Site icon Vistara News

Kiccha Sudeep: ಕನ್ನಡಿಗರ ಸ್ವಾಭಿಮಾನವೇ ಮುಖ್ಯ; ಫೋನ್ ಪೇ ಬ್ರ್ಯಾಂಡ್‌ ಅಂಬಾಸಿಡರ್ ಸ್ಥಾನ ತ್ಯಜಿಸುತ್ತಾರಾ ಕಿಚ್ಚ ಸುದೀಪ್?

Kiccha Sudeep

ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಭಾಗವಾಗಿ ʼಬಾಯ್ಕಾಟ್‌ ಫೋನ್‌ ಪೇ ʼ ಅಭಿಯಾನ ಕೂಡ ಶುರುವಾಗಿದ್ದು, ಈ ನಡುವೆ ಕನ್ನಡಿಗರ ಪರ, ಕನ್ನಡಿಗರ ಅಭಿಯಾನಕ್ಕೆ ನಟ ಕಿಚ್ಚ ಸುದೀಪ್‌ (Kiccha Sudeep) ಬೆಂಬಲ ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ನಾಡು-ನುಡಿಯ ವಿಚಾರ ಬಂದಾಗ ಸದಾ ಮುಂದಿರುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ʻʻಕಂಪನಿ, ಹಣಕ್ಕಿಂತ ಕನ್ನಡಿಗನಾಗಿ ನನ್ನ ಸ್ವಾಭಿಮಾನ ಮುಖ್ಯʼʼ ಎನ್ನುವುದು ಸುದೀಪ್ ಅವರ ನಿರ್ಧಾರವಾಗಿದೆ ಎನ್ನಲಾಗಿದೆ. ಈ ಕಾರಣದಿಂದ ಒಂದು ದಿನದ ಒಳಗಾಗಿ ಕಿಚ್ಚ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

ಕನ್ನಡಿಗರ ಮೀಸಲಾತಿಗೆ ಫೋನ್‌ ಪೇ ಕಂಪನಿ ಸಿಇಒ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸುದೀಪ್‌ ಅವರ ನಿರ್ಧಾರ ಏನಾಗುತ್ತದೆ ಅನ್ನೋದು ಹಲವರ ಪ್ರಶ್ನೆಯಾಗಿತ್ತು. ಕಿಚ್ಚ ಸುದೀಪ್ ಅವರು 2023ರಿಂದ ಫೋನ್‌ ಪೇ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಹೀಗಾಗಿ ಫೋನ್ ಪೇ ಕಂಪನಿ ಇನ್ನು ಒಂದು ದಿನದ ಒಳಗಾಗಿ ಕನ್ನಡಿಗರ ಕ್ಷಮೆ ಕೋರಿ, ರಾಜ್ಯ ಸರ್ಕಾರದ ನಿಲುವಿಗೆ ಬದ್ಧವಾಗದಿದ್ದರೆ ತಾವು ಫೋನ್ ಪೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮುಂದುವರೆಯದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

ಕನ್ನಡಿಗರಿಗೆ ಉದ್ಯೋಗ ಮೀಸಲು ಕುರಿತು ನೀಡಿರುವ ಹೇಳಿಕೆಗೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಕನ್ನಡಿಗರ ಕ್ಷಮೆ ಕೇಳಬೇಕು’ ಹಾಗೂ ಕನ್ನಡಿಗರಿಗೆ ಮೀಸಲಾತಿ ಪ್ರಕಾರ ಉದ್ಯೋಗ ನೀಡಬೇಕು ಎಂಬ ನಿಲುವಿಗೆ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಫೋನ್ ಪೇ ವಿರುದ್ಧ ಅಭಿಯಾನ ಜೋರಾಗಿದ್ದು. ಸಿಎಂ ಸಭೆ ಬಳಿಕ ನಿರ್ಧಾರ ಸುದೀಪ್‌ ಅವರು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸುದೀಪ್ ಆಪ್ತ ಬಳಗದಿಂದ ಮಾಹಿತಿ ಸಿಕ್ಕಿದೆ.

ಫೋನ್ ಪೇ ಬಾಯ್ಕಾಟ್ ಮಾಡುವಂತೆ ಅಭಿಯಾನ ಆರಂಭ

ಬೆಂಗಳೂರು: ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರಕ್ಕೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಕನ್ನಡಿಗರ ವಿಷಯದಲ್ಲಿ ಫೋನ್ ಪೇ ಸಿಇಒ ಸಮೀರ್ ನಿಗಮ್ ಉದ್ಧಟತನ ತೋರಿದ್ದಾರೆ. ಹೀಗಾಗಿ ಫೋನ್‌ ಪೇ ಆ್ಯಪ್ ಅನ್ನು ಯಾರೂ ಬಳಸಬೇಡಿ. 1 ರೇಟಿಂಗ್ ನೀಡಿದ ಬಳಿಕ ಆ್ಯಪ್ ಡಿಲಿಟ್ ಮಾಡುವಂತೆ ಅಭಿಯಾನ ಶುರು ಮಾಡಲಾಗಿದೆ.

ಇನ್ನು ಕೆಲ ನೆಟ್ಟಿಗರು, ಯಾರಾದರೂ ನನ್ನ ಹೆಸರಲ್ಲಿ ಫೋನ್ ಪೇ ಮಾಡಿ ಎಂದರೆ ಯಾರು ಮಾಡಬೇಡಿ. ಯಾಕೆಂದರೆ ನನ್ನ ಹತ್ತಿರ ಫೋನ್ ಪೇ ಇಲ್ಲ. ಕನ್ನಡಿಗರಿಗೆ ಕೆಲಸದಲ್ಲಿ ಮೀಸಲಾತಿ ಕೊಡುವುದಕ್ಕೆ ಎದುರು ಮಾಡಿರುವ ಫೋನ್‌ಪೇ ಸಿಇಒಗೆ ಬುದ್ಧಿ ಕಲಿಸಲು ಫೋನ್‌ಪೇ ಅನ್‌ಇನ್ಸ್ಟಾಲ್ ಮಾಡಿ. ಕನ್ನಡಿಗರ ಬಲ ತೋರಿಸಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Karnataka Jobs Reservation: ಕನ್ನಡಿಗರಿಗೆ ಮೀಸಲು ಕಡ್ಡಾಯ ಮಾಡಲು ಕಾನೂನು ಸಮಸ್ಯೆ: ಖರ್ಗೆ

Exit mobile version