Site icon Vistara News

Kantara Movie | ಇದೀಗ ಶೆಟ್ರು ಹರಿ ಅಲ್ಲ, ಶಿವ: ರಿಷಬ್‌ ಶೆಟ್ಟಿ ಅವರ ಫೈರಿ ಲುಕ್‌ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್‌

Kantara Movie

ಬೆಂಗಳೂರು: ಹೊತ್ತಿ ಉರಿಯುವ ಜ್ವಾಲೆಗಳ ನಡುವೆ ಕಂಬಳದ ಕೋಣಗಳ ಭಾರಿ ತುರುಸಿನ ಓಟದ ಪೋಸ್ಟರ್‌ ಮೂಲಕ ಗಮನ ಸೆಳೆದ ʻಕಾಂತಾರʼದ (Kantara Movie) ಮತ್ತೊಂದು ಅವತಾರ ರಿವೀಲ್‌ ಆಗಿದೆ. ಇದೀಗ ಕಂಬಳಿ ಕೊಪ್ಪೆಯನ್ನು ಹಾಕಿಕೊಂಡು, ಕೈಯಲ್ಲಿ ಕೋವಿ ಹಾಗೂ ಟೊಂಕದಲ್ಲಿ ಕತ್ತಿಯನ್ನು ಧರಿಸಿ, ಬೆಂಕಿಯ ಮಳೆ ಸುರಿಸುವಂತೆ ಗುರಿಯಿಟ್ಟು ಹೊಡೆಯುವ ಲುಕ್‌ನೊಂದಿಗೆ ನಟ ರಿಷಬ್‌ ಶೆಟ್ಟಿ ಅವರು ಶಿವನಾಗಿ ಪರಿಚಯಗೊಂಡಿದ್ದಾರೆ. 

ಕಾಂತಾರ ಚಿತ್ರದಲ್ಲಿ ಶಿವ ಪಾತ್ರದ ಮೂಲಕ ತೆರೆಗೆ ಬರಲಿದ್ದಾರೆ ರಿಷಬ್‌. ಹೊಂಬಾಳೆ ಫಿಲ್ಮ್ಸ್‌ ರಿಷಬ್‌ ಅವರ ಲುಕ್‌ನ್ನು ಪರಿಚಯಿಸಿದೆ. ಇದನ್ನು ನೋಡಿ ಅಭಿಮಾನಿಗಳು ಮಾಸ್‌ ಲುಕ್‌ ಎಂದು ಕಮೆಂಟ್‌ ಮೂಲಕ ಸಂತಸ ಹೊರ ಹಾಕುತ್ತಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಹರಿ ಆಗಿ ಕಾಣಿಸಿಕೊಂಡಿದ್ದ ರಿಷಬ್‌, ಈ ಸಿನಿಮಾದಲ್ಲಿ ಶಿವನಾಗಿ ಕಾಣಿಸಿಕೊಳ್ಳುವುದರ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಇನ್ನೂ ಮುಂಬರುವ ಸಿನಿಮಾದಲ್ಲಿ ಬ್ರಹ್ಮನಾಗಿ ಕಾಣಿಸಿಕೊಳ್ಳಲಿದ್ದಾರಾ? ಶೆಟ್ರು ಎಂದು ಅಭಿಮಾನಿಗಳು, ಸಿನಿ ಪ್ರೇಮಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಕಾಂತಾರ ಸಿನಿಮಾದ ಪೋಸ್ಟರ್‌ ನೋಡುವಾಗಲೇ ʻಕಾಂತಾರʼ ಶೀರ್ಷಿಕೆಯೇ ಜನರನ್ನು ಕುತೂಹಲಕ್ಕೆ ಕೊಂಡೊಯ್ದಿತ್ತು. ಒಂದು ದಂತ ಕಥೆ ಎಂಬ ಟ್ಯಾಗ್‌ಲೈನ್‌ ಮೂಲಕ ಜನರನ್ನು ಸೆಳೆದಿತ್ತು. ಕಾಂತಾರ ಎಂಬುದು ಸಾಮಾನ್ಯವಾಗಿ ಇದರ ಅರ್ಥ ಸೂರ್ಯನ ಬಿಸಿಲೇ ಬೀಳದ ಕಾಡು ಎಂದರ್ಥ. ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಶ್ರೀದೇವಿ ದುಷ್ಟರನ್ನು ಸದೆಬಡಿಯಲು ಕದಂಬ ಕಾಂತಾರದಲ್ಲಿ ನೆಲೆಸಿರುತ್ತಾಳೆ ಎಂದು ತೋರಿಸಲಾಗುತ್ತದೆ. ಕಂಬಳ ಕ್ಷೇತ್ರದಲ್ಲೀ ಕಾಂತಾವರ ಎಂಬ ಹೆಸರು ಜನಪ್ರಿಯವಾಗಿದೆ. ಇದೆಲ್ಲವನ್ನೂ ಜೋಡಿಸಿಕೊಂಡು ಕಾಂತಾರದ ಕಥೆ ಹೆಣೆದಿರುವ ಸಾಧ್ಯತೆ ಇದೆ.

ಇನ್ನೊಂದು ಊಹೆಯಂತೆ ಇದು ಕಂಬಳದೊಂದಿಗೆ ಬೆಸೆದುಕೊಂಡು ರೂಪಿಸಲಾದ ಕಾಡುಗಳ್ಳರ ಕಥೆಯೂ ಇರಬಹುದು. ಕಾಡಿಗೆ ಬೆಂಕಿ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ದುಷ್ಟ ಕೂಟದ ಕಥೆಯೂ ಇರಬಹುದು ಎನ್ನಲಾಗುತ್ತಿದೆ. ಕರಾವಳಿಯಿಂದಲೇ ಬಂದಿರುವ ರಿಷಭ್‌ ಶೆಟ್ಟಿ ಅಲ್ಲಿನ ನೇಟಿವಿಟಿಯನ್ನೇ ಬಳಸಿಕೊಂಡು ಕಥೆ ಮಾಡಿದ್ದಾರೆ. 

ವಿಜಯ್‌ ಕಿರಗಂದೂರು ನಿರ್ಮಾಣ ಮತ್ತು ರಿಷಭ್‌ ಶೆಟ್ಟಿ ಅಭಿನಯ, ನಿರ್ದೇಶನದಿಂದಾಗಿ ಕುತೂಹಲ ಕೆರಳಿಸಿರುವ ಈ ಚಿತ್ರವನ್ನು ಮುಂದಿನ ದಸರಾ ಹಬ್ಬದೊಂದಿಗೆ ಸವಿಯಬಹುದು! ಹೌದು, ಇಡೀ ಚಿತ್ರರಂಗ ಅಚ್ಚರಿ, ಬೆರಗಿನೊಂದಿಗೆ ಕಾಯುತ್ತಿರುವ ಕಾಂತಾರ ಸೆಪ್ಟೆಂಬರ್‌ 30ರಂದು ತೆರೆ ಕಾಣಲಿದೆ.

Exit mobile version