Site icon Vistara News

Kantara Movie: ಯೂಟ್ಯೂಬ್​ನಲ್ಲಿ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್; ವೀವ್ಸ್ ಎಷ್ಟು?

ಬೆಂಗಳೂರು: ಕಳೆದ ವರ್ಷ ತೆರೆಕಂಡ ʼಕಾಂತಾರʼ ಚಿತ್ರ (Kantara Movie) ಸೂಪರ್‌ ಹಿಟ್‌ ಆಗಿತ್ತು. ಕನ್ನಡ ಮಾತ್ರವಲ್ಲ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದರ ಎರಡನೇ ಭಾಗ ಬರುತ್ತದೆ ಎನ್ನುವಾಗಲೇ ಸಾಕಷ್ಟು ಕುತೂಹಲ ಮೂಡಿತ್ತು. ಅದರಂತೆ ನವೆಂಬರ್ 27ರಂದು ರಿಲೀಸ್ ಆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್ ದಾಖಲೆಯ ವೀಕ್ಷಣೆ ಕಂಡಿದೆ.

ಏಳು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಟೀಸರ್ ಬರೋಬ್ಬರಿ 12 ಮಿಲಿಯನ್ (1.2 ಕೋಟಿ) ಭಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಹಲವು ದಾಖಲೆಗಳನ್ನು ಇದು ಸರಿಗಟ್ಟಿದೆ. ನವೆಂಬರ್ 27ರಂದು ಕುಂದಾಪುರ ಆನೆಗುಡ್ಡೆ ದೇವಾಲಯದಲ್ಲಿ ಚಿತ್ರತಂಡ ಸ್ಕ್ರಿಪ್ಟ್ ಪೂಜೆ ಮಾಡಿದೆ. ಜತೆಗೆ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿತ್ತು. ʼಕಾಂತಾರʼ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಈ ಚಿತ್ರವನ್ನೂ ತಯಾರಿಸಲಿದೆ. ಈ ಬಾರಿ ಇತಿಹಾಸದ ನಿಗೂಢ ಸತ್ಯ ಹೇಳುವುದಕ್ಕೆ ರಿಷಬ್ ಶೆಟ್ಟಿ ತಯಾರಿ ಮಾಡಿಕೊಂಡಿದ್ದಾರೆ. ಕಾಡುಬೆಟ್ಟು ಶಿವನ ತಂದೆಯ ರಹಸ್ಯ ರಿವೀಲ್ ಮಾಡಲು ಹೊರಟ್ಟಿದ್ದಾರೆ ರಿಷಬ್‌. 2024ಕ್ಕೆ ‘ಕಾಂತಾರ-1’ ಚಿತ್ರಮಂದಿರಗಳಿಗೆ ಬರಲಿದೆ.

ರಿಷಬ್ ಶೆಟ್ಟಿ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದಿರುವ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಇದು ಬೆಳಕಲ್ಲ ದರ್ಶನ’ ಎನ್ನುವ ‘ಕಾಂತಾರ’ ಸಿನಿಮಾದಲ್ಲಿ ಹೈಲೈಟ್ ಆಗಿತ್ತು. ಆ ಡೈಲಾಗ್ ಇಲ್ಲಿಯೂ ಕೇಳಿ ಬಂದಿದೆ. ಕದಂಬರ ಕಾಲದ ಕಥೆ ಸಿನಿಮಾದಲ್ಲಿ ಇದೆ ಎನ್ನುವುದು ಟೀಸರ್‌ ಮೂಲಕ ಬಹಿರಂಗವಾಗಿದೆ.

‘ಈ ಹಿಂದೆ ಏನಾಗಿತ್ತು ಎಂಬುದನ್ನು ಹೇಳ ಹೊರಟಿದ್ದೇವೆ. ಜವಾಬ್ದಾರಿ ಹೆಚ್ಚಿದೆ. ಕಥೆ ಹೇಳಲ್ಲ, ಸಿನಿಮಾನೇ ಮಾತನಾಡುತ್ತದೆ’ ಎಂದಿರುವ ರಿಷಬ್‌ ಶೆಟ್ಟಿ ಕುತೂಹಲ ಹೆಚ್ಚಿಸಿದ್ದಾರೆ. ʼಕಾಂತಾರʼ ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಅದು ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತ್ತು. ಕಾಂತಾರ ಸಿನಿಮಾ ಸಾರ್ವಕಾಲಿಕ ಕಲೆಕ್ಷನ್‌ ಮಾಡಿದ ಕನ್ನಡದ ಎರಡನೇ ಚಿತ್ರವಾಗಿ ಹೊರಹೊಮ್ಮಿತು. ಈಗಾಗಲೇ ‘ಕಾಂತಾರ-1’ ಸಿನಿಮಾ ಕೆಲಸಗಳು ಭರದಿಂದ ಸಾಗಿದೆ. ವರದಿಗಳ ಪ್ರಕಾರ ಈ ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Rishab Shetty: ಕಾಂತಾರ; ಚಾಪ್ಟರ್‌ 1 ಫಸ್ಟ್ ಲುಕ್‌ನಲ್ಲಿ ರಿಷಬ್ ಶೆಟ್ಟಿ ರೌದ್ರಾವತಾರ

ʻʼಕಾಂತಾರದ ಅಧ್ಯಾಯ 1 ಸಿನಿಮಾ ಶುರು ಮಾಡಿದ್ದೇವೆ. ನಿಮ್ಮ ಆಶೀರ್ವಾದದಿಂದ ʼಕಾಂತಾರʼ ಸಕ್ಸೆಸ್‌ ಆಗಿದೆ. ಈ ಯಶಸ್ಸನ್ನು ಕನ್ನಡಿಗರಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಅದೇ ತರಹ ಮುಂದುವರಿದ ಪಯಣ ಇದು. ಕಾಂತಾರದ ಮುನ್ನುಡಿ, ಅಂದರೆ ಹಿಂದೆ ಏನು ನಡೆಯಿತು ಎನ್ನುವುದನ್ನ ಹೇಳಲು ಹೊರಟ್ಟಿದ್ದೇನೆ. ನೀವು ಎಷ್ಟು ಮೊದಲ ಪಾರ್ಟ್‌ಗೆ ಹರಸಿದ್ದೀರೋ ಈ ಸಿನಿಮಾಗೂ ಅಷ್ಟೇ ಹರಸಿʼʼ ಎಂದು ರಿಷಬ್‌ ಹೇಳಿದ್ದಾರೆ. ʼʼಹೊಸ ಪ್ರತಿಭೆಗಳನ್ನು ಹುಡುಕುತ್ತಾ ಇದ್ದೇವೆ. ನಿರ್ಮಾಪಕ ವಿಜಯ್‌ ಅವರ ನಂಬಿಕೆ ಸಕ್ಸೆಸ್‌ಗೆ ಸಾಥ್‌ ಕೊಟ್ಟಿದೆ. ಕಥೆಗೆ ಏನು ಬೇಕೋ ಅವರು ಸಹಾಯ ಮಾಡುತ್ತಿದ್ದಾರೆ. ತಾಂತ್ರಿಕ ವರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಲಾವಿದರಲ್ಲಿ ಸ್ವಲ್ಪ ಜನ ಹೊಸಬರು ಬರುತ್ತಾರೆʼʼ ಎಂದು ಹೇಳಿ ಕುತೂಹಲ ಹುಟ್ಟಿಸಿದ್ದಾರೆ.

Exit mobile version