ಬೆಂಗಳೂರು: ಇಂದು ಮಧ್ಯಾಹ್ನ ರಾಜಧಾನಿಯ ಕ್ಯಾಪಿಟಲ್ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯಾಹ್ನ 1.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದು, ಈ ಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಅವರ ಬಿಜೆಪಿ ಸೇರ್ಪಡೆಯನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಬಸವರಾಜ್ ಬೊಮ್ಮಾಯಿ, ನಟ ಸುದೀಪ್‌ಗಾಗಿಯೇ ಸುದ್ದಿಗೋಷ್ಠಿ ಕರೆದಿದ್ದಾರೆ. ಅಧ್ಯಕ್ಷರಾದ ಬಳಿಕ ಸಿನಿಮಾ ಸ್ಟಾರ್ ನಟರಿಗೆ ಸಿಎಂ ಗಾಳ ಹಾಕುತ್ತಿದ್ದರು. ಬೊಮ್ಮಾಯಿ ಜೊತೆಗೆ ಕಿಚ್ಚ ಸುದೀಪ್ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಹೀಗಾಗಿ ಪ್ರಾರಂಭದಲ್ಲೇ ಆತ್ಮೀಯ ನಟನನ್ನು ಪಕ್ಷಕ್ಕೆ ಬರಮಾಡಿಕೊಂಡು, ಸುದೀಪ್‌ರನ್ನು ಸ್ಟಾರ್ ಕ್ಯಾಂಪೇನರ್ ಆಗಿ ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ರೂಪಿಸಿದೆ ಎಂದು ಹೇಳಲಾಗಿದೆ.
ಸುದೀಪ್ ಅವರನ್ನ ಬಿಜೆಪಿಗೆ ಕರೆ ತರಲು ಹಲವು ಕಾಲದಿಂದ ಪ್ರಯತ್ನ ನಡೆಯುತ್ತಿತ್ತು. ತೆರೆಮರೆಯಲ್ಲಿ ಅನೇಕ ಸಚಿವರು ಮತ್ತು ಸಿಎಂ ಕೂಡ ಈ ಬಗ್ಗೆ ಸುದೀಪ್ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ನೇರವಾಗಿ ರಾಜಕೀಯಕ್ಕೆ ಧುಮುಕುವ ಬಗ್ಗೆ ಸುದೀಪ್ ಅವರಿಗೆ ಯಾವುದೇ ಒಲವು ಇಲ್ಲವಾದರೂ, ಆಪ್ತರಾದ ಬೊಮ್ಮಾಯಿ ಅವರ ಬೇಡಿಕೆಯನ್ನು ನಿರಾಕರಿಸಲಾಗದೆ ಪ್ರಚಾರಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಕುರಿತಾದ ಧ್ವನಿ ಸುರುಳಿ ಬಿಡುಗಡೆಯಾಗುವ ಸಾಧ್ಯತೆಯೂ ಇದೆ.