Site icon Vistara News

Kiccha Sudeep | ನಿಮಗೆ ಫಾಲೋಯಿಂಗ್ ಬೇಕು, ನೆಗೆಟಿವಿಟಿ ಮಾತ್ರ ಬೇಡ ಎಂದರೆ ಹೇಗೆ? ಕಿಚ್ಚ ಸುದೀಪ್‌ ಪ್ರಶ್ನೆ

Kiccha Sudeep

ಬೆಂಗಳೂರು: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅವರು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ʻಕಾಂತಾರʼ ಚಿತ್ರವನ್ನು ನೋಡಿಲ್ಲ ಎಂದು ಹೇಳಿಕೆ ನೀಡಿದ ನಂತರ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲಾಗಿದೆ ಎಂಬ ವದಂತಿಗಳು ಹರಿದಾಡಿದ್ದವು. ಈ ಬಗ್ಗೆ ತೆಲುಗು ಸಂದರ್ಶನವೊಂದರಲ್ಲಿ ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಕುರಿತು ಕಿಚ್ಚ ಸುದೀಪ್‌ (Kiccha Sudeep) ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾ, ದೃಶ್ಯ ಮಾಧ್ಯಮಗಳಿಂದಾಗಿ ಸೆಲೆಬ್ರೆಟಿಗಳು ಏನೇ ಮಾತನಾಡಿದರೂ ಅದು ಮತ್ತೇನೋ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರಿಂದ ಸೆಲೆಬ್ರೆಟಿಗಳು ಮಾತನಾಡಲು ಭಯಪಡುವಂತೆ ಆಗಿದೆಯಾ ಎನ್ನುವ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ.

ಪಬ್ಲಿಕ್ ಫಿಗರ್ ಅಂದಮೇಲೆ ಹಾರ, ಮೊಟ್ಟೆ, ಟೊಮೆಟೋ, ಕಲ್ಲು ಎಲ್ಲ ಬೀಳುತ್ತದೆ!
ʻʻನೀವು 15-20 ವರ್ಷಗಳ ಹಿಂದೆ ಹೋದರೆ, ನ್ಯೂಸ್ ಚಾನೆಲ್‌ಗಳು ನಮ್ಮನ್ನು ಸಂದರ್ಶಿಸುತ್ತಿದ್ದವು ಮತ್ತು ಆ ಸಮಯದಲ್ಲಿ ಅದು ತುಂಬಾ ಹೊಸದು. ಆದರೆ ಡಾ. ರಾಜ್‌ಕುಮಾರ್ ಅವರ ಕಾಲಕ್ಕೆ ಹೋದರೆ ದೂರದರ್ಶನ ಮತ್ತು ಪತ್ರಿಕೆಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಅದೇ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮಾಧ್ಯಮದ ಸುದ್ದಿಯಿಂದಾಗಿ ಎಲ್ಲವೂ ತಪ್ಪಾಗುತ್ತಿದೆ. ಅದನ್ನು ನಿಭಾಯಿಸಲು ನಾವು ಕಲಿಯಬೇಕು. ನಾವು ಯಾವಾಗಲೂ ಮುಂದುವರಿಯಬೇಕು. ಪಬ್ಲಿಕ್ ಫಿಗರ್ ಅಂದ ಮೇಲೆ ಹಾರ, ಮೊಟ್ಟೆ, ಟೊಮೆಟೋ, ಕಲ್ಲು ಎಲ್ಲಾ ಬೀಳುತ್ತವೆ. ನಮ್ಮ ಜನರೇಶನ್‌ನಲ್ಲಿ ಏನಾಯಿತು ಎನ್ನುವುದು ಸರಿ. ಈ ಜನರೇಶನ್‌ನಲ್ಲಿ ಏನಾಗುತ್ತಿದೆ ಎನ್ನುವುದು ಕೂಡ ಸರಿ. ನಾವು ಇದನ್ನು ಕಲಿಯಬೇಕು, ಹೇಗೆ ನಿಭಾಯಿಸಬೇಕು ಎಂದು ಗೊತ್ತಿರಬೇಕುʼʼಎಂದು ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ | Rashmika Mandanna | ಎಲ್ಲವೂ ಪ್ರಾರಂಭವಾದ ದಿನ ಎಂದು ʻಕಿರಿಕ್‌ ಪಾರ್ಟಿʼ ಸಿನಿಮಾ ಪೋಸ್ಟರ್‌ ಹಂಚಿಕೊಂಡ ರಶ್ಮಿಕಾ ಮಂದಣ್ಣ!

