Site icon Vistara News

Kantara vs Martin Movie : ಆ್ಯಕ್ಷನ್‌ ಪ್ರಿನ್ಸ್‌ ಮತ್ತು ರಿಷಭ್ ಶೆಟ್ಟಿ ‌ಒಂದೇ ದಿನ ಮುಖಾಮುಖಿ!

Kantara vs Martin Movie

ಬೆಂಗಳೂರು : ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ʼಕಾಂತಾರʼ ಸಿನಿಮಾ ರಿಲೀಸ್‌ ಡೇಟ್‌ ರಿವೀಲ್‌ ಆಗಿದೆ. ಕಂಬಳದ ಪೋಸ್ಟರ್‌ ಮೂಲಕ ಖಡಕ್‌ ಲುಕ್‌ನಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ರಿಷ‌ಭ್ ಸೆ. 30ರಂದು ದಸರಾ ಹಬ್ಬದ ಪ್ರಯುಕ್ತ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

ʼಕಾಂತಾರʼ ಚಿತ್ರ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಭ್ ಜತೆ ಸಪ್ತಮಿ, ಕಿಶೋರ್‌, ಅಚ್ಯುತ್‌ಕುಮಾರ್‌ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರದ ಸ್ಪೆಷಲ್‌ ಏನಪ್ಪಾ ಅಂದರೆ ರಿಷಭ್‌ ಶೆಟ್ಟಿ ಅವರೇ ಕಥೆ ಮತ್ತು ನಿರ್ದೇಶನ ಮಾಡಿರುವುದು. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಚಿತ್ರ ಬರುತ್ತಿದೆ. ಆದರೆ ಇದೇ ದಿನಾಂಕದಂದು ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್‌ʼ ಸಹ ಬಿಡುಗಡೆಗೊಳ್ಳುತ್ತಿದೆ.

ಇದನ್ನೂ ಓದಿ | ದಸರಾ ಹಬ್ಬಕ್ಕೆ ಬರಲಿದೆ ರಿಷಭ್‌ ಶೆಟ್ಟಿಯ ಕಾಂತಾರ, ಕಥೆ ಏನಿರಬಹುದು?

ಮಾರ್ಟಿನ್‌ʼ ತಂಡ ಎರಡು ತಿಂಗಳ ಹಿಂದೆಯಷ್ಟೇ ಕಾಂತಾರಕ್ಕಿಂತ ಮುಂಚಿತವಾಗಿ ರಿಲೀಸ್‌ ಡೇಟ್‌ ಹಂಚಿಕೊಂಡಿದ್ದರು. ಎರಡೂ ಚಿತ್ರಗಳು ಒಂದೇ  ದಿನಾಂಕದಂದು ಬಿಡುಗಡೆಗೊಳ್ಳುತ್ತಿರುವುದರಿಂದ, ಪೈಪೋಟಿ ಜೋರಾಗಿಯೇ ಇದೆ. ಕನ್ನಡ ಸಿನಿಮಾ ರಂಗದ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ರಿಷಭ್ ಶೆಟ್ಟಿ ಅವರದ್ದು. ವಿಭಿನ್ನ ಬಗೆಯ ಸಿನಿಮಾಗಳನ್ನು ಮಾಡುವುದರಿಂದ, ಇವರದ್ದೇ ಆದ ನೋಡುಗರ ಬಳಗವಿದೆ. ಅಲ್ಲದೇ, ಕಾಂತಾರ ಸಿನಿಮಾದ ಟ್ರೈಲರ್ ಕೆಜಿಎಫ್ -2 ಸಿನಿಮಾ ರಿಲೀಸ್ ವೇಳೆ ಬಿಡುಗಡೆ ಆಗಿತ್ತು.

ಚಿತ್ರರಂಗದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳೇ ಹೆಚ್ಚಾಗಿ ಬರುತ್ತಿದ್ದು, ಎಲ್ಲಾ ಭಾಷೆಗಳಲ್ಲೂ ಸಿನಿಮಾ ತೆರೆಗೆ ಬರುತ್ತಿದೆ. ಮಾರ್ಟಿನ್‌ ಕೂಡ ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಪಂಚ ಭಾಷೆಗಳಲ್ಲಿ ತೆರೆಗೆ ಬರಲಿದೆ. ಆದರೆ ಕಾಂತಾರ ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್‌ ಆಗುತ್ತಿದ್ದು, ಸೈ ಎನಿಸಿಕೊಳ್ಳುವತ್ತ ಮುನ್ನುಗ್ಗುತ್ತಿದೆ.

ಎರಡೂ ಚಿತ್ರಗಳು ಹೈ ಬಜೆಟ್‌ ಮೂವಿಗಳು. ಮಾರ್ಟಿನ್‌ ಆ್ಯಕ್ಷನ್‌ ಫಿಲ್ಮ್‌ ಆಗಿದ್ದರೆ, ಕಾಂತಾರ ಕರ್ನಾಟಕದ ಪ್ರಖ್ಯಾತ ಜಪನದ ಕ್ರೀಡೆ ಕಂಬಳದ ಸುತ್ತಲಿನ ಕಥೆ ಒಳಗೊಂಡಿರುವ ಚಿತ್ರವಾಗಿದೆ. ಮಾರ್ಟಿನ್‌ ಆಗಿ ಕ್ರೈಂ ಲೋಕದ ಕಥೆ ಹೇಳಲು ಸ್ಯಾಂಡಲ್‌ವುಡ್‌ನ ಆ್ಯಕ್ಷನ್‌ ಪ್ರಿನ್ಸ್‌ ಸಿದ್ದರಾಗಿದ್ದಾರೆ. ಪ್ರೇಕ್ಷಕರು ಇವರೆಡೂ ಸಿನಿಮಾಗಳಲ್ಲಿ ಅತಿ ಹೆಚ್ಚು ಯಾವ ಸಿನಿಮಾವನ್ನು ಕೈ ಹಿಡಿಯಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.

ಇದನ್ನೂ ಓದಿ | UI : ಇಡೀ ಚಿತ್ರತಂಡಕ್ಕೆ ರಿಯಲ್‌ ನಾಮ ಇಟ್ಟ ಉಪ್ಪಿ

Exit mobile version