ಬೆಂಗಳೂರು: ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಸಾಲುಸಾಲು ಸಿನಿಮಾಗಳಲ್ಲಿ (Kannada New Movie) ಅಭಿನಯಿಸುತ್ತಿದ್ದಾರೆ. ರಾಜವರ್ಧನ್ ನಟನೆಯ ಬಹುನಿರೀಕ್ಷಿತ `ಹಿರಣ್ಯ’ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಬೆಂಗಳೂರು ಸುತ್ತಮುತ್ತ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಹಿರಣ್ಯ ಸಿನಿಮಾಗೆ ಪ್ರವೀಣ್ ಅವ್ಯುಕ್ತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಹಲವು ಕಿರು ಚಿತ್ರಗಳನ್ನು ಮಾಡಿದ ಅನುಭವ ಇರುವ ಪ್ರವೀಣ್ ಅವ್ಯುಕ್ತ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನಾಗಿ ಸ್ಯಾಂಡಲ್ ವುಡ್ಗೆ ಪರಿಚಯವಾಗುತ್ತಿದ್ದಾರೆ. ರಾಜವರ್ಧನ್ಗೆ ಜೋಡಿಯಾಗಿ ಮಾಡೆಲ್ ರಿಹಾನಾ ನಟಿಸಿದ್ದು, ಈ ಚಿತ್ರದ ಮೂಲಕ ರಿಹಾನಾ ಚಂದನವನ ಪ್ರವೇಶಿಸಿದ್ದಾರೆ.
ಕಂಪ್ಲೀಟ್ ಆ್ಯಕ್ಷನ್ ಥ್ರಿಲ್ಲರ್ ಜತೆಗೆ ತಾಯಿ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
“ವೇದಾಸ್ ಇನ್ಫಿನಿಟಿ ಪಿಕ್ಚರ್’ ಬ್ಯಾನರ್ನಡಿ ವಿಘ್ನೇಶ್ವರ ಯು ಹಾಗೂ ವಿಜಯ್ ಕುಮಾರ್ ಬಿ. ವಿ “ಹಿರಣ್ಯ’ ಸಿನಿಮಾಗೆ ಬಂಡವಾಳ ಹೂಡಿ ನಿರ್ಮಿಸಲಿದ್ದಾರೆ. ಚಿತ್ರಕ್ಕೆ ಯೋಗೇಶ್ವರನ್ ಆರ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೆಸುತ್ತಿದೆ.
ಇದನ್ನೂ ಓದಿ: Dingri Nagaraj | ʻಅಶ್ಲೀಲ ಮೆಸೇಜ್ ಕಳುಹಿಸಿ ಡಿಂಗ್ರಿ ನಾಗರಾಜ್ ಕುಚೇಷ್ಟೆ: ನಟಿ ರಾಣಿ ಮತ್ತೇನು ಹೇಳಿದರು?
ರಾಜವರ್ಧನ್ ಕೈಯಲ್ಲಿ ಈಗಾಗಲೇ ಪ್ರಣಯಂ, ಗಜರಾಮ ಸಿನಿಮಾಗಳಿವೆ. ಯುವ ನಿರ್ದೇಶಕ ಸುನಿಲ್ ಕುಮಾರ್ ವಿ. ಎ ಸಾರಥ್ಯದಲ್ಲಿ ʼಗಜರಾಮʼ ಮೂಡಿ ಬರುತ್ತಿದೆ. ‘ಬಿಚ್ಚುಗತ್ತಿ’ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನಸೆಳೆದಿದ್ದರು.