ಬೆಂಗಳೂರು : ಈ ವರ್ಷ ಕನ್ನಡದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಸಿನಿಮಾಗಳು ಹಿಟ್ ಕಂಡಿವೆ. ಈ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಮೊದಲ ತಮಿಳು ಚಿತ್ರದ ಹೆಸರು ‘ರಘುತಾತಾ’. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕೀರ್ತಿ ಸುರೇಶ್ (Keerthy Suresh) ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದ ಮೊದಲ ಪೋಸ್ಟರ್ ಡಿಸೆಂಬರ್ 4 ಭಾನುವಾರ ಬಿಡುಗಡೆಯಾಗಿದೆ. ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ | ನಾಗ ಕನ್ಯೆಯಾಗಿ ಮಿಂಚುತ್ತಿದ್ದಾರೆ ನಟಿ ಕೀರ್ತಿ ಸುರೇಶ್
‘ರಘುತಾತಾ’ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼಎಂದು ಚಿತ್ರತಂಡ ಹೇಳಿಕೊಂಡಿದೆ. ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಜೈ ಭೀಮ್ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.
‘ರಘುತಾತಾ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, 2023ರ ಬೇಸಿಗೆ ರಜೆಯ ಸಂದರ್ಭದಲ್ಲಿ ಚಿತ್ರವು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಸರಾ’ ಸಿನಿಮಾದಲ್ಲಿ ಕೀರ್ತಿ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದು, ಈಗಾಗಲೇ ಸಿನಿ ಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. 2023 ಮಾರ್ಚ್ 30ರಂದು ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ | Hombale Films | ಬಾಲಿವುಡ್ ನಟ ಶಾರುಖ್ ಖಾನ್ ಸಿನಿಮಾ ನಿರ್ಮಾಣ ಮಾಡಲಿದೆಯಂತೆ ಹೊಂಬಾಳೆ ಫಿಲ್ಮ್ಸ್!