Site icon Vistara News

Kannada New Movie: ಕುಂದಾಪುರ ಕನ್ನಡ ಹೈಲೈಟ್‌, ʻಅಭಿರಾಮಚಂದ್ರʼ ಟ್ರೈಲರ್‌ ಔಟ್‌; ಪ್ರಮೋದ್ ಶೆಟ್ಟಿ ಸಾಥ್!

Kannada New Movie Abhiramachandra

ಬೆಂಗಳೂರು: ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೊನ ಪ್ರೇಮ ಕಥಾ ಹಂದರ ಒಳಗೊಂಡಿರುವ ʼಅಭಿರಾಮಚಂದ್ರʼ (Abhi Raama Chandra) ಸಿನಿಮಾದ (Kannada New Movie) ಟ್ರೈಲರ್‌ ರಿಲೀಸ್ ಆಗಿದೆ. ನಟ ಪ್ರಮೋದ್ ಶೆಟ್ಟಿ ಹಾಗೂ ದೀಕ್ಷಿತ್ ಶೆಟ್ಟಿ ಟ್ರೈಲರ್‌ ರಿಲೀಸ್ ಮಾಡಿ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗೇಂದ್ರ ಗಾಣಿಗ ನಿರ್ದೇಶನ ʼಅಭಿರಾಮಚಂದ್ರʼ ಸಿನಿಮಾ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗುತ್ತಿದೆ. ಈ ಕುರಿತ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ಹಂಚಿಕೊಂಡರು.

ನಟ ಪ್ರಮೋದ್ ಶೆಟ್ಟಿ ಮಾತನಾಡಿ, ʻʻಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ನನಗೆ ಇಷ್ಟವಾದ ಪಾತ್ರ ಯಾವುದು ಅಂದರೆ, ಕುಂದಾಪುರ ಕನ್ನಡವನ್ನು ಸಿನಿಮಾದಲ್ಲಿ ಬಳಸಲು ಮೀಟರ್ ಬೇಕು. ಆ ಮೀಟರ್ ಅಭಿರಾಮಚಂದ್ರ ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಯಾಕೆಂದರೆ ತುಂಬಾ ಜನರಿಗೆ ಆ ಭಾಷೆ ಅರ್ಥವಾಗಲ್ಲ. ತುಂಬಾ ವೇಗವಾಗಿ ಮಾತನಾಡುವುದರಿಂದ ಅದು ಬೇಗ ಅರ್ಥವಾಗುವುದಿಲ್ಲ. ನಿರ್ದೇಶಕರ ಹಲವಾರು ಗೆಳೆಯರು ಈ ಸಿನಿಮಾವನ್ನು ಪ್ರೀಮಿಯರ್ ಶೋ ಸ್ಪಾನ್ಸರ್ ಮಾಡುತ್ತಿದ್ದು, ನಾನು ಅವರಿಗೆ ಸಾಥ್ ಕೊಡುತ್ತಿದ್ದೇನೆ. ಹೊಸಬರ ಸಿನಿಮಾಗೆ ನೀವೂ ಬೆಂಬಲ ಕೊಡಿʼʼ ಎಂದರು.

ನಿರ್ದೇಶಕ ನಾಗೇಂದ್ರ ಗಾಣಿಗ ಮಾತನಾಡಿ, ನನ್ನ ನಿರ್ದೇಶನದ ಮೊದಲ ಸಿನಿಮಾ ಇದು. ಈ ಚಿತ್ರವಾಗಲು ಮೊದಲ ಕಾರಣ ನನ್ನ ಅಕ್ಕ ಮತ್ತು ಮನೆಯವರು. ನಂತರ ಕಿರಣ್ ಮತ್ತು ಅವರ ತಂದೆ. ಅವರೇ ಸ್ವತಃ ಪ್ರೊಡಕ್ಷನ್ ಶುರು ಮಾಡಿ ಸಿನಿಮಾಗೆ ಬೆಂಬಲವಾಗಿ ನಿಂತಿದ್ದಾರೆ. ಇಡೀ ತಂಡ ನನಗೆ ತುಂಬಾ ಸಪೋರ್ಟ್ ಮಾಡಿದೆ. ಬಾಂಧವ್ಯ ಪ್ರೀತಿಗೋಸ್ಕರ ಸಿನಿಮಾ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಬಂದಿದೆ. ಅದ್ಭುತ ಅಲ್ಲದೇ‌ ಹೋದರೂ ನೋಡಿದವರು ಚೆನ್ನಾಗಿಲ್ಲ ಅನ್ನೋಲ್ಲ. ಇದು ಒಂದೊಳ್ಳೆ ಪ್ರಯತ್ನ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಇದು ಮೊದಲ ಸಿನಿಮಾ, ಮೊದಲ ಹೆಜ್ಜೆ ನಿಮ್ಮ ಆಶೀರ್ವಾದ ಇರಲಿʼʼ ಎಂದರು.

