ಬೆಂಗಳೂರು: ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ (Vikrant Rona) ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ “ರಾ… ರಾ… ರಕ್ಕಮ್ಮʼʼ ಸಾಂಗ್ ಹಾಗೂ ಸಿನಿಮಾದ ಟ್ರೈಲರ್ ಮೂಲಕ ಪ್ರಪಂಚದಾದ್ಯಂತ ಈ ಸಿನಿಮಾ ಹವಾ ಸೃಷ್ಟಿಸಿದ್ದು, ಎಲ್ಲರ ಬಾಯಲ್ಲಿಯೂ ಈ ಹಾಡು ಗುನುಗುತ್ತಿದೆ. ಜುಲೈ 28ಕ್ಕೆ ಸಿನಿಮಾ ನೋಡಿ ಕಣ್ತುಂಬಿಕೊಳ್ಳೊದೊಂದೇ ಬಾಕಿ ಎಂದು ತವಕಿಸುತ್ತಿರುವ ಅಭಿಮಾನಿ ಬಳಗಕ್ಕೆ ಕಿಚ್ಚನ ಅಂಗಳದಿಂದ ಮತ್ತೊಂದು ಸರ್‌ಪ್ರೈಸ್ ಸುದ್ದಿ ಬಂದಿದೆ. ವಿಕ್ರಾಂತ್ ರೋಣ ಸಿನಿಮಾ ಕೂಡ ಡಿಜಿಟಲ್ ಜಗತ್ತಿನಲ್ಲಿ ಈಗ ಭಾರಿ ಚರ್ಚೆಗೆ ಕಾರಣವಾಗಿರುವ ಮೆಟಾ ವರ್ಸ್ ಲೋಕಕ್ಕೆ ಕಾಲಿಡಲಿದೆ.
ಮೆಟಾವರ್ಸ್ ಅಥವಾ ಬಹು ಆಯಾಮದ ಡಿಜಿಟಲ್ ಜಗತ್ತನ್ನು ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣ ಸಿನಿಮಾ ಪ್ರವೇಶಿಸಲಿದ್ದು, ಕಿಚ್ಚ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ. ಭಾನುವಾರ (ಜು.೧೭) ರಂದು ‘ಕಿಚ್ಚ ವರ್ಸ್’ ಫ್ಲಾಟ್‌ಫಾರ್ಮ್‌ನ ಲಾಂಚ್ ಅನ್ನು ಕಿಚ್ಚ ಸುದೀಪ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಸಿನಿಮಾ ಎನ್‌ಎಫ್‌ಟಿ (NFT) ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಈಗಾಗಲೇ ಕನ್ನಡದ KGF 2 ಚಿತ್ರ ಎನ್‌ಎಫ್‌ಟಿ ಮಾರುಕಟ್ಟೆ ಪ್ರವೇಶಿಸಿತ್ತು. ಇದೀಗ ವಿಕ್ರಾಂತ್ ರೋಣ ಚಿತ್ರ ಕೂಡ ಡಿಜಿಟಲ್ ಲೋಕಕ್ಕೆ ಕಾಲಿಡುತ್ತಿದ್ದು, ೨ನೇ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕಾಗಿಯೇ ಕಿಚ್ಚ ಸುದೀಪ್ ಹೊಸ ಫ್ಲಾಟ್‌ಫಾರ್ಮ್ ಸೃಷ್ಟಿಸಿಕೊಂಡಿದ್ದಾರೆ. ಎನ್‌ಎಫ್‌ಟಿ ಮಾರುಕಟ್ಟೆಯಲ್ಲಿ ಪ್ರೀಮಿಯರ್ ಟಿಕೆಟ್ ಮತ್ತು ಸದಸ್ಯತ್ವವನ್ನು ನೀಡಲು ಮುಂದಾಗಿರುವ ಚಿತ್ರತಂಡ ಹೊಸ ಪ್ರಯೋಗವೊಂದನ್ನು ನಡೆಸಿದೆ. ಪ್ರಪಂಚದಲ್ಲಿಯೇ ಇದೇ ಮೊದಲ ಬಾರಿಗೆ ಎನ್‌ಎಫ್‌ಟಿ ಮೂಲಕ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
ಎನ್ಎಫ್‌ಟಿ ಮೆಂಬರ್‌ಶಿಪ್‌ಗಳಲ್ಲಿ ಸಿಲ್ವರ್, ಗೋಲ್ಡ್, ಪ್ಲಾಟಿನಂ ಹಾಗೂ ಡೈಮಂಡ್ ಎಂದು ವಿಭಾಗಿಸಲಾಗಿದೆ. ಇದನ್ನು ಪಡೆದ ಸದಸ್ಯರು ಪ್ರೀಮಿಯರ್ ಶೋ ವೇಳೆ ರೆಡ್-ಕಾರ್ಪೆಟ್ ಎಂಟ್ರಿ, ಸಿನಿಮಾದ ಎನ್ಎಫ್ ಟಿ ಲೋಗೊ, ವಿಶೇಷವಾದ ಪಾರ್ಟಿಗೆ ಆಹ್ವಾನ ಮತ್ತು ನಟರೊಂದಿಗೆ ಫೋಟೊ ಈ ರೀತಿ ಹಲವ ಆಫರ್‌ಗಳನ್ನು ಪಡೆಯಲಿದ್ದಾರೆ.
ಇದನ್ನೂ ಓದಿ | Vikrant Rona | ಪ್ರಲ್ಹಾದ ಜೋಶಿ ನಿವಾಸಕ್ಕೆ ಕಿಚ್ಚನ ಭೇಟಿ; 13 ವರ್ಷ ದೆಹಲಿಗೆ ಕಾಲಿಟ್ಟಿಲ್ಲವಂತೆ ಬಾದ್‌ಷಾ?
