ಬೆಂಗಳೂರು: ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಸರ್ವೇ ನಂಬರ್ 45’ ಚಿತ್ರದ ಮುಹೂರ್ತ (Kannada New Movie) ಸಮಾರಂಭವು ಶ್ರೀ ಬಂಡಿ ಮಹಾಂಕಾಳಿ ಅಮ್ಮನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆಯಿತು. ವರನಂದಿ ಸಿನಿ ಸಂಸ್ಥೆಯು ನಿರ್ಮಿಸಲಿರುವ ಚಿತ್ರದ ಪ್ರಥಮ ದೃಶ್ಯಕ್ಕೆ ಹಿರಿಯ ನಿರ್ದೇಶಕ ಹೆಚ್. ವಾಸು ಕ್ಲಾಪ್ ಮಾಡಿದರೆ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ಬಣಕಾರ್ ಕೆಮರಾ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶರವಣ ಉಪಸ್ಥಿತರಿದ್ದರು.
ಹಿರಿಯ ನಿರ್ದೇಶಕರಾದ ಹೆಚ್. ವಾಸು ಮತ್ತು ಕೆ. ರಾಘವ ಅವರಲ್ಲಿ ಕೆಲಸ ಕಲಿತಿರುವ ಪಿರಿಯಾಪಟ್ಟಣದ ಶಿವಕುಮಾರ್ ಎಂ. ಶೆಟ್ಟಿಹಳ್ಳಿ ಈ ಹಿಂದೆ ಮಹದೇಶ್ವರ ಭಕ್ತಿ ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ರಚನೆ, ಚಿತ್ರಕಥೆ, ಮೂರು ಹಾಡುಗಳನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಗ್ರಾಮೀಣ ಭಾಗ ರೈತನೊಬ್ಬ ತನ್ನ ಜಮೀನಿನಲ್ಲಿ ಕೃಷಿ ಮಾಡುತ್ತಿರುತ್ತಾನೆ. ತನ್ನ ಜಾಗಕ್ಕೆ ಸರ್ವೇ ನಂಬರ್ ಪಡೆಯಲು ಆತನಿಗೆ ಒಂದಲ್ಲ ಒಂದು ಕಷ್ಟ ಎದುರಾಗುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆತನದಲ್ಲಿ ಹೇಗೆ ಬಗೆ ಹರಿಸಿಕೊಳ್ಳುತ್ತಾನೆ. ಕೆಟ್ಟದ್ದನ್ನು ಮಾಡಲು ಮುಂದಾದರೆ ಅನಾಹುತಗಳು ಕಟ್ಟಿಟ್ಟ ಬುತ್ತಿ ಎಂಬುದನ್ನು ಈ ಚಿತ್ರದ ಮೂಲಕ ತೋರಿಸಲು ಹೊರಟಿರುವ ನಿರ್ದೇಶಕರು ತಾವು ನೋಡಿದಂತ ಒಂದಷ್ಟು ಘಟನೆಗಳು ಜತೆಗೆ ಕಾಲ್ಪನಿಕ ಟಚ್ ಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ.
ನಾವು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ತದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ ಎಂಬ ಸಂದೇಶವನ್ನು ಚಿತ್ರದ ಮೂಲಕ ಸಾರಲಾಗಿದೆ.
’ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗಿಲ್ಲಿನಟ, ಸಂತೋಷ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲನಟಿಯಾಗಿದ್ದ ರಿಯಾ ಭಾಸ್ಕರ್ ಗೌಡರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಮುನಿ, ಜಗದೀಶ್ ಕೊಪ್ಪ, ಸಂಜಯ್ ಪಾಟೀಲ್, ಮೈತ್ರಿ, ಟೋನಿತಾ, ರಾಜವ್ ಬಾಲೆ, ಪ್ರಕಾಶ್ ಬಾನಾಳು, ತೇಜು ಮೈಸೂರು, ಸುರೇಶ್ ಕೋಲಾರ, ರಂಗರಾಜು ಹುಲಿದುರ್ಗ ಮೊದಲಾದವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Namratha Gowda: ಕಪ್ಪು ಸೀರೆಯುಟ್ಟು ನೋಡುಗರ ನಿದ್ದೆಗೆಡಿಸಿದ ಕಿರುತೆರೆ ನಟಿ ನಮ್ರತಾ ಗೌಡ
ಚಿತ್ರಕ್ಕೆ ಸಂಭಾಷಣೆ ಚಕ್ರಿ ಕಿರಿಸಾವೆ, ಸಂಗೀತ ವಿಶಾಲ್ ಅಲಾಪ್, ಛಾಯಾಗ್ರಹಣ ದೀಪಕ್ ಕುಮಾರ್ ಜಿ.ಕೆ. ಅವರದ್ದಾಗಿದೆ. ಮೈಸೂರು, ಹಾಸನ, ಮಂಡ್ಯದ ಸುಂದರ ತಾಣಗಳಲ್ಲಿ ಎರಡು ಹಂತಗಳಂತೆ ಸೆಪ್ಟಂಬರ್ ಮೊದಲ ವಾರದಿಂದ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.