ನವ ದೆಹಲಿ: ದೇಶಾದ್ಯಂತ ಜನಪ್ರಿಯವಾಗಿರುವ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಿತ್ರ(Kantara Cinema)ವನ್ನು ಯಾವಾಗ ನೋಡುತ್ತೇನೋ ಎಂದು ಈ ಹಿಂದೆ ಹೇಳಿದ್ದ, ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ಸಿನಿಮಾ ನೋಡಿದ್ದಾರೆ. ಅಷ್ಟೇ ಅಲ್ಲದೇ, ಮುಂದಿನ ವರ್ಷ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಕಾಂತಾರ ಸಿನಿಮಾವನ್ನು ಕಳುಹಿಸಬೇಕು ಎಂದು ಹೇಳಿದ್ದಾರೆ.
ಆಸ್ಕರ್ ಸ್ಪರ್ಧೆಗೆ ಭಾರತದಿಂದ ಸೂಕ್ತ ಸಿನಿಮಾವನ್ನು ಕಳುಹಿಸಬೇಕು. ಕನ್ನಡ ಸಿನಿಮಾ ಕಾಂತಾರ ಆ ಎಲ್ಲ ಗುಣಗಳನ್ನು ಹೊಂದಿದೆ. ಇಡೀ ಜಗತ್ತೇ ನೋಡಬೇಕಾದಂಥ ಸಿನಿಮಾ ಇದು ಎಂದು, ಸದಾ ಬಾಲಿವುಡ್ ಟೀಕಿಸುವ ಕಂಗನಾ ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಕಂಬಳ ಓಟಗಾರನಾಗಿ, ಕಿಶೋರ್ ಡಿಆರ್‌ಎಫ್ಒ ಆಗಿ ಕಾಣಿಸಿಕೊಂಡಿದ್ದಾರೆ. ರಿಷಬ್ ಅವರೇ ಈ ಚಿತ್ರದ ನಿರ್ದೇಶಕರು. ಈ ಸಿನಿಮಾ ಬಿಡುಗಡೆಯಾದ ದಿನದಿಂದಲೂ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಮೊದಲ ಕನ್ನಡದಲ್ಲಿ ರಿಲೀಸ್ ಆದ ಸಿನಿಮಾ ಆ ಬಳಿಕ, ಹಿಂದಿ ಸೇರಿದಂತೆ ಇತರ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿದೆ.
ತಾವು ಸಿನಿಮಾ ನೋಡಿದ ಕುರಿತು ಇನ್‌ಸ್ಟಾಗ್ರಾಮ್ ಬರೆದುಕೊಂಡಿರುವ ಕಂಗನಾ, ಮುಂದಿನ ವರ್ಷಕ್ಕೆ ಕಾಂತಾರ ಭಾರತದಿಂದ ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಬೇಕು. ಈ ವರ್ಷ ಈಗಷ್ಟೇ ಮುಗಿಯುತ್ತಿದ್ದೆ. ಇನ್ನು ಟೈಮ್ ಇದೆ. ಅತ್ಯುತ್ತಮ ಚಿತ್ರಗಳು ಬರಬಹುದು. ಆದರೆ, ಆಸ್ಕರ್‌ಗಿಂತಲೂ ಹೆಚ್ಚಾಗಿ ಜಾಗತಿಕವಾಗಿ ಭಾರತವು ಸೂಕ್ತ ಚಿತ್ರವನ್ನು ಪ್ರತಿನಿಧಿಸಬೇಕು. ಭಾರತವು ಒಂದು ಪವಾಡದಂತೆ. ನೀವು ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ನೀವು ನಿರಾಶೆಗೊಳ್ಳುವಿರಿ. ಆದರೆ ನೀವು ಪವಾಡಕ್ಕೆ ಶರಣಾದರೆ ನೀವು ಕೂಡ ಅದರಲ್ಲಿ ಒಂದಾಗಬಹುದು. ಕಾಂತಾರ ಒಂದು ಅಂಥ ಅನುಭವದ ವಾಸ್ತವವಾಗಿದೆ ಇದನ್ನು ಜಗತ್ತು ಅನುಭವಿಸಬೇಕು ಎಂದು ಹೇಳಿದ್ದಾರೆ.
ನನ್ನ ಕುಟುಂಬದ ಸದಸ್ಯರೊಂದಿಗೆ ನಾನು ಈಗಷ್ಟೇ ಸಿನಿಮಾ ನೋಡಿ ಬಂದಿದ್ದೇನೆ. ನಾನು ಈಗಲೂ ಅದೇ ಗುಂಗಿನಲ್ಲಿದ್ದೇನೆ. ಇದೊಂದು ಸ್ಫೋಟಕ ಅನುಭವ. ರಿಷಬ್ ಶೆಟ್ಟಿ ನಿಮಗೆ ಹ್ಯಾಟ್‌ಆಫ್. ಕತೆ, ನಿರ್ದೇಶನ, ಅಭಿನಯ, ಆ್ಯಕ್ಷನ್ ಎಲ್ಲವೂ ಬ್ರಿಲಿಯಂಟ್ ಹಾಗೂ ನಂಬಲು ಅಸಾಧ್ಯ ಎಂದು ತಮ್ಮ ವಿಡಿಯೋ ರೆಕಾರ್ಡಿಂಗ್ ಮೇಸೆಜ್ ಕೂಡ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ | Kantara Movie | ಆಸ್ಕರ್ ಅವಾರ್ಡ್‌ಗೆ ಕಾಂತಾರ ನಾಮಿನೇಟ್ ಮಾಡಿ: ಶುರುವಾಯ್ತು ಟ್ವಿಟರ್ ಆಂದೋಲನ!