ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeep) ನಿರ್ಮಾಪಕ ಎಮ್ ಎನ್ ಕುಮಾರ್ (MN Kumar) ವಿರುದ್ಧ ಕ್ರಿಮಿನಲ್ ಮಾನನಷ್ಟ ದೂರು ಸಲ್ಲಿಸಿದ್ದಾರೆ. ಎಸಿಎಂಎಂ ನ್ಯಾಯಾಲಯಕ್ಕೆ ಕಿಚ್ಚ ಸುದೀಪ್ ಹಾಜರಾಗಿದ್ದು, ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ (Defamation) ಕೇಸ್ ಹೂಡಿದ್ದಾರೆ. ಯಾವ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಕೋರ್ಟ್‌ಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಎಮ್ ಎನ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಎಮ್ ಎನ್ ಕುಮಾರ್ ಮಾತನಾಡಿ ʻʻಸುದೀಪ್ ಅವರು ನ್ಯಾಯಾಲಕ್ಕೆ ಹೋಗಿದ್ದಾರೆ ಎಂಬುದು ಗೊತ್ತಾಗಿದ್ದೇ ನಿಮ್ಮಿಂದ (ಮಾಧ್ಯಮ). ಯಾವ ವಿಚಾರಕ್ಕೆ ಅವರು ಕೋರ್ಟ್ ಹೋಗಿದ್ದಾರೆ ಗೊತ್ತಿಲ್ಲ . ನನಗೆ ನೋಟಿಸ್ ಬಂದಮೇಲೆ ಗೊತ್ತಾಗುತ್ತದೆ. ನಾನು ಸುದೀಪ್ ಅವರ ವಿರುದ್ಧ ಆರೋಪ ಮಾಡಿಲ್ಲ. ಸುದೀಪ್ ಪತ್ರ ಬಂದಿದ್ದು ಏಳನೇ ತಾರೀಖು. ನಾನು ರಿಸೀವ್ ಮಾಡಿದ್ದು 13ನೇ ತಾರೀಖು. ನಾನು ಆ ಪತ್ರಕ್ಕೆ ಜುಲೈ 14ರಂದು ಉತ್ತರ ಕೊಟ್ಟಿದ್ದೇನೆ. ಅವರು ಕೊಟ್ಟ ನೋಟಿಸ್ ಇಂಗ್ಲೀಷ್‌ನಲ್ಲಿತ್ತು. ನನಗೆ ಕನ್ನಡದಲ್ಲಿ ತಿಳಿಸಿ ಎಂದು ಹೇಳಿದ್ದೆ. ನಾನು ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿವೆ. ನಾನು ಯಾರದೋ ಮಾತನ್ನು ಕೇಳಿಕೊಂಡು ಅರೋಪ ಮಾಡುವವನಲ್ಲ. ನಾನು ಡಿಸೆಂಬರ್‌ನಲ್ಲಿ ವಾಣಿಜ್ಯ ಮಂಡಳಿಗೆ ಮನವಿ ಕೊಟ್ಟಿದ್ದೆ. ವಾಣಿಜ್ಯ ಮಂಡಳಿಗೆ ಬನ್ನಿ ಎಂದು ನಾನು ಕೇಳಿದ್ದೇ ವಿನಃ ಆರೋಪ ಮಾಡಿಲ್ಲ. ನಾನು ಸುದೀಪ್ ಅವರ ಬಳಿ ಚಾರಿಟಿ ಕೇಳಿಲ್ಲ. ನನಗೂ ಅವರಿಗೂ ಏನು ಒಪ್ಪಂದ ಆಗಿದೆ ಅದನ್ನಷ್ಟೇ ಕೇಳುತ್ತೇನೆʼʼಎಂದರು.
ಇದನ್ನೂ ಓದಿ: Kichcha Sudeep : ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕಿಚ್ಚ ಸುದೀಪ್; ನಟನ ಫಸ್ಟ್ ರಿಯಾಕ್ಷನ್!
ʻನನಗೆ ನೋಟಿಸ್ ಬಂದರೆ ಖಂಡಿತ ಕೋರ್ಟ್‌ಗೆ ಹೋಗುತ್ತೇನೆ. ಆದರೆ ನಾನು ವಾಣಿಜ್ಯ ಮಂಡಳಿಯಲ್ಲೇ ಇತ್ಯರ್ಥ ಮಾಡಿಕೊಳ್ಳುವೆ. ಯಾವುದೇ ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥ ಮಾಡ್ಕೊಂಡರೆ ಒಳ್ಳೆಯದು. ಈ ವಿಚಾರವನ್ನು ನಾನು ಈಗಾಗಲೇ ಶಿವಣ್ಣ ಅವರ ಗಮನಕ್ಕೆ ತಂದಿದ್ದೇನೆ. ಇವತ್ತು (ಜುಲೈ 15) ವಾಣಿಜ್ಯ ಮಂಡಳಿಯಲ್ಲಿ ಮೀಟಿಂಗ್ ಇದೆ. ಮೀಟಿಂಗ್ ನಂತರ ಶಿವಣ್ಣನನ್ನು ಭೇಟಿ ಮಾಡುತ್ತೇನೆ. ನಾನು ಸೂರಪ್ಪ ಬಾಬು ಅವರಿಗಿಂತ ಮುಂಚೆ ನಿರ್ಮಾಪಕ ಅದವನು. ಸೂರಪ್ಪ ಬಾಬು ನನ್ನ ಸ್ನೇಹಿತ ನನಗೆ ಒಂದಷ್ಟು ಸಲಹೆ ಕೊಡ್ತಾರೆ ಅಷ್ಟೇ. ವಾಣಿಜ್ಯ ಮಂಡಳಿಯಲ್ಲಿ ಕೂತು ಮಾತನಾಡೋಣ ಬನ್ನಿ ಎಂದು ಕರೆದರೂ ಅವರು ಬರಲಿಲ್ಲ. ಕೋರ್ಟಿಗೆ ಹೋಗಿದ್ದಾರೆ. ನಾನು ಈ ಕುರಿತು ನನ್ನ ವಕೀಲರನ್ನು ಸಂಪರ್ಕಿಸುತ್ತೇನೆʼʼ ಎಂದು ಎಮ್ ಎನ್ ಕುಮಾರ್ ಹೇಳಿದರು .