ಏನಿದು ಕಿಚ್ಚ ವರ್ಸ್?
ʼಕಿಚ್ಚ ವರ್ಸ್ʼ ಕಿಚ್ಚನ ವರ್ಚ್ಯುಲ್ ಜಗತ್ತಾಗಿದ್ದು, ಈ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸದಸ್ಯರು ಕಿಚ್ಚನ ಜತೆ ಮಾತನಾಡಬಹುದು. ಅವರ ಜತೆ ಸಮಯ ಕಳೆಯಬಹುದು. ಸುದೀಪ್ ಅವರೊಂದಿಗೆ ಕಾಲ ಕಳೆಯಲು ಕಿಚ್ಚ ವರ್ಸ್ ಅವಕಾಶ ಮಾಡಲಿದ್ದು, ಕಿಚ್ಚನ ಅಭಿಮಾನಿಗಳಿಗೆ ಇದು ತುಂಬಾನೇ ಖುಷಿ ಕೊಡಲಿದೆ. ಕಿಚ್ಚ ವರ್ಸ್ ಲೋಕವನ್ನು ಪ್ರವೇಶಿಸಲು ಮೆಂಬರ್ ಶಿಪ್ ಕಾರ್ಡ್ ಪ್ರತಿಯೊಬ್ಬರು ಹೊಂದಿರಬೇಕು ಎಂದು ಫ್ಲಾಟ್‌ಫಾರ್ಮ್ ಸೃಷ್ಟಿಸಿರುವ ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸ್ಥಾಪಕಿ ಪ್ರಿಯಾ ಸುದೀಪ್ ತಿಳಿಸಿದ್ದಾರೆ.
ಜುಲೈ 17 ಈ ಡಿಜಿಟಲ್ ಫ್ಲಾಟ್‌ಫರ್ಮ್‌ನಲ್ಲಿ ಸ್ಕೆಚ್ ಕಾಂಪಿಟೇಷನ್ ಆರಂಭವಾಗಿದ್ದು ವಿಕ್ರಾಂತ್ ರೋಣ ಚಿತ್ರದ ಅತ್ಯುತ್ತಮ ಸ್ಕೆಚ್ ಮಾಡಿದವರಿಗೆ ಮೆಂಬರ್ ಶಿಪ್ ನೀಡಲಾಗುತ್ತದೆ. ಇದಕ್ಕಾಗಿ ವಿಕ್ರಾಂತ್ ರೋಣ ಚಿತ್ರದ ಸ್ಕೆಚ್ ಬಿಡಿಸಿ kichchaverse.ioನಲ್ಲಿ ಅಪ್ ಲೋಡ್ ಮಾಡಬೇಕು. ಎನ್ ಎಫ್ ಟಿ ಡ್ರಾಪ್ ಕೂಡ ಜುಲೈ 24ರಿಂದ ನಡೆಯಲಿದೆ. ಹೀಗೆ ಎನ್ಎಫ್ ಟಿ ಯ ಕಿಚ್ಚ ವರ್ಸ್ ಹಲವಾರು ಇವೆಂಟ್‌ಗಳನ್ನು ಹೊಂದಿದ್ದು ಈ ಮೂಲಕ ತಮ್ಮ ನೆಚ್ಚಿನ ನಟನೊಂದಿಗೆ ಆತ್ಮೀಯವಾಗಿ ಕಾಲ ಕಳೆಯಲು ಅವಕಾಶ ಮಾಡಿಕೊಡಲಿದೆ.
ಎನ್ ಎಫ್ ಟಿ ಪ್ರೀಮಿಯರ್ ಶೋ
ಇನ್ನೊಂದು ಪ್ರಮುಖ ವಿಷಯವೆಂದರೆ ಜಗತ್ತಿನಲ್ಲಿಯೇ ಮೊದಲ ಬಾರಿ ಸಿನಿಮಾದ ಟಿಕೆಟ್ ಅನ್ನು ಎನ್ಎಫ್ ಟಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಟಿಕೆಟ್ ಖರೀದಿಸಿದವರಿಗೆ ಪ್ರೀಮಿಯರ್ ಶೋ ನಡೆಸಲಾಗುತ್ತಿದೆ. ಹೊರದೇಶಗಳಲ್ಲಿ ಕನ್ನಡ ಸಿನಿಮಾವನ್ನು ಈ ರೀತಿ ಪ್ರೀಮಿಯರ್ ಶೋ ನಡೆಸುತ್ತಿರುವುದು ಇದೇ ಮೊದಲು. ಜುಲೈ 27ಕ್ಕೆ ದುಬೈನಲ್ಲಿ ಈ ಪ್ರೀಮಿಯರ್ ಶೋ ನಡೆಯಲಿದೆ. ಇದೆಲ್ಲದಕ್ಕೂ ಈ ಪ್ರದರ್ಶನದಲ್ಲಿ ಸಿನಿಮಾ ನೋಡಲು ಮೆಂಬರ್‌ಶಿಪ್ ಪಡೆಯುವ ಅಗತ್ಯವಿದೆ ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸಿಇಒ ಜಾಕೀರ್ ಹುಸೇನ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು, ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ | Vikrant Rona | ವಿಕ್ರಾಂತ್ ರೋಣ ಎರಡನೇ ಹಾಡು ರಿಲೀಸ್: ರಾಜಕುಮಾರಿ ಲೋಕಕ್ಕೆ ಕೊಂಡೊಯ್ದ ಕಿಚ್ಚ