Site icon Vistara News

Kannada New Movie 2022 | ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬರ!

Kannada New Movie 2022

ಬೆಂಗಳೂರು: ನವೆಂಬರ್‌ ತಿಂಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ (Kannada New Movie 2022) ಹಲವಾರು ಸಿನಿಮಾಗಳು ಬಿಡುಗಡೆಗೊಂಡಿದ್ದು, ಅಷ್ಟಾಗಿ ಸಿನಿಮಾಗಳು ಸಕ್ಸೆಸ್‌ ಕಂಡಿಲ್ಲ. ಸೆಪ್ಟೆಂಬರ್‌ ಹಾಗೂ ಅಕ್ಕೋಬರ್‌ನಲ್ಲಿ ʻಗಂಧದ ಗುಡಿʼ ಹಾಗೂ ʻಕಾಂತಾರʼ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತ್ತು.

ನವೆಂಬರ್‌ನಲ್ಲಿ ಹೊಸಬರ ನಿರ್ದೇಶನ ಹಾಗೂ ಹೊಸ ತಂಡಗಳ ಸಿನಿಮಾಗಳೇ ಹೆಚ್ಚಾಗಿ ಬಿಡುಗಡೆ ಕಂಡಿದ್ದವು. ಜಯತೀರ್ಥ ಅವರ ನಿರ್ದೇಶನದ ʻಬನಾರಸ್‌ʼ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಆದರೂ ಸಾಧಾರಣ ಚಿತ್ರ ಎಂದೆನಿಸಿಕೊಂಡಿತ್ತು. ಝೈದ್‌ ಖಾನ್‌ ತನ್ನ ಮೊದಲ ಚಿತ್ರದ ನಟನೆಗೆ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದರು, ಸಿನಿಮಾ ಕಲೆಕ್ಷನ್‌ ಮಾಡಿಲ್ಲ.

ಸ್ಯಾಂಡಲ್‌ವುಡ್‌ನಲ್ಲಿ ಹೊಸಬರೇ ತಯಾರಿಸಿರುವ ‘ಕಂಬ್ಳಿಹುಳ’ ಸಿನಿಮಾ ನವೆಂಬರ್‌ 4ರಂದು ಬಿಡುಗಡೆಗೊಂಡಿತ್ತು. ʻಚಿತ್ರ ಒಟಿಟಿ ಬರುವವರೆಗೂ ಕಾಯಬೇಡಿ, ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿʼ ಎಂದು ನೋಡುಗರು ಸೋಷಿಯಲ್‌ ಮೀಡಿಯಾ ಮೂಲಕ ವಿಮರ್ಶೆ ನೀಡಿದ್ದರೂ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ ಚಿತ್ರ. ಆದರೆ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಕಂಡಿಲ್ಲ.

ಇದನ್ನೂ ಓದಿ | Powerful Kannada Movies | ಈ ಹಳೇ ಕನ್ನಡ ಸಿನಿಮಾಗಳಿಗೂ ಪ್ಯಾನ್ ಇಂಡಿಯಾ ಖದರು‌ ಇತ್ತು!

ನವೆಂಬರ್ ಮೊದಲ ವಾರ ‘ನೀ ಮಾಯೆಯೊಳಗೊ ಮಾಯೆ ನಿನ್ನೊಳಗೋ’, ‘ಸೆಪ್ಟೆಂಬರ್ ೧೩’ ಮತ್ತು ‘ನಹೀ ಜ್ಞಾನೇನ ಸದೃಶಂ’ ಚಿತ್ರಗಳು ಬಿಡುಗಡೆಗೊಂಡಿದ್ದವು ಎಂಬ ವಿಷಯವೇ ಪ್ರೇಕ್ಷಕರಿಗೆ ತಿಳಿದೇ ಇಲ್ಲ!

