Site icon Vistara News

khadak singh review: ಖಡಕ್ ಕತೆಯಿಲ್ಲದೆ ತೇಲಿ ಹೋಗುವ ಖಡಕ್ ಸಿಂಗ್!

Khadak SIngh

ಶಿವರಾಜ್‌ ಡಿ ಎನ್‌ ಎಸ್‌

ಈ ಸಿನಿಮಾದ (khadak singh review) ಕಾಸ್ಟಿಂಗ್ ಅದ್ಭುತವಾಗಿದೆ. ಪಾರ್ವತಿ ತಿರುವತ್ತೂರ್ ಹೆಡ್ ನರ್ಸ್ ‘ಮಿಸ್ ಕಣ್ಣನ್’ ಪಾತ್ರದಲ್ಲಿ ಕ್ಯೂಟ್ ಎನ್ನುವಂತೆ ನಟಿಸಿದ್ದಾರೆ, ಪಂಕಜ್ ತ್ರಿಪಾಠಿ ಅವರು ಎಕೆ ಶ್ರೀವಾತ್ಸವ್ ಪಾತ್ರಕ್ಕೆ ಎಂದಿನಂತೆ ತಮ್ಮ ಮನೋಜ್ಞ ಅಭಿನಯದಿಂದ ಜೀವ ನೀಡಿದ್ದಾರೆ. ಬಹಳ ದಿನಗಳ ನಂತರ ಚಿತ್ರದ ಸಂಗೀತದಲ್ಲಿ ಸಿತಾರ್, ಸರೋದ್ ವಾದ್ಯದ ಸದ್ದುಗಳು ಕೇಳಿ ಬಂದವು. ಸಾಕ್ಷಿ ಶ್ರೀವಾತ್ಸವ್ ಪಾತ್ರದಲ್ಲಿ ಸಂಜನಾ ಶಾಘೈ ಅಚ್ಚುಕಟ್ಟಾಗಿ ಅಭಿನಯಿಸಿರುವುದಲ್ಲದೆ ಕೆಲವು ದೃಶ್ಯಗಳಲ್ಲಿ ಭಾವನಾತ್ಮಕವಾಗಿ ಗಮನ ಸೆಳೆಯುತ್ತಾರೆ. ಚಿತ್ರದ ಸಂಭಾಷಣೆ ಕವಿತೆಯಂತೆ ಭಾಸವಾಗುತ್ತದೆ.

ಎಲ್ಲರಿಗೂ ಅನ್ಸತ್ತೆ.. ನಮಗೆ ಅಮ್ಮ ಇಲ್ಲ ಅಂತಾ. ಆದರೆ ಅವರಿಗೆ ಗೊತ್ತಿಲ್ಲ, ನಮ್ಮ ಅಪ್ಪನೂ ಇಲ್ಲ. ನಾವು ಅಪ್ಪ ಅಮ್ಮ ಇಬ್ಬರನ್ನೂ ಒಟ್ಟಿಗೆ ಕಳ್ಕೊಂಡೆವು. ಒಬ್ಬರಿದ್ದಾರೆ ಮನೆಯಲ್ಲಿ, ಅಪ್ಪನಂತೆ ಓಡಾಡಿಕೊಂಡು. ಆದರೇ ಅವರು ನಮ್ಮಪ್ಪ ಅಲ್ಲ. ಯಾಕಂದ್ರೆ ನಮ್ಮಪ್ಪನ ಮುಖದಲ್ಲಿ ನಗು ಇರ್ತಿತ್ತು. ಅವರ ಬೆವರ ವಾಸನೆಯೊಂದಿಗೆ ಟಾಲ್ಕಂ ಪೌಡರ್ ಘಮಲು ಮೂಗಿದೆ ತಾಕುತ್ತಿತ್ತು. ಅವರು ಕಣ್ಣಲ್ಲಿ ಕಣ್ಣಿಡುತ್ತಿದ್ದರು. ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದರು.

