ಬೆಂಗಳೂರು: ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ನಟಿಸರುವ ಮೆರ್ರಿ ಕ್ರಿಸ್ಮಸ್ (Merry Christmas Movie) ಲುಕ್ ಬಿಡುಗಡೆಗೊಂಡಿದೆ. ಶ್ರೀರಾಮ್ ರಾಘವನ್ ನಿರ್ದೇಶನದ ಈ ಸಿನಿಮಾದ ರಿಲೀಸ್ ಡೇಟ್ ಜತೆಗೆ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಹಿಂದಿ ಮತ್ತು ತಮಿಳಿನಲ್ಲಿ ಡಿಸೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕತ್ರಿನಾ ಕೈಫ್ ಇದೆ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ನಟಿಸಿದ್ದಾರೆ.
‘ಮೇರಿ ಕ್ರಿಸ್ಮಸ್’ ಸಿನಿಮಾವನ್ನು ತಮಿಳು ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೆಂದ ಮಾತ್ರಕ್ಕೆ ಇದು ಬರೀ ಡಬ್ಬಿಂಗ್ ಚಿತ್ರ ಅಲ್ಲ. ತಮಿಳಿನಲ್ಲಿ ಮತ್ತು ಹಿಂದಿಯಲ್ಲಿ ಬೇರೆ ಬೇರೆ ವರ್ಷನ್ ಇರಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಪೋಸ್ಟರ್‌ನಲ್ಲಿ ಟ್ಯಾಕ್ಸಿಯೊಂದರ ಬಳಿ ಹಿಂದಿಯಲ್ಲಿ “ರಾತ್ರಿ ಹೆಚ್ಚು ಗಂಭೀರವಾಗಿದೆ, ಬೆಳಗ್ಗೆ ಹೆಚ್ಚು ವರ್ಣರಂಜಿತವಾಗಿರುತ್ತದೆ” ಎಂದು ಕ್ಯಾಪ್ಷನ್ ಬರೆಯಲಾಗಿದೆ.
ʻಮೆರ್ರಿ ಕ್ರಿಸ್‌ಮಸ್’ ತಮಿಳು ಆವೃತ್ತಿಯ ಪೋಸ್ಟರ್ ವಿಜಯ್ ಸಹ ಹಂಚಿಕೊಂಡಿದ್ದಾರೆ. ಶ್ರೀರಾಮ್ ರಾಘವನ್ ನಿರ್ದೇಶನದ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಕತ್ರಿನಾ ಮೊದಲ ಬಾರಿಗೆ ವಿಜಯ್ ಜತೆ ತೆರೆ ಹಂಚಿಕೊಂಡಿದ್ದಾರೆ. ಹಿಂದಿ ಅವತರಣಿಕೆಯಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ತಿನ್ನು ಆನಂದ್ ಕಾಣಿಸಿಕೊಳ್ಳಲಿದ್ದರೆ, ತಮಿಳು ಆವೃತ್ತಿಯಲ್ಲಿ ರಾಧಿಕಾ ಶರತ್‌ಕುಮಾರ್, ಷಣ್ಮುಗರಾಜ, ಕೆವಿನ್ ಜಯ್ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ಇದ್ದಾರೆ.
ಇದನ್ನೂ ಓದಿ: Katrina Kaif: ಅಮೆರಿಕದಲ್ಲಿ ಜಾಲಿ ಮೂಡ್‌ನಲ್ಲಿ ಕತ್ರಿನಾ ದಂಪತಿ; ವಿಕ್ಕಿ ಈಸ್ ಲಕ್ಕಿ ಎನ್ನುತ್ತಿದ್ದಾರೆ ನೆಟ್ಟಿಗರು
ಈ ಬಗ್ಗೆ ನಿರ್ದೇಶಕ ಶ್ರೀರಾಮ್ ರಾಘವನ್ ಮಾತನಾಡಿ ʻಇದನ್ನು ಎರಡು ವರ್ಷನ್ ಮಾಡುವುದು ಒಳ್ಳೆಯದು ಅಂತ ನಮಗೆ ಅನಿಸಿತು. ಎರಡರಲ್ಲೂ ಶೇ.95ರಷ್ಟು ಸೇಮ್ ಇರಲಿದೆ. ಭಾಷೆಯಲ್ಲಿ ಬದಲಾವಣೆ ಇರಲಿದೆ. ಹಿಂದಿ ಮತ್ತು ತಮಿಳಿನಲ್ಲಿ ಕೆಲವು ನಟರು ಕೂಡ ಬದಲಾಗಿದ್ದಾರೆ. ಇದೊಂದು ಡಬ್ಬಿಂಗ್ ಸಿನಿಮಾ ಅಂತ ಅನಿಸಬಾರದು ಎಂಬುದು ನಮ್ಮ ಉದ್ದೇಶ’ ಎಂದರು. ಕ್ರಿಸ್ಮಸ್ ಹಬ್ಬಕ್ಕೂ ಕೆಲವೇ ದಿನಗಳ ಮುನ್ನ ಈ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 15ರಂದು ಈ ಚಿತ್ರ ರಿಲೀಸ್ ಆಗಲಿದ್ದು, ಅದೇ ಸಮಯಕ್ಕೆ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ‘ಯೋಧ’ ಚಿತ್ರ ಕೂಡ ಬಿಡುಗಡೆ ಆಗುತ್ತಿರುವುದರಿಂದ ಕ್ಲ್ಯಾಶ್ ಆಗಲಿದೆ.
ಕತ್ರಿನಾ ಕೈಫ್ ಅವರು ಸಲ್ಮಾನ್ ಖಾನ್ ಅವರ ಟೈಗರ್ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರ ಈ ವರ್ಷದ ದೀಪಾವಳಿಗೆ ತೆರೆ ಕಾಣಲಿದೆ. ಹಾಗೆಯೇ ನಟಿ ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಅವರೊಂದಿಗೆ ನಟಿಸುತ್ತಿದ್ದಾರೆ.