕ ಚಿತ್ರದ ಟೈಟಲ್, ನಾಯಕರು ಹಾಗೂ ನಿರ್ಮಾಪಕ, ನಿರ್ದೇಶಕರು ಯಾರು ಎಂಬ ಮಾಹಿತಿ ಕೊಟ್ಟಿದ್ದಾರೆ. ಈ ಟೈಟಲ್ ಕಾರ್ಡ್ ಪೋಸ್ಟ್ ಅನ್ನು ಅವರು ತಮ್ಮ ಇನ್ಸ್ಟಾದಲ್ಲಿ ಹಾಕಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಬಿರುಸಿನ ಚಿತ್ರೀಕರಣ
ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಸೂಪರ್ ಸ್ಟಾರ್ಗಳ ಎಂಟ್ರಿಗೆ ಫ್ಯಾನ್ಸ್ ಕುತೂಹಲ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಯೋಗರಾಜ್ ಭಟ್ ಪೋಸ್ಟ್ ಒಂದನ್ನು ಹಾಕಿ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ. ಅಲ್ಲದೆ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಹ ಇಲ್ಲಿ ಬಣ್ಣಹಚ್ಚಿದ್ದು, ಪೊಲೀಸ್ ಅಧಿಕಾರಿ ಪಾತ್ರವನ್ನು ನಿರ್ವಹಣೆ ಮಾಡಿದ್ದಾರೆ. ಸಹಜವಾಗಿಯೇ ಭಟ್ಟರ ಹೊಸ ಪ್ರಯತ್ನವು ಒಂದು ಕುತೂಹಲವನ್ನು ಹುಟ್ಟುಹಾಕಿದೆ.
ಶಿವಣ್ಣ ಹಾಗೂ ಪ್ರಭುದೇವ ಜತೆಗೆ ತನಿಕೆಲ್ಲ ಭರಣಿ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಕನ್ನಡ ಚಿತ್ರರಂಗದ ಪ್ರತಿಷ್ಠಿತ ಸಂಸ್ಥೆ ರಾಕ್ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.
ಇದನ್ನೂ ಓದಿ | Sudeep birthday | ಒಟಿಟಿ ಅಖಾಡದಲ್ಲೂ ಅಬ್ಬರಿಸಲು ‘ವಿಕ್ರಾಂತ್ ರೋಣ’ ಸಿನಿಮಾ ಸಿದ್ಧ !