ಅಪ್ಪನ ಮುಂದೆ ನಿಂತು ಮಗಳು ಹೇಳುವ ಮಾತುಗಳಿವು, ಸಿನಿಮಾದಲ್ಲಿ ಕೇಳುವಾಗ ಕಣ್ತುಂಬಿಕೊಂಡವು. ಹೀಗೆ ಎಲ್ಲ ಪಾತ್ರದಅರಿಗಳ ಅಭಿನಯ ಹಾಗೂ ತಂತ್ರಜ್ಞ ವರ್ಗದ ಎಲ್ಲ ಕಾರ್ಯವೂ ಗಟ್ಟಿಯಾಗಿದೆ ಆದರೆ ದುನಿಯಾ ತು ಶಾತೀರ್ ಹೈ, ವಿಶ್ವಾಸ್ ಗಾತಿ ಹೈ.. ‘ಹೆ ಜಗತ್ತೆ ನೀನೆಷ್ಟು ಚಾಣಾಕ್ಷ, ನಿನ್ನೊಳಗೆ ಏನೆಲ್ಲ ಹೊಳಹು, ಬೆಳಕು, ಕೊಳಕು ಇದೆ’ ಎನ್ನುವ ಹಿನ್ನೆಲೆ ಧ್ವನಿಯಲ್ಲಿ ಟೈಟಲ್ ಕಾರ್ಡಿನೊಂದಿಗೆ ಶರುವಾಗುವ ಸಿನಿಮಾ ಮೊದಲ ದೃಶ್ಯದಲ್ಲೇ ತಂದೆ ಮಗಳಂಥವರು ಎದುರಾಗಬಾರದಂಥ ಸ್ಥಳದಲ್ಲಿ ಎದುರಾಗುತ್ತಾರೆ ಎಂಬಂತೆ ಬಿಂಬಿಸಿ ಪ್ರೇಕ್ಷಕರಲ್ಲಿ ದಟ್ಟ ಆಲೋಚನೆಗಳು ಹುಟ್ಟಿಕೊಳ್ಳುವಂತೆ ಮಾಡುತ್ತದೆ.

ಖಡಕ್‌ ಸಿಂಗ್‌ ಯಾಕೆ?:

ಕಟ್ಟುನಿಟ್ಟಿನ ತಂದೆಯ ದುರ್ವರ್ತನೆ ನೋಡಿ ಮಕ್ಕಳಿಬ್ಬರು ಅಪ್ಪನಿಗೆ ‘ಖಡಕ್ ಸಿಂಗ್’ ಎಂದು ಅಡ್ಡ ಹೆಸರು ಇಟ್ಟುಕೊಂಡಿರುತ್ತಾರೆ. ಅದನ್ನೆ ಟೈಟಲ್ ಮಾಡುವಷ್ಟು ಚಿತ್ರದಲ್ಲಿ ವಿಷಯಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲದಿರುವುದು ಗೊಂದಲಕಾರಿ. ಚಿತ್ರದಲ್ಲಿ ಮಗ ತಪ್ಪುಮಾಡಿದ ಎಂದು ಬೆಲ್ಟ್ ಬಿಚ್ಚಿ ಥಳಿಸುವ ಅಪ್ಪ ಹೊರಗೆ ಬಂದು ಅದೇ ತಪ್ಪನ್ನು ಮಾಡುವ ವಿಷಯ, ನೋವಿನ ನೆಪ ಒಡ್ಡಿ ತಪ್ಪು ಹಾದಿ ತುಳಿಯುವ ತಮ್ಮನ ತಿದ್ದುವ ಅಕ್ಕ, ಅಪ್ಪನ ಪ್ಯಾಂಟ್ ಜೇಬಿನಲ್ಲಿ ವಯಸ್ಸಿಗೆ ಬಂದ ಮಗಳ ಕೈಗೆ ಕಾಂಡೋಮ್ ಸಿಗುವುದು, ಪ್ರೀತಿ ಸ್ನೇಹವನ್ನೂ ಮೀರಿದಂಥ ಸಂಬಂಧ ಹೊಂದುವ ಇಬ್ಬರು ತಮ್ಮ ಸಂಬಂಧ ಅನಿವಾರ್ಯವೋ, ಅವಶ್ಯಕತೆಯೊ, ನೋವಿಗೆ ಔಷಧಿಯೊ ಎಂದು ಸಮಾಲೋಚನೆ ಮಾಡುವಂಥದ್ದು. ಹೀಗೆ ಹತ್ತು ಹಲವು ಅದ್ಭುತ ಎನಿಸುವಂತ ವಿಷಯಗಳು ಚಿತ್ರದಲ್ಲಿದೆ. ಆದರೆ ಚಿತ್ರ ಮುಗಿದ ನಂತರದಲ್ಲಿ ಬರಹಗಾರರೋ ನಿರ್ದೇಶಕರೊ ಕತೆ ಸಾಗಿಸುವ ಭರದಲ್ಲಿ ಯಾವ ವಿಷಯಕ್ಕೂ ಒತ್ತು ಕೊಡದೆ ಎಲ್ಲವನ್ನೂ ಮಾತಿನಲ್ಲೇ ತೇಲಿಸಿ ಎಲ್ಲೋ ಏನೊ ಎಡವಟ್ಟು ಮಾಡಿಕೊಂಡಿದ್ದಾರೆ ಅನಿಸುತ್ತದೆ.