Kiccha Sudeep

ಸರಿಯಾಗಿ ಮಾತನಾಡಲು ಕಲಿಯಬೇಕು
ಮಾತು ಮಂದುವರಿಸಿದ ಕಿಚ್ಚ ಸುದೀಪ್‌ ʻʻಮೊದಲು ಸರಿಯಾಗಿ ಮಾತನಾಡಲು ಕಲಿಯಬೇಕು. ಸನ್ನಿವೇಶಗಳನ್ನೆಲ್ಲ ನಿಭಾಯಿಸಲು ಕಲಿಯಬೇಕು. ನೀವು ಧೈರ್ಯದಿಂದ ಇದ್ದರೆ ಇದು ನಿಮಗೆ ಮತ್ತಷ್ಟು ಒಳ್ಳೆಯದನ್ನು ಮಾಡುತ್ತದೆ. ಮೊಬೈಲ್ ಮಾತ್ರ ಬೇಕು, ಸೋಷಿಯಲ್ ಮೀಡಿಯಾ ಬೇಕು. ಅದರಲ್ಲಿ ಅಕೌಂಟ್ ಕೂಡ ಬೇಕು. 2 ಮಿಲಿಯನ್, 10 ಮಿಲಿಯನ್ ಫಾಲೋಯಿಂಗ್ ಕೂಡ ಬೇಕು. ಆದರೆ ಈ ನೆಗೆಟಿವಿಟಿ ಮಾತ್ರ ಬೇಡ ಎಂದರೆ ಹೇಗೆ ಎಂದು ಸುದೀಪ್‌ ಪ್ರಶ್ನಿಸಿದ್ದಾರೆ.

ನನ್ನ ರೀತಿ ಸುಮ್ಮನಾಗಿ, ಕಮೆಂಟ್ಸ್ ಓದಲು ಹೋಗಬೇಡಿ!
“ಟ್ವಿಟರ್‌ನಲ್ಲಿ ಒಂದು ಪೋಸ್ಟ್ ಹಾಕಿದರೆ ಸಾವಿರ ಕಮೆಂಟ್‌ಗಳು ಬರುತ್ತವೆ. ಅದರಲ್ಲಿ 700 ಪಾಸಿಟಿವ್, 300 ನೆಗೆಟಿವ್ ಬರುತ್ತದೆ ಎಂದಿಟ್ಟುಕೊಳ್ಳಿ. ನೆಗೆಟಿವ್ ಯಾಕೆ ಬೇಕು, ಯಾಕೆಂದರೆ ಯಾರೊಬ್ಬರೂ ನೆಗೆಟಿವ್ ಮಾತನಾಡಬಾರದು ಎನ್ನುತ್ತೀರಾ. ಪ್ರತಿಯೊಬ್ಬರಿಗೂ ಎರಡೆರಡು ಅಭಿಪ್ರಾಯ ಇರುತ್ತದೆ. ಇದು ಬೇಡ ಎಂದರೆ ಸೋಷಿಯಲ್ ಮೀಡಿಯಾದಿಂದ ದೂರ ಇದ್ದುಬಿಡಿ. ಅದು ಉತ್ತಮ. ಇಲ್ಲದಿದ್ದರೆ ನನ್ನ ರೀತಿ ಸುಮ್ಮನಾಗಿ. ಕಮೆಂಟ್ಸ್ ಓದಲು ಹೋಗಬೇಡಿ” ಎಂದು ತೆಲುಗು ಯೂಟ್ಯೂಬ್ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ.

Kiccha Sudeep

ಕಿಚ್ಚ ಸುದೀಪ್‌ ಚಂದ್ರು ನಿರ್ದೇಶನದ ರಿಯಲ್‌ ಸ್ಟಾರ್‌ ಉಪೇಂದ್ರ ನಾಯಕನಾಗಿ ಕಾಣಿಸಿಕೊಂಡಿರುವ ʻಕಬ್ಜʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ದಳಪತಿ ವಿಜಯ್‌ ಜತೆ ʻವಾರಿಸುʼ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಜನವರಿ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ | Rashmika Mandanna | ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಚೇರಿ ಎದುರು ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ!

Exit mobile version