ಬೆಂಗಳೂರು: “ಕಾಂತಾರ ನನ್ನ ಸಿನಿಮಾ…” (Kantara Movie). ಇದು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನದ ಮಾತು. ಇಂಡಿಯಾ ಟುಡೇ ಸುದ್ದಿವಾಹಿನಿಯಲ್ಲಿ ಸಂದರ್ಶನದಲ್ಲಿ ಭಾಗಿಯಾಗಿದ್ದ ಅವರು, ಕೆಜಿಎಫ್ ಭಾಗ ೧-೨ ರ ಯಶಸ್ಸಿನ ಬಗ್ಗೆ ಮಾತನಾಡುವ ವೇಳೆ ಸಂದರ್ಶಕ ರಾಜ್‌ದೀಪ್ ಸರ್‌ದೇಸಾಯಿ ಅವರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.
ಪ್ರಶ್ನೆ ಕೇಳುವ ಸಮಯದಲ್ಲಿ ಕಾಂತಾರ ಬಗ್ಗೆ ಪ್ರಸ್ತಾಪಿಸುವ ರಾಜ್‌ದೀಪ್ ಸರ್‌ದೇಸಾಯಿ, ಮೊದಲು ನಿಮ್ಮ ಸಿನಿಮಾ ಎಂದು ಯಶ್‌ಗೆ ಹೇಳಿದ್ದಾರೆ. ಬಳಿಕ ತಿದ್ದಿಕೊಂಡು ನಿಮ್ಮ ಸಿನಿಮಾ ಅಲ್ಲ, ಕನ್ನಡ ಸಿನಿಮಾ ಎಂದು ಪ್ರಸ್ತಾಪ ಮಾಡಿದ್ದಾರೆ. ಹೀಗೆ ಕರ್ನಾಟಕದಲ್ಲಿ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾವೊಂದು ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ, ಸಾಕಷ್ಟು ಹಣವನ್ನೂ ಸಂಪಾದನೆ ಮಾಡಿದೆ. ಹೀಗಾಗಿ “ನಮ್ಮ ಕರ್ನಾಟಕ” ಎಂಬ ಪದ ಬಳಕೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನೆ ಮಾಡುತ್ತಾರೆ. ಆಗ ಮಾತನಾಡುವ ಯಶ್, “ನೀವು ಹೇಳುವಾಗ ಕಾಂತಾರ ನನ್ನ ಸಿನಿಮಾ ಅಲ್ಲ ಎಂದು ಪ್ರಸ್ತಾಪ ಮಾಡಿದಿರಿ. ಇಲ್ಲ, ಕಾಂತಾರ ಕೂಡಾ ನನ್ನ ಸಿನಿಮಾವೇ ಆಗಿದೆ” ಎಂದು ಮಾತು ಶುರು ಮಾಡಿದರು.
“ಕಾಂತಾರ ಕೂಡಾ ನನ್ನ ಸಿನಿಮಾ. ಇದು ನಮ್ಮ ಕರ್ನಾಟಕದ ಸಿನಿಮಾ, ಕರ್ನಾಟಕ ಸೇರಿದಂತೆ ಎಲ್ಲ ಕಡೆಯೂ ಇದು ಉತ್ತಮ ಪ್ರದರ್ಶನ ಕಾಣುತ್ತಿದೆ. ಗರುಡ ಗಮನ ವೃಷಭ ವಾಹನ, ಚಾರ್ಲಿ ೭೭೭ ಸೇರಿದಂತೆ ಕನ್ನಡದ ಇನ್ನೂ ಹಲವು ಸಿನಿಮಾಗಳು ಉತ್ತಮ ಪ್ರದರ್ಶನವನ್ನು ಕಂಡಿವೆ. ಎಲ್ಲದರ ಜತೆಗೆ ಒಳ್ಳೆಯ ಬ್ಯಾನರ್ ಅಡಿ ಸಿನಿಮಾ ನಿರ್ಮಾಣಗೊಂಡರೆ ಆ ಚಿತ್ರಕ್ಕೆ ಒಳ್ಳೆಯ ಪ್ರಚಾರ ಸಿಗುತ್ತದೆ” ಎಂದು ಯಶ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ | Kantara Movie | ತುಳುವಿನಲ್ಲಿ ಬರ್ತಾ ಇದೆ ಕಾಂತಾರ: ರಿಷಬ್ ಹೇಳಿದ್ದೇನು?
ಹಿಂದಿ ಬೆಲ್ಟ್‌ನಲ್ಲಿ ಸಹ ಕಾಂತಾರ 50 ಕೋಟಿ ಕ್ಲಬ್ ಸೇರಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಕಾಂತಾರ ಬಿಡುಗಡೆಗೊಂಡು ಮೋಡಿ ಮಾಡುತ್ತಿದೆ. ತುಳುನಾಡಿನ ಆರಾಧ್ಯ ದೈವದ ಕುರಿತಾದ ಸಿನಿಮಾ ಇದಾಗಿದ್ದರಿಂದ, ತುಳುವಿಗೂ ಈ ಚಿತ್ರವನ್ನು ಡಬ್ ಮಾಡಲಾಗುತ್ತಿದೆ.
ಇದನ್ನೂ ಓದಿ | Kantara movie | ಪಂಜುರ್ಲಿ ದೈವದ ರೀಲ್ಸ್ ವಿವಾದ: ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ ಯುವತಿ