ಸಂಶಯದಿಂದ ಶುರು

ಕೋಲ್ಕತ್ತಾದ ಫೈನಾನ್ಸಶೀಯಲ್ ಕ್ರೈಮ್ ಇಲಾಖೆಯಲ್ಲಿ ನಿರ್ದೇಶಕನಾಗಿರುವ ಎ ಕೆ ಶ್ರೀವಾತ್ಸವ್ ಒತ್ತಡದಿಂದಲೋ ವೈಯಕ್ತಿಕ ಬದುಕಿನ ಸಮಸ್ಯೆಯಿಂದಲೋ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾನೆ. ನಿಜಕ್ಕೂ ಅವನು ಆತ್ಮಹತ್ಯೆ ಪ್ರಯತ್ನ ಮಾಡಿರುವುದಾ ಅಥವಾ ವೃತ್ತಿರಂಗದ ವೈರಿಗಳ ಕೊಲೆ ಪ್ರಯತ್ನವಾ ಎನ್ನುವ ಸಂಶಯ ಸಿನಿಮಾದ ಶುರುವಿನಿಂದ ಕೊನೆಯವರೆಗೂ ಪ್ರೇಕ್ಷಕರಷ್ಟೆ ಅಲ್ಲದೇ ಪಾತ್ರಗಳಿಗೂ ಕೊನೆಯವರೆಗೂ ಪ್ರಶ್ನೆಯಾಗಿಯೇ ಉಳಿದಿರುತ್ತದೆ.
ಸದ್ಯ ಸಾವಿನ ದವಡೆಯಿಂದ ಪಾರಾಗಿರುವ ಶ್ರೀ ವಾತ್ಸವ್ ತನ್ನ ಜ್ಞಾಪಕ ಶಕ್ತಿ ಕಳೆದುಕೊಂಡು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತರಿದ್ದಾನೆ. ಅವನ ಬದುಕಿನ ವೈಯಕ್ತಿಕ ಸಂಬಂಧಗಳು ಸಹೋದ್ಯೋಗಿಯಾಗಿರುವ ಹಲವು ಪಾತ್ರಗಳು, ಒಂದೊಂದಾಗಿ ಬಂದು ಅವರವರ ದೃಷ್ಟಿಕೊನದಲ್ಲಿ ಕಥೆ ಹೇಳುತ್ತ ನೆನಪು ಮರುಕಳಿಸಲು ಸಹಕರಿಸುತ್ತಿದ್ದಾರೆ.

ಶ್ರೀವಾತ್ಸವ್ ನಿತ್ಯ ‘ನರ್ಸ್ ಮಿಸ್ ಕಣ್ಣನ್’ ಜೊತೆಗೆ ಬಂದು ಹೋದವರು ಹೇಳಿದ ಕತೆಗಳ ಸತ್ಯ ಅಸತ್ಯತೆಯನ್ನ ವಿಮರ್ಶಿಸಿ ನಿರ್ಧಾರಕ್ಕೆ ಬರುತ್ತಿದ್ದಾನೆ. ಎಕೆ ಶ್ರೀ ಆತ್ಮಹತ್ಯೆ ಪ್ರಯತ್ನಕ್ಕೂ ಮೊದಲು ಸಹೋದ್ಯೋಗಿ ರವಿ ಎಂಬಾತನೂ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಪರಿಸ್ಥಿತಿ ಹೀಗಿರುವಾಗ ಈ ಕುರಿತು ನ್ಯೂಸ್ ಚಾನೆಲ್‌ಗಳಲ್ಲಿ ಊಹಾಪೋಹಗಳು ಸುದ್ದಿಯಾಗುತ್ತಿವೆ. ಹೀಗೆ ಸಾಗುವ ಚಿತ್ರಕತೆ ಚಿಟ್ ಫಂಡ್ ನಂತಹ ವೈಟ್ ಕಾಲರ್ ಕ್ರೈಂಗಳನ್ನೂ ಸುತ್ತಿಬಂದು ಕೊನೆಯಲ್ಲಿ ಶ್ರೀವಾತ್ಸವ್ ಆತ್ಮಹತ್ಯೆ ಪ್ರಯತ್ನಮಾಡಿದ್ದಾ? ಅಥವಾ ಕೊಲೆಯ ಪ್ರಯತ್ನವಾ ಅನ್ನೋದು ತಿಳಿಯುತ್ತದೆ.