ನವೆಂಬರ್ ಎರಡನೇ ವಾರ ಶ್ರೇಯಸ್ ಮಂಜು ನಟಿ ರಿಷ್ಮಾ ನಾಣಯ್ಯ ಅಭಿನಯದ ʻರಾಣಾʼ ಚಿತ್ರ ತೆರೆಕಂಡಿತ್ತು. ಇತ್ತೀಚಿನ ದಿನಗಳಲ್ಲಿ ರಿಮೇಕ್ ಚಿತ್ರಗಳಿಗೆ ಬೆಂಬಲ ನೀಡದ ಕನ್ನಡ ಸಿನಿ ರಸಿಕರು ತಮಿಳಿನ ‘ತಡಯಾರಾ ತಾಕ್ಕಾ’ ಎಂಬ ಚಿತ್ರದ ರಿಮೇಕ್ ಆಗಿದ್ದ ರಾಣಾ ಚಿತ್ರವನ್ನೂ ಸಹ ನೋಡಲಿಲ್ಲ.

ಇನ್ನುಳಿದಂತೆ ಡಾರ್ಲಿಂಗ್ ಕೃಷ್ಣ ಅಭಿನಯದ ʻದಿಲ್ ಪಸಂದ್ʼ ಕೂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಇದೇ ವಾರ ಬಿಡುಗಡೆಗೊಂಡಿದ್ದ ʻಓ, ಹುಬ್ಬಳ್ಳಿ ಡಾಬಾʼ ಹಾಗೂ ʻಎಲ್ಲೋ ಗ್ಯಾಂಗ್ಸ್ʼ ಚಿತ್ರಗಳೂ ಸಹ ಸೋತವು.

ಇದನ್ನೂ ಓದಿ | Banaras Movie | ʼಬನಾರಸ್ʼ ಟ್ರೈಲರ್‌ ಔಟ್‌; ನವೆಂಬರ್‌ 4ಕ್ಕೆ ಪಂಚ ಭಾಷೆಯಲ್ಲಿ ರಿಲೀಸ್‌

ತಿಂಗಳ ಮೂರನೇ ವಾರ ಬಿಡುಗಡೆಗೊಂಡ ಪ್ರಜ್ವಲ್ ದೇವರಾಜ್ ಅವರ ʻಅಬ್ಬರʼ, ʻಮಠ’ ಹಾಗೂ ʻಆವರ್ತʼ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲೂ ಸದ್ದು ಮಾಡಲಿಲ್ಲ. ಮಠ ಸಿನಿಮಾ ಬಿಡುಗಡೆಯ ಮುಂಚೆಯೇ ಹಲವು ವಿವಾದಕ್ಕೆ ಕಾರಣವಾಯಿತು. ಸೋಷಿಯಲ್‌ ಮೀಡಿಯಾದಲ್ಲಿಯೂ ಸಿನಿಮಾ ಟ್ರೈಲರ್‌ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಇದೇ ವಾರ ಬಿಡುಗಡೆಗೊಂಡ ʻʻಖಾಸಗಿ ಪುಟಗಳುʼʼ ಚಿತ್ರ ಮಾತ್ರ ಸಿನಿ ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದೆ.

ಇದೀಗ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಅಭಿನಯದ ʻತ್ರಿಬಲ್ ರೈಡಿಂಗ್ʼ ಸಿನಿಮಾ ನಿರೀಕ್ಷೆ ಇದ್ದಿತ್ತಾದರೂ ಅಷ್ಟಾಗಿ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡಿಲ್ಲ. ಈ ವಾರ ಬಿಡುಗಡೆಯಾದ ʻಸದ್ದು ವಿಚಾರಣೆ ನಡೆಯುತ್ತಿದೆʼ ಹಾಗೂ ʻಮಿಸ್ ನಂದಿನಿʼ ಚಿತ್ರಗಳು ಫ್ಲಾಪ್ ಲಿಸ್ಟ್ ಸೇರಿದಂತಿದೆ. ಪವನ್ ಒಡೆಯರ್ ನಿರ್ದೇಶನದ ʻರೇಮೊʼ ಚಿತ್ರ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇದನ್ನೂ ಓದಿ | Dolly Dhananjay | ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಸಿನಿಮಾ: ಡಿಸೆಂಬರ್ ಮೊದಲ ವಾರದಿಂದ ‘ಟಗರು ಪಲ್ಯ’ ಶೂಟಿಂಗ್‌ ಶುರು

Exit mobile version