ಇದನ್ನೂ ಓದಿ: Kannada New Movie: `ಸೋಮು ಸೌಂಡ್ ಇಂಜಿನಿಯರ್’ ಸಿನಿಮಾದ ಫಸ್ಟ್‌ ಸಾಂಗ್‌ ಔಟ್‌!

ನಟ ರಥ ಕಿರಣ್ ಮಾತನಾಡಿ, ʻʻನನ್ನನ್ನು ಸಿನಿಮಾಗೆ ಪರಿಚಯಿಸಿದ್ದು ಅಪ್ಪು ಸರ್. ಆ ನಂತರ ಸುನಿ ಸರ್. ಈ ಚಿತ್ರ ಆರಂಭದಿಂದ ಇಲ್ಲಿಯವರೆಗೂ ಬೆನ್ನೆಲುಬಾಗಿ‌ ನಿಂತವರು ರವಿ ಬಸ್ರೂರ್. ಅವರು ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಸಂಗೀತ ಒದಗಿಸಿದ್ದಾರೆ. ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ಸರ್ ನಮಗೆ ಸಾಥ್ ಕೊಟ್ಟಿದ್ದಾರೆ. ನಾನು ಅಭಿ ಎಂಬ ಪಾತ್ರ ಮಾಡಿದ್ದೇನೆ. ನನ್ನ ಬಾಲ್ಯದ ಪಾತ್ರವನ್ನು ರವಿ ಬಸ್ರೂರ್ ಮಗ ಮಾಡಿದ್ದಾರೆ. ಅಕ್ಟೋಬರ್ 6ಕ್ಕೆ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆʼʼ ಎಂದರು.

ನಟ ಸಿದ್ದು ಮೂಲಿಮನಿ ಮಾತನಾಡಿ, ʻʻಅಭಿರಾಮಚಂದ್ರ ಮನಸ್ಸಿಗೆ ತುಂಬಾ ಹತ್ತಿರವಾದ ಸಿನಿಮಾ. ಸಾಕಷ್ಟು ಸಿನಿಮಾ ಮಾಡುತ್ತಿದ್ದೇನೆ. ನಾಗೇಂದ್ರ ಅವರ ಕಥೆ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ರಾಮನಾಗಿ ಪಾತ್ರ ನಿರ್ವಹಿಸಿದ್ದೇನೆ. ಮಂಡ್ಯ ಹುಡುಗ ಬೆಂಗಳೂರಿಗೆ ಬಂದು ಕೆಲಸ ಮಾಡ್ತಾನೆ. ನಿಮ್ಮಲ್ಲಿರುವ ಮೂರು ಜನ ನಾವು. ನಿಮಗೆ ಬೇಗ ಕನೆಕ್ಟ್ ಆಗುತ್ತೇವೆʼʼ ಎಂದು ತಿಳಿಸಿದರು.

ಇದನ್ನೂ ಓದಿ: Kannada New Movie: ಪ್ರವೀಣ್ ತೇಜ್ ‘ಜಿಗರ್‌’ಗೆ ಧ್ವನಿಯಾದ ಸಂಜಿತ್‌ ಹೆಗಡೆ!

ʼಕಿರಿಕ್‌ ಪಾರ್ಟಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ “ಅಭಿರಾಮಚಂದ್ರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ʼಅಭಿರಾಮಚಂದ್ರ’ ಸಿನಿಮಾದಲ್ಲಿ ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯರಂಗ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಿವಾನಿ ರೈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಉಳಿದಂತೆ ವೀಣಾ ಸುಂದರ್‌, ಸುಂದರ್‌, ಎಸ್‌. ನಾರಾಯಣ್‌, ಪ್ರಕಾಶ್‌ ತುಮ್ಮಿನಾಡು, ಪವನ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಎ.ಜಿ.ಎಸ್ ಎಂಟರ್ಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್‌ ಮತ್ತು ಮೂವೀಸ್‌’ ಬ್ಯಾನರ್‌ನಡಿ ಎ. ಜಿ. ಸುರೇಶ್‌ ಹಾಗೂ ಮಲ್ಲೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟ್ರೈಲರ್‌ ಮೂಲಕ ಗಮನಸೆಳೆಯುತ್ತಿರುವ ಅಭಿರಾಮಚಂದ್ರ ಸಿನಿಮಾ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗಲಿದೆ.

Exit mobile version