ಇದನ್ನೂ ಓದಿ : YEAR ENDER 2023: ಈ ವರ್ಷದ ಅತ್ಯಂತ ವಿವಾದಾತ್ಮಕ ಸಿನಿಮಾಗಳಿವು!

ಅದು ಹೇಗೆ ಏನು, ಶ್ರೀವಾತ್ಸವ್ ಮಕ್ಕಳ ಜೊತೆ ಯಾಕೆ ಕಠೋರವಾಗಿ ನೆಡೆದುಕೊಳ್ಳುತ್ತಿದ್ದ, ಈ ಎಲ್ಲ ವಿಷಯವನ್ನು ಸಿನಿಮಾದಲ್ಲಿ ನೋಡಿ ತಿಳಿಯೋದು ಉತ್ತಮ. ಚಿತ್ರ ಮೊದಲೇ ಹೇಳಿದಂತೆ ಹತ್ತು ಹಲವು ವಿಷಯಗಳನ್ನ ಹೊತ್ತ ಓವರ್ ಲೋಡ್ ಲಾರಿಯಂತಿದೆ. ಅದನ್ನು ನಿರ್ದೇಶಕರೊಂದಿಗೆ ಪಂಕಜ್ ತ್ರಿಪಾಠಿ ಕ್ಷೇಮವಾಗಿ ಶುರುವಿನಿಂದ ಕೊನೆಯವರೆಗೂ ತಂದು ನಿಲ್ಲಿಸಿದ್ದಾರೆ ಅನ್ನೋದು ನನ್ನ ಅನಿಸಿಕೆ.

ಸೂಕ್ಷ್ಮ ಸಂಗತಿಗಳು

Mahesh Ramanathan. Viraf Sarkar ಮುಂತಾದವರು ಬಂಡವಾಳ ಹೂಡಿರುವ ಈ ಸಿನಿಮಾಕ್ಕೆ Aniruddha Roy Chowdhury ಆಕ್ಸನ್ ಕಟ್ ಹೇಳಿದ್ದು, ಸಿನಿಮಾ ನೇರವಗಿ ಓಟಿಟಿ ಯಲ್ಲಿ ಡಿಸೆಂಬರ್-8 ರಂದು ಬಿಡುಗಡೆಯಾಗಿದೆ. ಚಿತ್ರ ಶೀರ್ಷಿಕೆಯಿಂದಲೋ, ಕಾಸ್ಟಿಂಗ್ ನಿಂದಲೋ ಭಾರಿ ನಿರೀಕ್ಷೆ ಹೊಂದಿದ್ದ ಸಿನಿಮಾ, ಸಿನಿಮಾಸಕ್ತರಿಗೆ ನಿರಾಸೆ ಮೂಡಿಸಿದೆ ಎಂದು ಬಾಲಿವುಡ್ ಅಂಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಚಿತ್ರದಲ್ಲಿ ತಳೆದಿರುವ ಸೂಕ್ಷ್ಮ ಸಂಗತಿಗಳು ಮನ ಮುಟ್ಟುತ್ತವೆ. ರೋಗಿಯಾದವನಿಗೆ ಬಾಸ್ be patient ಅಂದಾಗ i’m officially patient ಸರ್ ಅನ್ನೋ ಸಣ್ಣ ಹಾಸ್ಯ ಚಟಾಕಿಯಂಥ ಮಾತುಗಳು ಇಷ್ಟವಾಗುತ್ತವೆ. ಸದ್ಯ ಈ ಸೈಕಲಾಜಿಕ್ ಸಸ್ಪೆನ್ಸ್ ಸಿನಿಮಾ ‘ಖಡಕ್ ಸಿಂಗ್’ ZEE5 ನಲ್ಲಿ ಸ್ಟ್ರೀಮ್ ಆಗುತ್ತಿದ್ದು ಆಸಕ್ತರು ಕಾಣಬಹುದು.

Exit mobile version